ಸಾರಾಂಶ
ಜಾತಿಯಲ್ಲಿ ಬೇರೆ-ಬೇರೆಯಾಗಿದ್ದರೂ ತಾಯಿ- ಮಗನಂತೆ ಚೆನ್ನಮ್ಮ ಮತ್ತು ರಾಯಣ್ಣ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಲು ಶ್ರಮಿಸಿದ್ದಾರೆ.
ಹುಬ್ಬಳ್ಳಿ:
ಇಲ್ಲಿನ ಗಜಾನನ ಮಹಾಮಂಡಳ ಪ್ರಸಕ್ತ ಸಾಲಿನ ತನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ ಮತ್ತು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಗುರುವಾರ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈಶ್ವರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಜಾತಿಯಲ್ಲಿ ಬೇರೆ-ಬೇರೆಯಾಗಿದ್ದರೂ ತಾಯಿ- ಮಗನಂತೆ ಚೆನ್ನಮ್ಮ ಮತ್ತು ರಾಯಣ್ಣ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಲು ಶ್ರಮಿಸಿದ್ದಾರೆ. ಹಿಂದೆ ರಾಯಣ್ಣನಿಗೆ ಮೋಸ ಮಾಡಿದ ಮಲ್ಲಪ್ಪ ಶೆಟ್ಟಿಯಂತಹ ದೇಶ ದ್ರೋಹಿಗಳು ಇಂದಿಗೂ ದೇಶದ ಒಳಗೆ ಮತ್ತು ಹೊರಗಿದ್ದಾರೆ. ಅವರ ಷಡ್ಯಂತ್ರಕ್ಕೆ ಒಳಗಾಗದೇ, ಸಮಾಜ ಬಾಂಧವರೆಲ್ಲರು ಒಂದಾಗಿ ದೇಶದ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.ಕೇಂದ್ರದಲ್ಲಿರುವ ವಿಪಕ್ಷಗಳು ದೇಶವನ್ನು ದುರ್ಬಲಗೊಳಿಸುವ ಕಾರ್ಯ ನಡೆಸುತ್ತಿವೆ. ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿದ್ದರೂ, ಅವರನ್ನು ಹೀಯಾಳಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿದೆ. ರಾಷ್ಟ್ರದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ನಡೆಸಲಾಗುತ್ತಿದೆ ಎಂದರು.
ಶಾಸಕ ಬಸವನಗೌಡ ಪಾಟೀಲ ಯತ್ನಾಳ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಅವರ ಪುತ್ರ, ಬಿಜೆಪಿ ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ, ಹಿಂದೂಗಳು ಯಾರಿಗೂ ಹೇದರುವ ಅವಶ್ಯಕತೆ ಇಲ್ಲ. ನಮ್ಮ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಯಾರ ಅಪ್ಪಣೆಯೂ ಬೇಕಿಲ್ಲ. ತಂದೆಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದರು.ಅದಕ್ಕೂ ಮುನ್ನ ಗಜಾನನ ಮಹಾಮಂಡಳದ ಸಂಸ್ಥಾಪಕ ಅಧ್ಯಕ್ಷ ಡಿ. ಗೋವಿಂದರಾವ್ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಸಾನ್ನಿಧ್ಯ ವಹಿಸಿದ್ದ ಡಾ. ಚಂದ್ರಶೇಖರ ಶಿವಯೋಗಿ ರಾಜೇಂದ್ರ ಶ್ರೀ ಹಾಗೂ ಮನಸೂರಿನ ಡಾ. ಬಸವರಾಜ ದೇವರು ಆಶೀರ್ವಚನ ನೀಡಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಕಾಂತೇಶ ಈಶ್ವರಪ್ಪ, ಹು-ಧಾ ಬಂಟ ಸಮಾಜದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಗಂಗಾಧರ ದೊಡ್ಡವಾಡ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪಾಂಡುರಂಗ ಪಮ್ಮಾರ ಸೇರಿದಂತೆ ಹಲವರಿದ್ದರು.