ಸಾರಾಂಶ
ವಿದ್ಯಾರ್ಥಿಗಳು ನಿತ್ಯವೂ ಓದಿಗಾಗಿ ಕೆಲ ಗಂಟೆಗಳನ್ನು ಮೀಸಲಿಡಬೇಕು. ಕೈಪಿಡಿ ಹೆಚ್ಚು ಅಂಕಗಳಿಕೆಗೆ ಸಹಕಾರಿ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಜೀವನದಲ್ಲಿ ಶಿಕ್ಷಣವೇ ಶಕ್ತಿಯಾಗಿದ್ದು, ವಿದ್ಯಾರ್ಥಿ ಉತ್ತಮ ಜ್ಞಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಲಹೆ ನೀಡಿದರು.ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ಅದಮ್ಯ ಚೇತನ ಫೌಂಡೇಶನ್‌ದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊರ ತಂದ ಪರೀಕ್ಷೆ ತಯಾರಿ ಕುರಿತ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ನಿತ್ಯವೂ ಓದಿಗಾಗಿ ಕೆಲ ಗಂಟೆಗಳನ್ನು ಮೀಸಲಿಡಬೇಕು. ಕೈಪಿಡಿ ಹೆಚ್ಚು ಅಂಕಗಳಿಕೆ ಸಹಕಾರಿಯಾಗಿದ್ದು, ಅದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳೇ ಜೀವನಾಧಾರವಲ್ಲ. ವಿದ್ಯಾರ್ಥಿಗಳು ಅಂಕಗಳಿಕೆಯ ಬೆನ್ನು ಬೀಳದೆ, ವಿಷಯದ ಆಳ ಅರಿತುಕೊಳ್ಳಬೇಕು. ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್ ಹಾಗೂ ಇಂಟರ್‌ನೆಟ್‌ಗಳಿಂದ ದೂರ ಉಳಿಯಬೇಕು ಎಂದು ಸಚಿವ ಜೋಶಿ ಸಲಹೆ ನೀಡಿದರು.
ಅದಮ್ಯ ಚೇತನ ಫೌಂಡೇಶನ್ ಟ್ರಸ್ಟಿಎಚ್.ಎನ್. ನಂದಕುಮಾರ ಮಾತನಾಡಿ, ಅದಮ್ಯ ಚೇತನ ಸಂಸ್ಥೆಯಿಂದ ನಿತ್ಯ 81 ಸಾವಿರ ಮಕ್ಕಳಿಗೆ ಶುಚಿ ರುಚಿ ಊಟ ನೀಡುತ್ತಿದೆ. ಇದರ ಜತೆಗೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೈಪಿಡಿ ನೀಡುತ್ತ ಬರುತ್ತಿದೆ. ಈ ವರ್ಷ ಧಾರವಾಡ ಜಿಲ್ಲೆಯ 24 ಸಾವಿರ ವಿದ್ಯಾಥಿರ್ಗಳಿಗೆ ಕೈಪಿಡಿ ನೀಡಲಾಗುವುದು ಎಂದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿದರು. ಅದಮ್ಯ ಚೇತನದ ಭಾರತಿ ನಂದಕುಮಾರ, ಬಿಇಒ ಉಮೇಶ ಬೊಮ್ಮಕ್ಕನವರ, ಚನ್ನಪ್ಪಗೌಡರ, ವಿಜಯನಗರ ಕಾಲೇಜಿನ ಸಂದೀಪ ಬೂದಿಹಾಳ, ಡಾ. ಎಚ್.ವಿ. ಬೆಳಗಲಿ ಸೇರಿದಂತೆ ಅನೇಕರಿದ್ದರು.