ಗರ್ಭಗುಡಿಗೆ ಈಶ್ವರಾನಂದ ಶ್ರೀಗೆ ಪ್ರವೇಶ ನಿರಾಕರಣೆ: ಭಾರಿ ವಿವಾದ

| Published : Feb 04 2024, 01:32 AM IST / Updated: Feb 04 2024, 01:46 PM IST

Eshwaranandapuri Shree

ಸಾರಾಂಶ

ನಾವು ಮರಳಿದ ಬಳಿಕ ದೇವಸ್ಥಾನವನ್ನೇ ತೊಳೆದಿದ್ದಾರೆ ಎಂದು ಈಶ್ವರಾನಂದ ಶ್ರೀಗಳು ಆರೋಪ ಮಾಡಿದ್ದಾರೆ. ಈ ಕುರಿತು ವರದಿ ಕೇಳಿದ ರಾಜ್ಯ ಸರ್ಕಾರಕ್ಕೆ ಆರೋಪ ನಿರಾಕರಿಸಿದ ಹೊಸದುರ್ಗ ಗ್ರಾಮಸ್ಥರು ಬೇರೆ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

‘ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬಾಗೂರು ಚನ್ನಕೇಶವ ದೇವಸ್ಥಾನಕ್ಕೆ ಇತ್ತೀಚೆಗೆ ವೈಕುಂಠ ಏಕಾದಶಿಯಂದು ಭೇಟಿ ನೀಡಿದ್ದಾಗ ದೇವಾಲಯದ ಗರ್ಭಗುಡಿ ಪ್ರವೇಶಿಸಲು ನಮಗೆ ಅವಕಾಶ ನೀಡಿರಲಿಲ್ಲ. 

ಆದರೆ, ಅಲ್ಲಿನ ಪೂಜಾರಿಗಳ ಕುಟುಂಬದ ಹೆಣ್ಣುಮಕ್ಕಳಿಗೆ ಅವಕಾಶ ನೀಡಿದ್ದರು. ಅಲ್ಲದೆ, ಅಲ್ಲಿಂದ ನಾವು ವಾಪಸ್ಸಾದ ನಂತರ ಇಡೀ ದೇವಸ್ಥಾನವನ್ನೇ ತೊಳೆದರು ಎಂಬ ಸಂಗತಿ ಗೊತ್ತಾಯಿತು’ ಎಂಬುದಾಗಿ ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಆರೋಪಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಈ ಬಗ್ಗೆ ಇಲಾಖೆಯ ಆಯುಕ್ತರಿಂದ ವರದಿ ಕೇಳಿದ್ದೇನೆ. ಒಂದು ವೇಳೆ, ಶ್ರೀಗಳು ಭೇಟಿ ನೀಡಿದ್ದಕ್ಕೆ ಗರ್ಭಗುಡಿ ಶುಚಿಗೊಳಿಸಿದ್ದರೆ ಅದು ತಪ್ಪು ಎಂದಿದ್ದಾರೆ. 

ಇದೇ ವೇಳೆ, ಚಿತ್ರದುರ್ಗದಲ್ಲಿ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ ಕರುನಾಡ ವಿಜಯಸೇನೆ ಕಾರ್ಯಕರ್ತರು, ಗರ್ಭಗುಡಿ ತೆರವುಗೊಳಿಸಿ, ಅಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವಂತೆ ಆಗ್ರಹಿಸಿದ್ದಾರೆ.

ಈ ಮಧ್ಯೆ, ಶ್ರೀಗಳ ಆರೋಪವನ್ನು ಗ್ರಾಮಸ್ಥರು ನಿರಾಕರಿಸಿದ್ದು, ದೇಗುಲದಲ್ಲಿ ಅಸ್ಪೃಶ್ಯತೆ ಆಚರಣೆಯಿಲ್ಲ. ಮೂವರು ಸ್ವಾಮೀಜಿಗಳು ಬಂದಾಗಲೇ ಏಕಾದಶಿಯ ವಿಶೇಷ ಪೂಜೆ ಮಾಡಿಸಲಾಯಿತು. ಗರ್ಭಗುಡಿ ಒಳಗಡೆ ಹೋಗಬೇಡಿ ಎಂದು ಯಾರಿಗೂ ಹೇಳಿಲ್ಲ ಎಂದಿದ್ದಾರೆ.

ವಿವಾದದ ಬೆನ್ನಲ್ಲೇ ಶನಿವಾರ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಶ್ರೀ ಹಾಗೂ ಕುಂಚಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಈಶ್ವರಾನಂದಪುರಿ ಶ್ರೀ, ಗ್ರಾಮಸ್ಥರಿಗೂ, ಈ ಘಟನೆಗೂ ಸಂಬಂಧವಿಲ್ಲ. 

