ಯಡಿಯೂರಪ್ಪ ಕುರಿತು ಈಶ್ವರಪ್ಪ ಟೀಕೆ ಸಲ್ಲದು: ದೊಡ್ಡನಗೌಡ

| Published : Apr 06 2024, 12:45 AM IST

ಯಡಿಯೂರಪ್ಪ ಕುರಿತು ಈಶ್ವರಪ್ಪ ಟೀಕೆ ಸಲ್ಲದು: ದೊಡ್ಡನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎಸ್. ಈಶ್ವರಪ್ಪ ಅವರಿಗೆ ಅನ್ಯಾಯವಾಗಿದ್ದರೆ ಪಕ್ಷದ ಹೈಕಮಾಂಡ್ ಮೂಲಕ ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಏಕಾಏಕಿಯಾಗಿ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ವಾಗ್ದಾಳಿ ಮಾಡುವುದು ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.

ಕೊಪ್ಪಳ: ತಮ್ಮ ಮಗನಿಗೆ ಟಿಕೆಟ್ ತಪ್ಪಿದೆ ಎಂದಾಕ್ಷಣ ಮಾಜಿ ಸಿ.ಎಂ. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಟೀಕೆ ಮಾಡುವುದು ಸಲ್ಲದು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಅವರಿಗೆ ಅನ್ಯಾಯವಾಗಿದ್ದರೆ ಪಕ್ಷದ ಹೈಕಮಾಂಡ್ ಮೂಲಕ ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಏಕಾಏಕಿಯಾಗಿ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ವಾಗ್ದಾಳಿ ಮಾಡುವುದು ಸರಿಯಲ್ಲ ಎಂದರು.

ಅಪ್ಪ-ಮಕ್ಕಳ ಪಕ್ಷ, ನನಗೆ ಟಿಕೆಟ್ ತಪ್ಪಲು ಯಡಿಯೂರಪ್ಪ ಅವರೇ ಕಾರಣ ಎಂದು ಹೇಳುವುದನ್ನು ಬಿಟ್ಟು, ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿಕೊಂಡು, ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು. ಇದರಿಂದ ಹಿರಿಯರಾದ ತಮಗೂ ಒಳ್ಳೆಯದು ಮತ್ತು ಪಕ್ಷಕ್ಕೂ ಒಳ್ಳೆಯದು. ನಾನು ಬಿಜೆಪಿಯನ್ನು ಟೀಕೆ ಮಾಡುವುದಿಲ್ಲ, ಯಡಿಯೂರಪ್ಪ ಅವರನ್ನು ಮಾತ್ರ ಟೀಕೆ ಮಾಡುತ್ತೇನೆ ಎನ್ನುತ್ತಾರೆ. ಅದು ಎರಡೂ ಒಂದೇ ಎಂದರು.

ತಮ್ಮ ಪುತ್ರನಿಗೆ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಇದ್ದಾಗಲೇ ಧ್ವನಿ ಎತ್ತಬೇಕಿತ್ತು. ಅದು ಬಿಟ್ಟು ಈಗ ಲೋಕಸಭಾ ಚುನಾವಣೆಯಲ್ಲಿ ಧ್ವನಿ ಎತ್ತುವುದು ಸರಿಯಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಟಿಕೆಟ್ ಹಂಚಿಕೆಯಾಗಿದೆ. ಪಕ್ಷದ ವರಿಷ್ಠರು ನಾನಾ ಕಾರಣಗಳ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದಾರೆ. ತಮಗೆ ಟಿಕೆಟ್ ತಪ್ಪಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಕಾರಣ ಎಂದು ದೂರುವುದು ಮತ್ತು ಅವರ ಕುರಿತು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.

ಕುರುಬ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಆಗಿರದೆ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಪಕ್ಷ ಖಂಡಿತವಾಗಿಯೂ ಅನ್ಯಾಯ ಸರಿ ಮಾಡುತ್ತದೆ. ಆದ್ದರಿಂದ ಹಿರಿಯರಾದ ಈಶ್ವರಪ್ಪ ಅವರು ಪಕ್ಷದ ವರ್ಚಸ್ಸಿಗೆ ಧಕ್ಕೆ ತರದೆ, ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿಕೊಳ್ಳಬೇಕು. ಈಗ ಸ್ಪರ್ಧೆಯಿಂದ ಹಿಂದೆ ಸರಿದು, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಎಂದರು.

ಸಂಸದ ಸಂಗಣ್ಣ ಕರಡಿ ಅವರು ಈಗಾಗಲೇ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ದೊಡ್ಡನಗೌಡ ಅವರು ಉತ್ತರಿಸಿದರು. ಅವರ ಬೆಂಬಲಿಗರು ಬಿಜೆಪಿ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರಬಹುದು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ಅದಕ್ಕೆ ಸಂಸದ ಸಂಗಣ್ಣ ಕರಡಿ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಅವರು ಹೋಗಬೇಡ ಎಂದೇ ಹೇಳಿದ್ದಾರೆ. ಆದರೂ ಹೋಗುತ್ತಿದ್ದಾರೆ. ನಮ್ಮ ಪಕ್ಷಕ್ಕೂ ಅನೇಕರು ಬೇರೆ ಬೇರೆ ಪಕ್ಷದಿಂದ ಬರುತ್ತಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಹೇಶ ಹಾದಿಮನಿ, ಮಲ್ಲಣ್ಣ ಡಿ., ಅಮಿತ್ ಕಂಪ್ಲಿಕರ್ ಮೊದಲಾದವರು ಇದ್ದರು.