ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 18ರಿಂದ ಏಪ್ರಿಲ್ 2 ವರೆಗೆ ಯಾವುದೇ ಲೋಪ ಉಂಟಾಗದಂತೆ ಸಿಸಿ ಟಿವಿ ಕಣ್ಗಾವಲಿನಲ್ಲಿ ಪಾರದರ್ಶಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ -1 ಅನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಈ ಬಾರಿ ಒಟ್ಟು 20,650 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಒಟ್ಟು 62 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರ ಮುಚ್ಚಲಾಗುವುದು. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿ ತಲುಪಿಸಲಾಗುತ್ತದೆ ಎಂದರು.

ಪ್ರಶ್ನೆ ಪತ್ರಿಕೆ ಸಾಗುವ 27 ಮಾರ್ಗದಲ್ಲಿ ರೂಟ್ ಅಧಿಕಾರಿಗಳ ನೇಮಕ, ಡೀಸಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಿಸಲು ಅಧಿಕಾರಿಗಳನ್ನು ನೇಮಿಸಿ ಸೂಕ್ಷ್ಮವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಯಲ್ಲಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ವೇಳೆ ಸಿಸಿಟಿವಿಗಳಲ್ಲಿ ತಾಂತ್ರಿಕ ದೋಷ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.


ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ಜೊತೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗದಿಂದ ಮಕ್ಕಳು ಬರಲು ಬಸ್ ಗಳು ವಿಳಂಬವಾಗದಂತೆ ಕ್ರಮ ವಹಿಸಿ ಎಂದರು.

ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್ ತರುವುದನ್ನು ತಡೆಯಲು ಮೊಬೈಲ್ ಪೋನ್ ಸ್ವಾಧೀನಾಧಿಕಾರಿ ನೇಮಕ ಮಾಡಲಾಗಿದೆ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಯಾವುದೇ ಅಕ್ರಮ ಕಂಡು ಬಂದರೂ ಸಂಬಂಧ ಪಟ್ಟ ಅಧಿಕಾರಿಗಳು ಮೇಲೆ ಕಟ್ಟುನಿಟ್ಟಿನ ಕ್ರಮವಾಗಲಿದೆ ಎಂದು ಎಚ್ಚರಿಸಿದರು.

ಜಿಪಂ ಸಿಇಒ ಕೆ.ಆರ್ ನಂದಿನಿ ಮಾತನಾಡಿ, ಈಗಾಗಲೇ ಜಿಲ್ಲೆಯ ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶದೊಂದಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಪರೀಕ್ಷೆ ಗುಣಮಟ್ಟ ಹಾಳುಮಾಡದೆ ಪ್ರಾಮಾಣಿಕವಾಗಿ ನಡೆಸಿ ಉತ್ತಮ ಫಲಿತಾಂಶಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಾರ್ಚ್ 18ರ ನಂತರ ಸಾಲು ಸಾಲು ರಜೆಗಳು ಇವೆ. ವಿದ್ಯಾರ್ಥಿಗಳಿಗೆ ವ್ಯಾಸಂಗದ ಮೇಲೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಇದ್ದು ಫಲಿತಾಂಶ ವೃದ್ಧಿಸಲು ಕ್ರಮ ವಹಿಸಬೇಕು. ರಜೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಅವರ ಆರೋಗ್ಯದ ಹದಗೆಡುವ ಸಾಧ್ಯತೆ ಹೆಚ್ಚು. ಹೀಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ ಚಲುವಯ್ಯ, ತಹಸೀಲ್ದಾರ್ ವಿಶ್ವನಾಥ, ನಗರಸಭೆ ಪೌರಾಯುಕ್ತ ಪಂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.