ಸಾರಾಂಶ
ನೇಹಾ ಪ್ರಕರಣದ ವಿಚಾರಣೆಗೆ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದಲ್ಲಿಯೇ ಅಂಜಲಿ ಪ್ರಕರಣದ ವಿಚಾರಣೆ ಮಾಡಬೇಕು. ಗಲ್ಲು ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳಬೇಕು.
ಹುಬ್ಬಳ್ಳಿ:
ನೇಹಾ ಹಿರೇಮಠ ಪ್ರಕರಣದಂತೆ ಅಂಜಲಿ ಪ್ರಕರಣಕ್ಕೂ ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಒತ್ತಾಯಿಸಿದರು.ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಶುಕ್ರವಾರ ಸಂಜೆ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು.
ನೇಹಾ ಹಿರೇಮಠ ಪ್ರಕರಣ ನಡೆದು ಒಂದು ತಿಂಗಳೊಳಗೆ ನಗರದಲ್ಲಿ ಮತ್ತೊಂದು ದುರ್ಘಟನೆ ನಡೆದಿರುವುದು ದುರದೃಷ್ಟಕರ ಸಂಗತಿ. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿರುವುದೇ ಪ್ರಮುಖ ಕಾರಣ. ಈಗಲಾದರೂ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇವರ ಕುಟುಂಬದೊಂದಿಗೆ ಅಂಜುಮನ್ ಇಸ್ಲಾಂ ಸಂಸ್ಥೆಯು ನಿಲ್ಲಲಿದೆ ಎಂದರು.ಅಂಜಲಿ ಸಹೋದರಿಯರು ಇಚ್ಛಿಸಿದಲ್ಲಿ ನೆಹರು ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸಲಾಗುವುದು. ಕುಟುಂಬದವರ ಬೇಡಿಕೆಗಳ ಕುರಿತು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನೇಹಾ ಪ್ರಕರಣದ ವಿಚಾರಣೆಗೆ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದಲ್ಲಿಯೇ ಅಂಜಲಿ ಪ್ರಕರಣದ ವಿಚಾರಣೆ ಮಾಡಬೇಕು. ಗಲ್ಲು ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರಅಹ್ಮದ್ ಹಳ್ಳೂರ, ಅಲ್ತಾಫ ಹಳ್ಳೂರ, ಶಿಕ್ಷಣ ಮಂಡಳಿ ಸದಸ್ಯ ಇಲಿಯಾಸ ಅಹ್ಮದ್ ಮನಿಯಾರ, ಬಶೀರಅಹ್ಮದ ಗೂಡವಾಲೆ ಸೇರಿದಂತೆ ಹಲವರಿದ್ದರು.