ದೇವಸ್ಥಾನದ ಅರ್ಚಕರ ಕುಟುಂಬಸ್ಥರಿಂದ ಅಚಾತುರ್ಯ ನಡೆದಿದೆ. ಈ ವಿವಾದ ಬೆಳೆಸಲು ನಮಗೆ ಇಷ್ಟವಿಲ್ಲ. ಅಧಿಕಾರಿಗಳು ಹಾಗೂ ಗ್ರಾಮಸ್ಥರನ್ನು ಸೇರಿಸಿ ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಿವಾದವೇನು?
ಸಾಣೆಹಳ್ಳಿಯಲ್ಲಿ ಆರಂಭಗೊಂಡ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ‘ಮಠಗಳ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕೊಡುಗೆ’ ವಿಷಯದ ಮೇಲಿನ ಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಾನಂದ ಶ್ರೀ, ಸ್ವಾಭಿಮಾನಕ್ಕೆ ಧಕ್ಕೆಯಾದ ಜಾಗಕ್ಕೆ ಹೋಗಬಾರದು. 

ಇತ್ತೀಚೆಗೆ, ವೈಕುಂಠ ಏಕಾದಶಿಯಂದು ಬಾಗೂರು ದೇವಸ್ಥಾನಕ್ಕೆ ಹೋದಾಗ ಗರ್ಭಗುಡಿಗೆ ನಮ್ಮನ್ನು ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ವಾಪಸ್ಸಾದ ನಂತರ ಇಡೀ ದೇವಸ್ಥಾನವನ್ನೇ ತೊಳೆದರು ಎಂಬ ಸಂಗತಿ ಗೊತ್ತಾಯಿತು. 

ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದೆಂದು ಗೊತ್ತಾಗಲಿಲ್ಲ. ಮೊದಲೇ ಗೊತ್ತಿದ್ದರೆ ನಮ್ಮನ್ನೇಕೆ ಬಿಡಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದೆವು. ಇನ್ನು ಆ ದೇವಸ್ಥಾನಕ್ಕೆ ಹೋಗಲ್ಲ ಎಂದಿದ್ದರು.

ಈ ಮಧ್ಯೆ, ಬಾಗೂರು ಚನ್ನಕೇಶವ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆಯಿದೆ ಎಂಬ ಕನಕ ಶ್ರೀಗಳ ಆರೋಪವನ್ನು ಗ್ರಾಮಸ್ಥರು ನಿರಾಕರಿಸಿದ್ದು, ಸ್ವಾಮೀಜಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಜಾತಿ ಜನಾಂಗದವರು ವಾಸವಿದ್ದಾರೆ. ಏಕಾದಶಿ ಸಂದರ್ಭದಲ್ಲಿ ಶ್ರೀಗಳು ಬಂದಾಗ ಯಾವುದೇ ಜಾತಿ ಪದ್ಧತಿ ವ್ಯವಸ್ಥೆ ನಡೆದಿಲ್ಲ. ಮೂವರು ಸ್ವಾಮೀಜಿಗಳು ಬಂದಾಗಲೇ ಏಕಾದಶಿಯ ವಿಶೇಷ ಪೂಜೆ ಮಾಡಿಸಲಾಯಿತು. 

ಇಲ್ಲಿ ಯಾರನ್ನೂ ಗರ್ಭಗುಡಿ ಒಳಗಡೆ ಹೋಗಬೇಡಿ ಎಂದು ಯಾರಿಗೂ ಹೇಳಿಲ್ಲ. ಶ್ರೀಗಳು ಈ ರೀತಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಶ್ರೀಗಳ ಹೇಳಿಕೆಯಿಂದ ನಮ್ಮ ಗ್ರಾಮಸ್ಥರಿಗೆ ತುಂಬಾ ನೋವಾಗಿದೆ. 

ಕಳೆದ ಐದಾರು ವರ್ಷಗಳಿಂದಲೂ ಶ್ರೀಗಳು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಅಂದು ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.ವಿವಾದದ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಈಶ್ವರಾನಂದಪುರಿ ಶ್ರೀ, ದೇಗುಲ, ಮಠ, ಮಂದಿರಗಳಲ್ಲಿ ಜಾತಿ‌ ಅಸಮಾನತೆ ಜೀವಂತವಾಗಿದೆ.

 ಪೂಜಾರಿ ಪರಿವಾರದ ಮಹಿಳೆಯರಿಗೆ‌ ದೇಗುಲ ಪ್ರವೇಶವಿದೆ. ಆದರೆ‌, ಶೋಷಿತ‌ ಸಮುದಾಯದವರಿಗೆ ಯಾಕೆ ಪ್ರವೇಶವಿಲ್ಲ‌ ಎಂಬ ಚರ್ಚೆ ವಿಷಯವಾಗಿ ಗೋಷ್ಠಿಯಲ್ಲಿ ಮಾತನಾಡಿದ್ದೇನೆ. 

ದೇವಸ್ಥಾನವನ್ನು ಏಕಾದಶಿಯಂದು ಸ್ವಚ್ಛತೆಗೊಳಿಸಿಲ್ಲ. ಆ ವಿಚಾರ ಹಳೆಯದು. ಇದನ್ನು ಯಾರೋ‌ ನನಗೆ‌ ಹೇಳಿದ್ದ‌ ಹಿನ್ನೆಲೆಯಲ್ಲಿ‌‌ ಆತಂಕ‌ ವ್ಯಕ್ತಪಡಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು.