ಮೌಢ್ಯಮುಕ್ತ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸಿ

| Published : Feb 01 2024, 02:00 AM IST

ಸಾರಾಂಶ

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಮಿತಿ ರಚಿಸಿ ಜನಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ,ಚಿಂತನಾಶೀಲತೆ, ಮನಸ್ಸಿನ ಸದೃಢತೆ ಬೆಳೆಸಲು ಶ್ರಮಿಸುತ್ತಿದೆ

ಗದಗ: ಸಾರ್ವಜನಿಕರಲ್ಲಿ ಮೌಢ್ಯತೆ ನಿವಾರಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ರಾಜ್ಯ ಸರ್ಕಾರದಿಂದ ಮೌಢ್ಯಮುಕ್ತ ವೈಜ್ಞಾನಿಕ ಅಕಾಡೆಮಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ ಮಾತನಾಡಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಮಿತಿ ರಚಿಸಿ ಜನಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ,ಚಿಂತನಾಶೀಲತೆ, ಮನಸ್ಸಿನ ಸದೃಢತೆ ಬೆಳೆಸಲು ಶ್ರಮಿಸುತ್ತಿದೆ.ಅದರಂತೆ ರಾಜ್ಯ ಸರ್ಕಾರವು ಮುಂಬರುವ ಬಜೆಟ್ ಮಂಡನೆಯಲ್ಲಿ ಪರಿಷತ್ತಿನ ಬೇಡಿಕೆಗಳಾದ ವೈಜ್ಞಾನಿಕ ಅಕಾಡೆಮಿ ಸ್ಥಾಪನೆ, ಪ್ರತಿ ವರ್ಷ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ ₹೧.೫ ಕೋಟಿ ಅನುದಾನ ನೀಡಬೇಕು. ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಗ್ರಾಪಂ ಶಾಲಾ-ಕಾಲೇಜು ಗ್ರಂಥಾಲಯಗಳಿಗೆ ಖರೀದಿಸಲು ಗ್ರಾಪಂಗೆ ಶಿಕ್ಷಣ ಇಲಾಖೆಗೆ ಆದೇಶ ಮಾಡುವುದು. ಚಿಕ್ಕಬಳ್ಳಾಪುರದ ಹತ್ತಿರ ಶಿಡ್ಲಘಟ್ಟದ ಬಳಿ ನಿರ್ಮಾಣವಾಗುತ್ತಿರುವ ವಿಜ್ಞಾನ ಗ್ರಾಮಕ್ಕೆ ಪ್ರತಿ ವರ್ಷ ₹೧೦ ಕೋಟಿ ಅನುದಾನ ನೀಡುವುದು. ವೈಜ್ಞಾನಿಕ ಸಮ್ಮೇಳಕ್ಕೆ ಆಗಮಿಸುವ ಸರ್ಕಾರ ನೌಕರರಿಗೆ ಎರಡು ದಿನಗಳ ಕಾಲ ಅನ್ಯ ಕಾರ್ಯ ನಿಮಿತ್ತ ಪರಿಗಣಿಸಲು ಇಲಾಖೆಗೆ ಆದೇಶ ಮಾಡುವುದು. ಕಲ್ಯಾಣ ಕರ್ನಾಟಕದಲ್ಲಿ ಮೌಢ್ಯಮುಕ್ತ ನಿವಾರಣೆಗೆ ವೈಜ್ಞಾನಿಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಮತ್ತು ಶಾಲಾ ಕಾಲೇಜು ಹಂತದ ಮಕ್ಕಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ವೈಜ್ಞಾನಿಕ ಜಾಗೃತ ಜಾಥಾ ಮಾಡಲು ಅನುದಾನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳಾದ ಶಂಕರ ಕುಕನೂರ, ಸಿ.ಎಸ್.ಅರಸನಾಳ, ವೆಂಕಟೇಶ ಇಮರಾಪೂರ, ವೀರೇಶ ನೇಗಲಿ, ಕರಿಯಪ್ಪ ಶಿರಹಟ್ಟಿ, ಯಲ್ಲಪ್ಪ ಕರಡಿ, ಸೋಮನಗೌಡ ಪಾಟೀಲ, ರಾಮನಗೌಡ ಪಾಟೀಲ, ಗಂಗಾಧರ ಬಡಿಗೇರ, ಜಯಕುಮಾರ ಅಂಬಾಡಿಪುಡಿ, ಮುತ್ತು ಜಡಿ, ಡಾ.ಬಿ.ಎಸ್. ಮೇಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.