ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಆಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಆಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಆಗ್ರಹಿಸಿದರು.ಅಧಿವೇಶನದಲ್ಲಿ ಮಂಗಳವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೆರುಗು ಬರಬೇಕಾದರೆ ಪ್ರತ್ಯೇಕ ಕಿತ್ತೂರು ಕರ್ನಾಟಕ ನಿಗಮ ಸ್ಥಾಪನೆ ಮಾಡಿ ಶಾಸಕರಿಗೆ ವಿಶೇಷ ಅನುದಾನ ನೀಡಬೇಕು. ವಿಜಯಪುರ ಜಿಲ್ಲೆ ಅತಿ ಹಿಂದುಳಿದ ಪ್ರದೇಶ ಆಗಿದ್ದು, ಈ ಭಾಗದ ಅಭಿವೃದ್ಧಿಗಾಗಿ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ರೈಲ್ವೆ ಲೈನ್ ಮಾಡಬೇಕು. ಈ ಬಾರಿ ಅತಿ ಹೆಚ್ಚು ಮಳೆ ಆದ ಕಾರಣ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ರೈತರ ಜಮೀನುಗಳಿಗೆ ಹೋಗುವ ರಸ್ತೆಗಳಿಗೆ ಅನುದಾನ ನೀಡಬೇಕು. ರೈತರು ತುಂಬಿದ ಬೆಳೆ ವಿಮೆ ಪರಿಹಾರ ಜಮಾ ಮಾಡಬೇಕು. ಕೃಷ್ಣ ಭಾಗ್ಯ ಜಲ ನಿಗಮದಿಂದ ರೈತರು ಕಳೆದುಕೊಂಡ ಭೂಮಿಗೆ ಪರಿಹಾರ ಒದಗಿಸಬೇಕು. ದೇವರಹಿಪ್ಪರಗಿ ಹೊಸ ಮತಕ್ಷೇತ್ರವಾಗಿದ್ದು ಕ್ಷೇತ್ರದ ಅಭಿವೃದ್ಧಿಗೆ ನೂತನ ತಾಲೂಕು ಕಚೇರಿಗಳನ್ನು ತೆರೆಯಬೇಕು. ಅಕ್ರಮ ಸಕ್ರಮದಲ್ಲಿ ರೈತರು ಹಣ ತುಂಬಿದ್ದಾರೆ ಮತ್ತೆ ಟಿಸಿ ನೀಡಲು ಅಧಿಕಾರಿಗಳು ಹಣ ಕೇಳುತ್ತಿದ್ದು, ಇದರಿಂದ ರೈತರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯಲ್ಲಿ ಎನ್.ಎಚ್.ಎಂ ಅಡಿಯಲ್ಲಿ ಸುಮಾರು 30 ವರ್ಷಗಳಿಂದ ಸಾವಿರಾರು ನೌಕರರು ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಸೇವೆಯಿಂದ ತೆಗೆದರೆ ಕುಟುಂಬ ಬೀದಿ ಪಾಲಾಗುತ್ತೆ. ಮಾನವೀಯ ದೃಷ್ಟಿಯಿಂದ ಅವರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು. ಹೃದಯಘಾತ ವಾದಾಗ ಬಿಪಿಎಲ್ ಕುಟುಂಬಗಳಿಗೆ ತೊಂದರೆ ನೀಡದೆ ಆರೋಗ್ಯ ಸೇವೆ ಒದಗಿಸಲು ಸರಳಿಕರಣ ಮಾಡಬೇಕು. ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಡೋಣಿ ಪ್ರವಾಹದಿಂದ ಸೇತುವೆ ರಸ್ತೆಗಳು ಹಾಳಾಗಿವೆ. ಪದೇ ಪದೇ ಹಾಳಾಗುವುದನ್ನು ತಪ್ಪಿಸಲು ಸೇತುವೆ ಎತ್ತರದ ಜೊತೆಗೆ ರಸ್ತೆಗಳು ನಿರ್ಮಾಣ ಮಾಡಬೇಕು, ಕ್ಷೇತ್ರದಲ್ಲಿ ಕಲಕೇರಿ ಹಾಗೂ ಕೋರವಾರ ಹೋಬಳಿ ಕೇಂದ್ರ ಮಾಡಲು ಕಂದಾಯ ಸಚಿವರಿಗೆ ಮನವಿ ಮಾಡಿದ್ದು ಆದಷ್ಟು ಬೇಗ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.