ಆಧುನಿಕ ಕರ್ನಾಟಕದ ನಿರ್ಮಾತೃ ಎಸ್ಸೆಂಕೆ

| Published : Dec 11 2024, 12:48 AM IST

ಸಾರಾಂಶ

ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ರೂಪಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ. ವಿಕಾಸ ಸೌಧ ನಿರ್ಮಾಣ, ಆಡಳಿತದಲ್ಲಿ ನವಸಂಸ್ಕೃತಿ, ಸ್ವಚ್ಛ ಗ್ರಾಮಗಳ ಪರಿಕಲ್ಪನೆ, ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳ ರಚನೆ, ಗುಣಮಟ್ಟ ಶಿಕ್ಷಣದ ಅನುಷ್ಠಾನಕ್ಕಾಗಿ ಹೊಸ ಉಪಕ್ರಮಗಳನ್ನು ಜಾರಿಗೊಳಿಸಿದ್ದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಕಂಡ ಬಹುಮುಖ ಪ್ರತಿಭೆಯ, ವರ್ಣರಂಜಿತ ವ್ಯಕ್ತಿತ್ವದ ಕನಸುಗಾರ, ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಸ್ತಂಗತರಾಗಿರುವುದು ದುಃಖದ ಸಂಗತಿ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯ ಪಟ್ಟರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಗೌರವ ಸಲ್ಲಿಸಿ ಮಾತನಾಡಿ, ವಿದ್ಯೆ, ವಿಚಾರ, ದೂರದೃಷ್ಟಿ, ಆಧುನಿಕ ಮನೋಭಾವ ಮತ್ತು ರಾಜಕೀಯದಲ್ಲಿ ಮುತ್ಸದ್ದಿತನ ಹೊಂದಿದ್ದ ಎಸ್.ಎಂ.ಕೃಷ್ಣ ಅವರು ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ತಂತ್ರಜ್ಞಾನ ರಾಜಧಾನಿ

ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ರೂಪಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ. ವಿಕಾಸ ಸೌಧ ನಿರ್ಮಾಣ, ಆಡಳಿತದಲ್ಲಿ ನವಸಂಸ್ಕೃತಿ, ಸ್ವಚ್ಛ ಗ್ರಾಮಗಳ ಪರಿಕಲ್ಪನೆ, ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳ ರಚನೆ, ಗುಣಮಟ್ಟ ಶಿಕ್ಷಣದ ಅನುಷ್ಠಾನಕ್ಕಾಗಿ ಹೊಸ ಉಪಕ್ರಮಗಳನ್ನು ಜಾರಿಗೊಳಿಸಿದ್ದರು ಎಂದರು.ಇಂತಹ ಅಪೂರ್ವ ನಾಯಕನ ಚಿಂತನೆಗಳು ಮತ್ತು ದೂರದೃಷ್ಟಿಯ ತತ್ವಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವುದರಿಂದ ಯಾವುದೇ ರಾಜ್ಯ ಅಥವಾ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಎಸ್.ಎಂ.ಕೃಷ್ಣ ಅವರ ಆಡಳಿತ ಕ್ರಮ ಹಾಗೂ ಆದರ್ಶಗಳ ಗುಣಗಾನ ಮಾಡಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಅಧ್ಯಾಪಕ ವರ್ಗ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡು ಅಗಲಿದ ನಾಯಕನಿಗೆ ಗೌರವ ನಮನಗಳನ್ನು ಸಲ್ಲಿಸಿದರು.