ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಬುನಾದಿಯಿದ್ದಂತೆ, ವರ್ಷ ಪೂರ್ತಿ ಕಠಿಣ ಅಭ್ಯಾಸ ಮಾಡಿದಂತೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳೀತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಕಲಬುರಗಿ ನಗರದ ಸರ್ಕಾರಿ ಬಿ.ಎಡ್ ಮಹಾವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆಯೋಜಿಸಿದ “ಸ್ಪೂರ್ತಿ ಮಾತುಗಳು ಕೀರ್ತಿಯ ಕಿರಣಗಳು” ಮುಕ್ತ ಸಂವಾದ ಹಾಗೂ ಯೂಟ್ಯೂಬ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಶ ಸುಧಾರಣೆಗೆ 100 ದಿನಗಳ ಕ್ರಿಯಾ ಯೋಜನೆ ರೂಪಿಸಿದ್ದು, ಇದೀಗ ಉಳಿದಿರುವುದು 75 ದಿನ ಮಾತ್ರ. ಪ್ರತಿ ದಿನ ಪ್ರತಿ ಕ್ಷಣ ತುಂಬಾ ಉಪಯುಕ್ತವಾಗಿ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಜಿಲ್ಲಾಧಿಕಾರಿಗಳು, ನೀವು ಉತ್ತಮ ರ್‍ಯಾಂಕ್ ಪಡೆಯುವುದರ ಜೊತೆಗೆ ಜಿಲ್ಲೆಯ ರ್ಯಾಂಕ್ ಸಹ ಅಗ್ರದಲ್ಲಿ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.ಓದಿಗೆ ಯಾರ ನೆರವು ಬೇಕಿಲ್ಲ. ದೇಹ ಮತ್ತು ಮನಸ್ಸು ಮಾತ್ರ ಬೇಕು. ಯಾವ ವಿಷಯ ಕಠಿಣವಾಗಿರುತ್ತೋ ಅದರ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಅಕ್ಷರ ಆವಿಷ್ಕಾರ ಯೋಜನೆ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಕಠಿಣ ವಿಷಯ, ಪಾಠಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ಶಾಲೆಯಲ್ಲಿ ನಡೆಯುವ ವಿಶೇಷ ತರಗತಿಗಳ ಪ್ರಯೋಜನ ಪಡೆಯಬೇಕು. ಪರೀಕ್ಷೆ ಬರೆಯುವಾಗ ಮೊದಲು ಸುಲಭ ಪ್ರಶ್ನೆಗಳಿಗೆ ನಂತರ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವುದು ಒಳ್ಳೆಯದು ಎಂದ ಅವರು ಮಕ್ಕಳಿಗೆ ಮನೆಯಲ್ಲಿಯೂ ಕಲಿಕಾ ವಾತಾವರಣ ನಿರ್ಮಿಸುವಂತೆ ಪೋಷಕರ ಸಭೆ ಕರೆದು ತಿಳಿಸಬೇಕು ಎಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು.ಮನಸ್ಸಿದರೆ ಮಾರ್ಗ ಎಂಬಂತೆ ಅನೇಕ ಪ್ರಸಿಧ್ಧ ವ್ಯಕ್ತಿಗಳು ರಾತ್ರಿ ಬೀದಿ ದೀಪಗಳ ಬೆಳಕಿನಡಿ ಕುಳಿತುಕೊಂಡು ಓದಿದ ಇತಿಹಾಸ ಇದೆ. ಗಿಡ-ಮರಗಳಲ್ಲಿ ಕುಳಿತು ಓದಿದ್ದವರು ಇದ್ದಾರೆ. ಪ್ರಸ್ತುತ ಸಕಲ ಸೌಕರ್ಯ ಇರುವುದರಿಂದ ಅದನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ವಿಶೇಷವಾಗಿ ಗ್ರಾಮ ಪಂಚಾಯತ ಗ್ರಂಥಾಲಯಗಳನ್ನು ಹೆಚ್ಚು ಉಪಯೋಗಿಸುವಂತೆ ಭಂವರ್ ಸಿಂಗ್ ಮೀನಾ ಅವರು ಸಲಹೆ ನೀಡಿದರು.
ಪರೀಕ್ಷೆ ಸ್ಪರ್ಧಾತ್ಮಕವಾಗಿರಲಿ,ಫಲಿತಾಂಶ ಹಬ್ಬದಂತೆ ಆಚರಿಸಿ:ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ್ ಮುಕ್ತ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸ್ಪರ್ಧಾತ್ಮಕವಾಗಿ ಬರೆಯಬೇಕು. ಫಲಿತಾಂಶ ಬಂದಾಗ ಮಾತ್ರ ರೈತರು ಇಡೀ ವರ್ಷ ಫಸಲು ಬೆಳೆದು ಸಂಕ್ರಾಂತಿ ಹಬ್ಬ ಆಚರಿಸಿದಂತೆ ಇಡೀ ವರ್ಷ ಅಭ್ಯಾಸದ ಫಲವಾಗಿ ಬಂದ ಪರೀಕ್ಷಾ ಫಲಿತಾಂಶವನ್ನು ಹಬ್ಬದ ರೀತಿಯಲ್ಲಿಯೆ ಆಚರಿಸಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದ ಅವರು, ಪ್ರತಿ ದಿನ ಶಾಲೆಗೆ ಬರುವುದನ್ನು ತಪ್ಪಿಸದಿರಿ. ನಿಮ್ಮೊಂದಿಗೆ ಸಹಪಾಠಿಗಳನ್ನು ಕರೆತನ್ನಿ. ಶಾಲಾ ಮಟ್ಟದಲ್ಲಿ ಆಯೋಜಿಸಲಾಗುವ ಎಲ್ಲಾ ರೀತಿಯ ಪರೀಕ್ಷೆಯನ್ನು ಬರೆಯಬೇಕು ಎಂದರು.
ಮುಕ್ತ ಸಂವಾದ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನೇರ ಪ್ರಸಾರ ಕಲ್ಪಿಸಿದ್ದರಿಂದ ಜಿಲ್ಲೆಯ 43 ಸಾವಿರ ಮಕ್ಕಳು ಇದರಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಜಿ.ಎಂ.ವಿಜಯಕುಮಾರ, ಕಲಬುರಗಿ ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಭಾಗವಹಿಸಿದ್ದರು. ಸದಾನಂದ ಪೆರ್ಲಾ ನಿರೂಪಿಸಿದರು.