ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾದ್ಯಂತ ಮೇ ೨೬ ರಿಂದ ಜೂ.೨ರವರೆಗೂ ೨೦ ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ಕ್ಕೆ ಒಟ್ಟು ೬೬೮೩ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಸಕಲ ಸಿದ್ದತೆ ಮಾಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಶನಿವಾರವೇ ಜಿಲ್ಲೆಯ ಎಲ್ಲಾ ೨೦ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷರ ಅಧ್ಯಕ್ಷತೆಯಲ್ಲಿ ಆಯಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕೊಠಡಿ ಮೇಲ್ವಿಚಾರಕರು ಮತ್ತು ಸಿಬ್ಬಂದಿಯ ಸಭೆ ನಡೆಸಿ ಸುಗಮ ಪರೀಕ್ಷೆಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.ತಾಲೂಕು ವಾರು ಕೇಂದ್ರಗಳ ವಿವರ:
ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರಲ್ಲಿ ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನೂ ಶುಲ್ಕ ರಹಿತವಾಗಿ ಪರೀಕ್ಷೆ-೨ಕ್ಕೆ ನೋಂದಣಿ ಮಾಡಲಾಗಿದ್ದು, ಬಂಗಾರಪೇಟೆ ತಾಲೂಕಿನ ೪ ಕೇಂದ್ರಗಳಲ್ಲಿ ೧೧೬೯ ಮಂದಿ, ಕೆಜಿಎಫ್ ತಾಲೂಕಿನ ೪ ಕೇಂದ್ರಗಳಲ್ಲಿ ೧೫೮೯ ಮಂದಿ, ಕೋಲಾರ ತಾಲೂಕಿನ ೫ ಕೇಂದ್ರಗಳಲ್ಲಿ ೧೪೯೦ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದಂತೆ ಮಾಲೂರು ತಾಲೂಕಿನ ೨ ಕೇಂದ್ರಗಳಲ್ಲಿ ೧೦೦೪ ಮಂದಿ, ಮುಳಬಾಗಿಲು ತಾಲೂಕಿನ ೩ ಕೇಂದ್ರಗಳಲ್ಲಿ ೧೦೭೧ ಮಂದಿ, ಶ್ರೀನಿವಾಸಪುರ ತಾಲೂಕಿನನ ೨ ಕೇಂದ್ರಗಳಲ್ಲಿ ೩೬೦ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಕೇಂದ್ರಗಳ ಪೈಕಿ ಗ್ರಾಮೀಣ ಕೇಂದ್ರಗಳು ೩೫, ನಗರ ಕೇಂದ್ರಗಳು ೩೦ ಇದೆ ಎಂದರು.ಪರೀಕ್ಷಾ ಕಾರ್ಯಕ್ಕೆ ೫೬೦ ಮಂದಿ ನೇಮಕ:
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಎಲ್ಲಾ ತಾಲೂಕಿನಲ್ಲಿ ಸುಗಮ ಪರೀಕ್ಷೆಗಾಗಿ ಜಿಲ್ಲೆಯ ಎಲ್ಲಾ ೨೦ ಕೇಂದ್ರಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆಯಲು ೨೦ ಮಂದಿ ಮುಖ್ಯ ಅಧೀಕ್ಷಕರು, ೨೦ ಮಂದಿ ಪ್ರಶ್ನೆಪತ್ರಿಕೆ ಅಭಿರಕ್ಷರು, ಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃತದಳ ಸಿಬ್ಬಂದಿ, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಸುಮಾರು ೨೫೬೦ ಮಂದಿಯನ್ನು ನೇಮಿಸಿಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸಲು ತಂಡಗಳನ್ನು ನೇಮಿಸಲಾಗಿದೆ ಎಂದರು.ಕೇಂದ್ರ ಪ್ರವೇಶಿಸಲು ಗುರುತಿನ ಚೀಟಿ ಕಡ್ಡಾಯಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‌ಬಾಯ್‌ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ. ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ.ವ್ಯಾಪ್ತಿಯಲ್ಲಿ ೧೪೪ ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಾರಿ ಮಾಡಿದ್ದಾರೆಂದು ತಿಳಿಸಿದರು.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ ೨೦೦ ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ ೨೦ ಕೇಂದ್ರಗಳಲ್ಲೂ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಮೊಬೈಲ್ ನಿಷಿದ್ದ ಸ್ವಾಧೀನಾಧಿಕಾರಿ ನೇಮಕಪರೀಕ್ಷಾ ನೋಡೆಲ್ ಅಧಿಕಾರಿ ಸಗೀರಾ ಅಂಜುಂ ಮಾಹಿತಿ ನೀಡಿ, ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ. ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಿದ್ದು, ಪ್ರತಿಕೇಂದ್ರಕ್ಕೂ ಒಬ್ಬ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳೂ ಸಹಾ ಮೊಬೈಲ್, ಎಲೆಕ್ಟ್ರಾನಿಕ್ ಗಡಿಯಾರ, ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿ ಸೈಯದ ನಾಹಿದ್ ಫಾತಿಮಾ, ಕೋಲಾರ ತಾಲೂಕು ಬಿಇಒ ಮಧುಮಾಲತಿ ಪಡುವಣೆ, ವಿವಿಧ ತಾಲುಕುಗಳ ಬಿಇಒಗಳಾದ ಗುರುಮೂರ್ತಿ ರಾಮಚಂದ್ರಪ್ಪ, ಮುನಿಲಕ್ಷ್ಮಯ್ಯ, ಮಂಜುನಾಥ್ ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಸಿಬ್ಬಂದಿ ಗೋವರ್ಧನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.