ಎಸ್ಸೆಸ್ಸೆಲ್ಸಿ ಪರೀಕ್ಷೆ: 314 ವಿದ್ಯಾರ್ಥಿಗಳು ಗೈರು

| Published : Mar 26 2024, 01:00 AM IST

ಸಾರಾಂಶ

ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುರುವಾಗಿದ್ದು ಮೊದಲ ದಿನ ಸೋಮವಾರ ಪ್ರಥಮ ಭಾಷೆಯ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಪ್ರಥಮ ಭಾಷಾ ಪರೀಕ್ಷೆಗೆ 28,445 ವಿದ್ಯಾರ್ಥಿಗಳು ಹಾಜರಾಗಿದ್ದರು.

ಧಾರವಾಡ:ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುರುವಾಗಿದ್ದು ಮೊದಲ ದಿನ ಸೋಮವಾರ ಪ್ರಥಮ ಭಾಷೆಯ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಪ್ರಥಮ ಭಾಷಾ ಪರೀಕ್ಷೆಗೆ 28,445 ವಿದ್ಯಾರ್ಥಿಗಳು ಹಾಜರಾಗಿದ್ದು, ಪರೀಕ್ಷೆಗೆ ನೋಂದಣಿ ಮಾಡಿದ್ದ ವಿದ್ಯಾರ್ಥಿಗಳ ಪೈಕಿ 314 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಯಾವುದೇ ನಕಲು ಇಲ್ಲ:

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ., ಡಿಡಿಪಿಐ ಎಸ್.ಎಸ್‌. ಕೆಳದಿಮಠ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ವಿದ್ಯಾರ್ಥಿಸ್ನೇಹಿ ಪರೀಕ್ಷಾ ಕೇಂದ್ರಗಳಾಗಿರುವ ಬಗ್ಗೆ ಖಾತ್ರಿ ಮಾಡಿಕೊಂಡರು. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಲಾಗಿತ್ತು. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ನಕಲು ಪ್ರಕರಣಗಳು ಪತ್ತೆ ಆಗಿಲ್ಲ ಡಿಡಿಪಿಐ ತಿಳಿಸಿದ್ದಾರೆ.

101 ಕೇಂದ್ರದಲ್ಲಿ ಪರೀಕ್ಷೆ:

ಹುಬ್ಬಳ್ಳಿ ಶಹರದ 34, ಧಾರವಾಡ ಶಹರದ 16, ಧಾರವಾಡ ಗ್ರಾಮೀಣದ 14, ಹುಬ್ಬಳ್ಳಿ ಗ್ರಾಮೀಣದ 13, ಕಲಘಟಗಿಯ 8, ಕುಂದಗೋಳದ ಏಳು ಹಾಗೂ ನವಲಗುಂದದ ಒಂಭತ್ತು ಸೇರಿದಂತೆ ಒಟ್ಟು ಜಿಲ್ಲೆಯ 101 ಪರೀಕ್ಷಾ ಕೇಂದ್ರಗಳಿದ್ದು, ವಿರೋಧದ ಮಧ್ಯೆಯೂ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಈ ಮೂಲಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲಾಯಿತು. ಪ್ರತಿ ಪರೀಕ್ಷಾ ಕೇಂದ್ರದ ವೀಕ್ಷಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಸಹ ಮಾಡಲಾಗಿತ್ತು. ಜಿಲ್ಲೆಯ ಕೆಲವೆಡೆ ಸೋಮವಾರ ಹೋಳಿ ಹುಣ್ಣಿಮೆ ನಿಮಿತ್ತ ಮಕ್ಕಳಿಗೆ ತೊಂದರೆ ಆಗದಂತೆ ಬಸ್ಸಿನ ವ್ಯವಸ್ಥೆ ಹಾಗೂ ಪೊಲೀಸ್‌ ಬಂದೋಬಸ್ತ್‌ ಸಹ ಮಾಡಲಾಗಿತ್ತು. ಮಕ್ಕಳು ಪ್ರವೇಶ ಪತ್ರ ತೋರಿಸಿ ಪರೀಕ್ಷೆಗೆ ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗಿತ್ತು.

ಗುಲಾಬಿ ಹೂ ನೀಡಿ ಸ್ವಾಗತ:ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಭಯಪಡದೇ ಇರಲೆಂದು ಈಗಾಗಲೇ ಇಲಾಖೆ ಹಲವು ಪ್ರಯತ್ನ ಮಾಡಿದ್ದು, ಮುಂದುವರಿದ ಭಾಗವಾಗಿ ಸಂಘ-ಸಂಸ್ಥೆಗಳು ಮೊದಲ ಪರೀಕ್ಷೆಯ ಹಿನ್ನೆಲೆಯಲ್ಲಿ ಇಲ್ಲಿಯ ಕೆ.ಇ. ಬೋರ್ಡ್‌ ಶಾಲೆಯ ವಿದ್ಯಾರ್ಥಿಗಳಿಗೆ ಕೆಂಪು ಹಾಸಿಗೆ ಹಾಸಿ ಹೂ ನೀಡಿ ಸ್ವಾಗತ ಕೋರಲಾಯಿತು. ಗುಲಾಬಿ ಹೂ, ಪೆನ್ನು ಮತ್ತು ಸಿಹಿ ವಿತರಿಸಿ ಅವರಿಗೆ ಶುಭ ಹಾರೈಸಲಾಯಿತು. ಕೈಯಲ್ಲಿ ವಿವಿಧ ಫಲಕಗಳ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸುವ ಪ್ರಯತ್ನ ಮಾಡಲಾಯಿತು. ಶಿಕ್ಷಣ ಪ್ರೇಮಿಯಾದ ವಿನಾಯಕ ಜೋಶಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಬ್ಬೂರ ರಸ್ತೆ ನಾಗರಿಕರ ಸಂಘ, ಲಾಯನ್ಸ್ ಕ್ಲಬ್, ರೋಟರಿ ಕ್ಲಬ್, ಪಾಲಿಕೆ ಸದಸ್ಯ ವಿಷ್ಣು ಕೊರಲಹಳ್ಳಿ, ಸುನೀಲ್ ಬಾಗೇವಾಡಿ, ಡಾ. ಅನಿರುದ್ಧ ,ಡಾ. ಅಚ್ಯುತ್, ಆಶಾ ಜೋಶಿ, ಶೈಲಜಾ ಕರಗುದರಿ, ರಾಜಪುರೋಹಿತ ಮತ್ತಿತರರು ಕೈ ಜೋಡಿಸಿದರು.