ಪಕ್ಷ ನಿಷ್ಠ ರಘುಪತಿ ಭಟ್‌ರಿಗೂ ಬಿಜೆಪಿ ನಾಯಕರಿಂದ ಮೋಸ: ಈಶ್ವರಪ್ಪ

| Published : May 22 2024, 12:51 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗ ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗ ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದೆ.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನಿವಾಸದಲ್ಲಿ ರಾಷ್ಟ್ರಭಕ್ತ ಬಳಗದ ಸಭೆಯಲ್ಲಿ ಮಂಗಳವಾರ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಪಕ್ಷ ನಿಷ್ಠ ರಘುಪತಿ ಭಟ್‌ಗೆ ಮೋಸ:

ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲೇ ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್‌ ಅವರಿಗೂ ಪಕ್ಷದಲ್ಲಿ ಮೋಸವಾಯಿತು ಎಂದು ಈಶ್ವರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಿದಾಗ ರಾಷ್ಟ್ರೀಯ ನಾಯಕರ ಕರೆ ಬಂದಿತ್ತು. ಆದರೆ ಉಡುಪಿಯಲ್ಲಿ ರಘುಪತಿ ಭಟ್ಟರಿಗೆ ಕರೆ ಕೂಡ ಬರಲಿಲ್ಲ. ಟಿಕೆಟ್‌ ಘೋಷಣೆಗೆ ಎರಡು ದಿನ ಇರುವಾಗ ನಿನಗೇ ಟಿಕೆಟ್‌ ಎಂದು ಭಟ್‌ರಿಗೆ ಹೇಳಿದವರು ಕೊನೇ ಗಳಿಗೆಯಲ್ಲಿ ಮೋಸ ಮಾಡಿದರು. ಪಕ್ಷ ಎಂದರೆ ತಾವು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಎಂದು ಅಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕೆಂದರು.

ನಮ್ಮ ಸ್ಪರ್ಧೆಯಿಂದ ಎಷ್ಟರಮಟ್ಟಿಗೆ ಪಕ್ಷ ಶುದ್ಧೀಕರಣ ಆಗುತ್ತದೆ ಎಂಬುದು ಲೋಕಸಭೆ, ವಿಧಾನ ಪರಿಷತ್‌ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ. ಚುನಾವಣೆ ಮುಗಿಯುತ್ತಿದ್ದಂತೆ ರಘುಪತಿಗೆ ನೋಟಿಸ್ ಬರಬಹುದು. ನನಗೆ ಆಗ ಖುಷಿ. ನಾನೊಬ್ಬನೇ ಆಗಿದ್ದೆನಲ್ಲ, ಸದ್ಯ ಈಗ ಭಟ್ರು ಜೊತೆಗೆ ಬರ್ತಾರಲ್ಲ ಸಮಾಧಾನ ಎಂದು ಈಶ್ವರಪ್ಪ ತಮಾಷೆಯಾಗಿ ಹೇಳಿದರು.