ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ, ಕರ್ನಾಟಕ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಈಶ್ವರಪ್ಪ ಹಂಚಿನಾಳರ ಕುರಿತಾದ ಬದುಕಿನ ಪಯಣ ಚಿತ್ರ ಸಂಪುಟ ಲೋಕಾರ್ಪಣೆ ಹಾಗೂ ಗೌರವ ಸಂಮಾನ ಕಾರ್ಯಕ್ರಮ ಜ. 3ರಂದು ಬೆಳಗ್ಗೆ 10 ಗಂಟೆಗೆ ಮುಂಡರಗಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಆವರಣದಲ್ಲಿ ಜರುಗಲಿದೆ.

ಮುಂಡರಗಿ: ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರಗತಿಪರ ರೈತ, ಕರ್ನಾಟಕ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಈಶ್ವರಪ್ಪ ಹಂಚಿನಾಳರ ಕುರಿತಾದ ಬದುಕಿನ ಪಯಣ ಚಿತ್ರ ಸಂಪುಟ ಲೋಕಾರ್ಪಣೆ ಹಾಗೂ ಗೌರವ ಸಂಮಾನ ಕಾರ್ಯಕ್ರಮ ಜ. 3ರಂದು ಬೆಳಗ್ಗೆ 10 ಗಂಟೆಗೆ ಮುಂಡರಗಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಆವರಣದಲ್ಲಿ ಜರುಗಲಿದೆ ಎಂದು ಸ್ವಾಮಿ ವಿವೇಕಾನಂದ ಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ವಿ. ಪಾಟೀಲ ತಿಳಿಸಿದರು.ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ-ವಿಜಯಪುರ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಹುಬ್ಬಳ್ಳಿ ವಿ.ಆರ್.ಎಲ್. ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಜಯ ಸಂಕೇಶ್ವರ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ವಿ. ಶಿರೂರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಸಹಕಾರ ಇಲಾಖೆ ವಿಶ್ರಾಂತ ಸಂಯುಕ್ತ ನಿಬಂಧಕ ಎಸ್.ಎಸ್. ಬೀಳಗೀಪೀರ ಆಗಮಿಸಲಿದ್ದಾರೆ.

ಬದುಕಿನ ಪಯಣ ಚಿತ್ರ ಸಂಪುಟದ ಸಂಪಾದಕ ಡಾ. ನಿಂಗು ಸೊಲಗಿ ಮಾತನಾಡಿ, ಈ ಚಿತ್ರ ಸಂಪುಟದಲ್ಲಿ ಈಶ್ವರಪ್ಪ ಹಂಚಿನಾಳ ಅವರ ರಾಜಕೀಯ, ಸ್ವಾಮೀಜಿ ಹಾಗೂ ಮಠಾಧೀಶರೊಂದಿಗಿನ ನಂಟು, ಹಂಚಿನಾಳ ಅವರ ಕೃಷಿ ಸಾಧನೆ, ಕೃಷಿ ನಂಟು, ಹಂಚಿನಾಳ ಅವರಿಗೆ ಬಂದ ಪ್ರಶಸ್ತಿಗಳು, ಅವರ ತುಂಬು ಕುಟುಂಬ ಸೇರಿದಂತೆ ಒಟ್ಟು 9 ವಿಭಾಗಗಳನ್ನಾಗಿ ಮಾಡಲಾಗಿದೆ ಎಂದರು.

ಸ್ವಾಮಿ ವಿವೇಕಾನಂದ ಶಾಲೆ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಎಲ್ಲರಿಂದಲೂ ದೂರವಾಗುತ್ತಿರುವ ಕೃಷಿ ಇಂದಿನ ಯುವ ಜನತೆಗೆ ಮನವರಿಕೆಯಾಗಬೇಕು ಎನ್ನುವ ಮಹದಾಸೆ ಈಶ್ವರಪ್ಪ ಹಂಚಿನಾಳ‍ ಅವರದ್ದಾಗಿದ್ದು, ಅದನ್ನು ಈ ಚಿತ್ರ ಸಂಪುಟದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ. ಸೀತಾರಾಮರಾಜು, ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಉಪಸ್ಥಿತರಿದ್ದರು.