ಈಶ್ವರಪ್ಪ ಸಾಮಾಜಿಕ ವ್ಯವಸ್ಥೆಗೇ ಧಕ್ಕೆ: ದಿನೇಶ್ ಗುಂಡೂರಾವ್

| Published : Feb 11 2024, 01:47 AM IST

ಸಾರಾಂಶ

ಸಮಾಜವನ್ನು ಸದಾ ಆತಂಕದಲ್ಲಿ ಇಡುವುದೇ ಈಶ್ವರಪ್ಪನ ಕೆಲಸ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕ, ಬಿಜೆಪಿಗೆ ಇದರಿಂದಲೇ ಲಾಭ ಎಂದು ಗುಂಡೂರಾವ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಬಿಜೆಪಿ ನಾಯಕ ಈಶ್ವರಪ್ಪ ಅವರು ನಮ್ಮ ಸಾಮಾಜಿಕ ವ್ಯವಸ್ಥೆಗೇ ಧಕ್ಕೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸದಾ ಕೊಲ್ಲುವ ಕೊಚ್ಚುವ ಮುಗಿಸುವ ಮಾತುಗಳನ್ನಾಡುತ್ತಾರೆ. ಬಿಜೆಪಿಯ ನಾಯಕನಾದವನಿಗೆ ಇದು ಶೋಭೆಯೇ? ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ಕೂಡ ಬಿಜೆಪಿಯ ನಾಯಕನೇ? ಎಂದವರು ತೀವ್ರವಾಗಿ ಪ್ರಶ್ನಿಸಿದರು.

ಸಮಾಜವನ್ನು ಸದಾ ಆತಂಕದಲ್ಲಿ ಇಡುವುದೇ ಈಶ್ವರಪ್ಪನ ಕೆಲಸ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕ, ಬಿಜೆಪಿಗೆ ಇದರಿಂದಲೇ ಲಾಭ ಎಂದವರು ಆರೋಪಿಸಿದರು.

ಇವರೆಲ್ಲಾ ಜೈ ಶ್ರೀರಾಮ್ ಹೇಳುತ್ತಾರೆ, ಆದರೆ ಎಷ್ಟರಮಟ್ಟಿಗೆ ಅದನ್ನು ಅವರು ಜೀವನದಲ್ಲಿ ಅಳವಡಿಸಿದ್ದಾರೆ? ಹೇಳುವುದು ಸುಲಭ, ಆದರೆ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ ಎಂದೂ ಸಚಿವರು ಪ್ರಶ್ನಿಸಿದರು.

ಖರ್ಗೆ ಹೊಟ್ಟೆಯಲ್ಲಿ ಹುಳ ಹುಟ್ಟಿದೆ ಎಂದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಇಂತಹ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಅನಂತಕುಮಾರ್ ಹೀಗೆ ದೊಡ್ಡ ಪಟ್ಟಿ ಇದೆ. ಪ್ರಚೋದನಕಾರಿ ಹೇಳಿಕೆ ನೀಡಿ ಜನರ ನಡುವೆ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ ಎಂದರು.

ರಾಜ್ಯದ ಆರ್ಥಿಕ ಪರಿಸ್ಥಿತಿ, ತೆರಿಗೆ ಪರಿಸ್ಥಿತಿ ಬಗ್ಗೆ ಮಾತಾನಾಡಿದರೆ, ಆರೋಗ್ಯ, ಶಿಕ್ಷಣದ ಬಗ್ಗೆ ಮಾತನಾಡಿದರೆ ಚರ್ಚೆ ನಡೆಸೋಣ. ಅದನ್ನು ಬಿಟ್ಟು ಯಾರ್ಯಾರು ಇಂತಹ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಅಂದರೆ ಇದನ್ನೆಲ್ಲಾ ನಾವು ಮಾತಾಡಬೇಕು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈಡಿ, ಐಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿ ಉಳಿದಿಲ್ಲ. ಈ ತನಿಖಾ ಸಂಸ್ಥೆಗಳೆಲ್ಲವೂ ಬಿಜೆಪಿಯ ಸಂಸ್ಥೆಗಳಾಗಿಬಿಟ್ಟಿವೆ. ಈಗ ಚುನಾವಣೆ ಹತ್ತಿರ ಬರುವಾಗ ಡೆಲ್ಲಿ, ಜಾರ್ಖಂಡ್ ಸಿಎಂ ಮೇಲೆ ದಾಳಿ ನಡೆದಿದೆ. ಜೈ ಶ್ರೀರಾಮ್ ಹೇಳಿಕೊಂಡು, ಧರ್ಮದ ಕವಚದ ಒಳಗೆ ಪಾಪದ ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.