ಸಾರಾಂಶ
ಶಿವಮೊಗ್ಗ : ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಸಚಿವ ಈಶ್ವರಪ್ಪ ಅವರು ತಮ್ಮ ಪ್ರಚಾರ ಸಭೆಗಳಲ್ಲಿ ಮೋದಿಯವರ ಫೋಟೋ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ರಾಘವೇಂದ್ರ, ವಿಪಕ್ಷ ನಾಯಕ ಅಶೋಕ್ ಮತ್ತಿರರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಭಾವಚಿತ್ರ ಬಳಕೆ ಮಾಡಿಕೊಳ್ಳಲು ಎನ್‌ಡಿಎ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾನು. ನಮ್ಮ ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರನ್ನು ನಾವು ಉಪಯೋಗಿಸಿಕೊಳ್ಳಬೇಕೇ ವಿನಃ ಬೇರೆಯವರು ಉಪಯೋಗಿಸಿಕೊಳ್ಳಲು ಬರಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಈ ಮಧ್ಯೆ, ರಾಘವೇಂದ್ರ ಆಕ್ಷೇಪವನ್ನು ಖಂಡಿಸಿರುವ ಈಶ್ವರಪ್ಪ, ಮೋದಿ ಯಾರೊಬ್ಬರ ಆಸ್ತಿಯೂ ಅಲ್ಲ. ಅವರು ನನ್ನ ದೇವರು, ಗೆದ್ದ ಬಳಿಕ ಅವರನ್ನೇ ಬೆಂಬಲಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದಲ್ಲಿ ಈ ಸಂಬಂಧ ಕೇವಿಯೇಟ್ ಸಲ್ಲಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಪಾರ್ಟಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೇಘರಾಜ್ ಅವರು, ಮೋದಿಯವರು ಬಿಜೆಪಿಯ ಆಸ್ತಿ. ಹೀಗಾಗಿ, ನಾವು ಈ ಸಂಬಂಧ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.
ಈಶ್ವರಪ್ಪಗೆ ಅಧಿಕಾರವಿಲ್ಲ-ಅಶೋಕ್
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ. ಸರ್ಕಾರಿ ಕಾರ್ಯಕ್ರಮಗಳಿದ್ದರೆ ಪ್ರಧಾನಿಗಳ ಫೋಟೋ ಬಳಕೆ ಮಾಡಿಕೊಳ್ಳಬಹುದು. ಆದರೆ, ರಾಜಕೀಯವಾಗಿ ಚುನಾವಣೆ ವೇಳೆ ಬಿಜೆಪಿ ಮಾತ್ರ ನರೇಂದ್ರ ಮೋದಿ ಫೋಟೋ ಬಳಕೆಗೆ ಅಧಿಕಾರ ಇದೆ. ಈಶ್ವರಪ್ಪ ಅವರು ಅನಧಿಕೃತವಾಗಿ ಮೋದಿಯವರ ಫೋಟೋ ಬಳಕೆ ಮಾಡಿಕೊಳ್ಳುತ್ತಿದ್ದು, ಪಕ್ಷದ ಕಾನೂನು ಘಟಕ ಮೂಲಕ ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮೋದಿ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ನಾಯಕ: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಕೇವಲ ದೇಶಕ್ಕೆ ಮಾತ್ರ ನಾಯಕತ್ವ ನೀಡಿಲ್ಲ. ಬದಲಿಗೆ ವಿಶ್ವಕ್ಕೆ ನಾಯಕತ್ವ ಕೊಟ್ಟವರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದ್ದಾರೆ.ಬೆಂಗಳೂರಿನಲ್ಲಿ ಶನಿವಾರ ಬಿಜೆಪಿಯ 44ನೇ ಸಂಸ್ಥಾಪನಾ ದಿನ ಪ್ರಯುಕ್ತ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬುದೆಲ್ಲಾ ಸುಳ್ಳು. ಅಲ್ಪಸಂಖ್ಯಾತ ಮಹಿಳೆಯರಿಗೆ ಗೌರವ ಸಿಗಬೇಕು ಎಂಬ ಕಾರಣಕ್ಕಾಗಿ ತ್ರಿವಳಿ ತಲಾಖ್ ರದ್ದು ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ವರ್ಗದವರನ್ನು ಸಮನಾಗಿ ಕಾಣುತ್ತಾರೆ ಎಂದರು.
ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನರೇಂದ್ರ ಮೋದಿಯವರು ನೀಡಿದ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕು. ಯೋಧರ ರೀತಿಯಲ್ಲಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ನೋಡುವುದಕ್ಕೆ ಬಹಳ ದಿನಗಳು ದೂರ ಇಲ್ಲ. ಬಿಜೆಪಿ- ಜೆಡಿಎಸ್ 28 ಕ್ಷೇತ್ರಗಳಲ್ಲಿ ಗೆಲ್ಲುವ ವಾತವರಣ ಇದೆ. ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತನೆ ಮಾಡಬೇಕು ಎಂದು ಕರೆ ನೀಡಿದರು.
ದೇಶಾದ್ಯಂತ ಕಿರುದೇಣಿಗೆ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ನಮೋ ಆಪ್ ಮೂಲಕ ಭಾಗವಹಿಸಬೇಕು. ಎಷ್ಟಾದರೂ ಸರಿ ದೇಣಿಗೆ ನೀಡಬೇಕು. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ 18 ಕೋಟಿಗೂ ಹೆಚ್ಚು ಸದಸ್ಯರ ಹೊಂದಿರುವುದರ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಕ್ಷ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ಪಕ್ಷದ ಸಿದ್ದಾಂತದಲ್ಲಿ ಎಲ್ಲಿಯೂ ಕೂಡ ರಾಜೀ ಮಾಡಿಕೊಳ್ಳುವುದಿಲ್ಲ. ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಹೋಗುತ್ತಿರುವ ಪಕ್ಷ ಬಿಜೆಪಿ ಆಗಿದೆ ಎಂದು ಹೇಳಿದರು.