ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದೇಶ ವಿದೇಶಗಳ ಕೃಷ್ಣ ಭಕ್ತರು ಕುತೂಹಲದಿಂದ ಉಡುಪಿಯತ್ತ ಕಣ್ಣುನೆಟ್ಟಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯೋತ್ಸವ ಎಂದರೆ ಕೃಷ್ಣ ಭಕ್ತರಿಗೆ ಸಂಭ್ರಮ. ಆದರೆ ಈ ಬಾರಿಯಂತೂ ವಿಶ್ವಸಂಚಾರಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನ ಪೂಜೆಯ ಅಧಿಕಾರವನ್ನು ವಹಿಸಿಕೊಳ್ಳುತ್ತಿದ್ದಾರೆ. ಇದು ವಿಶ್ವಾದ್ಯಂತ ಇರುವ ಕೃಷ್ಣ ಭಕ್ತರಲ್ಲಿ ವಿಶೇಷ ಸಂಭ್ರಮಕ್ಕೆ ಕಾರಣವಾಗುತ್ತಿದೆ.ಹಿಂದೆ ಪ್ರಯಾಣದ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ಮಾಧ್ವಯತಿಗಳು ಸಮುದ್ರ ದಾಟಿ ಹೋಗುತ್ತಿರಲಿಲ್ಲ. ಆದರೆ ಇಂದು ಎಲ್ಲ ರೀತಿಯ ವ್ಯವಸ್ಥೆಗಳು ಇರುವ ಹಿನ್ನೆಲೆಯಲ್ಲಿ ಪುತ್ತಿಗೆ ಶ್ರೀಗಳು ವಿಶ್ವಾದ್ಯಂತ ಸಂಚರಿಸಿ, ಶ್ರೀ ಕೃಷ್ಣ ಬೋಧಿಸಿದ ಗೀತೆಯ ಪ್ರಸಾರದಲ್ಲಿ ತೊಡಗಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಗಳು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ 15ಕ್ಕೂ ಹೆಚ್ಚು ಕೃಷ್ಣ ಮಂದಿರಗಳನ್ನು ಸ್ಥಾಪಿಸಿದ್ದಾರೆ. ಮುಂದೆ 108 ಕೃಷ್ಣಮಂದಿರಗಳನ್ನು ವಿದೇಶಿ ನೆಲದಲ್ಲಿ ಸ್ಥಾಪಿಸುವ ಮಹತ್ವದ ಸಂಕಲ್ಪವನ್ನು ಕೈಗೊಂಡಿದ್ದಾರೆ.ನಮ್ಮ ದೇಶದಲ್ಲಿಯೇ ದೇವಾಲಯವೊಂದನ್ನು ನಿರ್ಮಿಸುವುದಕ್ಕೆ ಜಮೀನು, ಅನುಮತಿ, ಸಂಪನ್ಮೂಲ ಇತ್ಯಾದಿ ಸಾಕಷ್ಟು ತಲೆನೋವುಗಳಿವೆ. ಅದರಲ್ಲೂ ಅಮೆರಿಕದಂತದ ದೇಶಗಳಲ್ಲಿ ವಿದೇಶದಿಂದ ಬಂದ ಸ್ವಾಮೀಜಿಯೊಬ್ಬರು ದೇವಾಲಯಗಳನ್ನು ನಿರ್ಮಿಸುವುದು ಸುಲಭದ ಮಾತೇನಲ್ಲ.
ಇದಕ್ಕೆ ಪುತ್ತಿಗೆ ಶ್ರೀಗಳು ಕಂಡುಕೊಂಡ ಉಪಾಯವೆಂದರೇ ಅಲ್ಲಿ ಕಾರ್ಯಸ್ಥಗಿತಗೊಂಡಿರುವ ಕ್ರಿಸ್ತ ಮಂದಿರಗಳನ್ನು (ಚರ್ಚುಗಳನ್ನು) ಕೊಂಡು ಅವುಗಳನ್ನು ಕೃಷ್ಣ ಮಂದಿರಗಳನ್ನಾಗಿ ಪರಿವರ್ತಿಸುವುದು ಮತ್ತು ಇದರಲ್ಲಿ ಶ್ರೀಗಳು ಯಶಸ್ವಿಯೂ ಆಗಿದ್ದಾರೆ.ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಭಾರತೀಯ ಹಿಂದುಗಳು, ಅದರಲ್ಲೂ ಕೃಷ್ಣಭಕ್ತ ಮಾಧ್ವರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಉದ್ಯೋಗಕ್ಕಾಗಿ ತಮ್ಮ ದೇಶ, ಊರು, ದೇವಾಲಯಗಳನ್ನು ಬಿಟ್ಟು ಅಲ್ಲಿ ಅನಿವಾರ್ಯ ಅಸಹಾಯಕತೆಯಿಂದ ಬದುಕುತ್ತಿರುವ ಅವರಿಗೆ ಪುತ್ತಿಗೆ ಶ್ರೀಗಳು ಸ್ಥಾಪಿಸಿರುವ ಮಂದಿರಗಳು ನೆಮ್ಮದಿಯ ಕೊಡುಗೆಗಳಾಗಿವೆ. ಭಾರತೀಯರಿಗೆ ಮಾತ್ರವಲ್ಲದೇ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇರುವ ಅಲ್ಲಿನ ಜನರಿಗೂ ಈ ಮಂದಿರಗಳು ಆಕರ್ಷಣೆಗೆ ಕಾರಣವಾಗಿವೆ.
* ಭೇಟಿ ನೀಡಿದ ದೇಶಗಳುಬಹುಶಃ ಪುತ್ತಿಗೆ ಶ್ರೀಗಳು ಸಂಚರಿಸಿದಷ್ಟು ದೇಶಗಳನ್ನು ಬೇರೆ ಯಾವ ಯತಿಗಳು ಸಂಚರಿಸಿದ್ದಿರಲಿಕ್ಕಿಲ್ಲ. ಅವರು ಅಮೆರಿಕ, ಕೆನಡ, ರಷ್ಯ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜೋರ್ಡಾನ್, ಕಜಕಿಸ್ಥಾನ್, ಕಿನ್ಯಾ, ದುಬೈ, ಸಿಂಗಾಪುರ್, ನ್ಯೂಜಿಲ್ಯಾಂಡ್, ಜಪಾನ್, ಸ್ಪೇನ್, ಆಸ್ಟ್ರೀಯಾ, ಜಾಂಜಾನಿಯ, ದಕ್ಷಿಣ ಕೋರಿಯ, ವ್ಯಾಟಿಕನ್ ಮತ್ತು ಯುಕೆಗಳಿಗೆ ಭೇಟಿ ನೀಡಿದ್ದಾರೆ.
* ಪ್ರಶಸ್ತಿ - ಗೌರವಗಳುವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ 3 ಬಾರಿ ಅಧ್ಯಕ್ಷರಾಗಿರುವ ಶ್ರೀಗಳು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶವನ್ನೂ ಪಡೆದಿದ್ದರು. ಶಾಂತಿ ರಾಯಭಾರಿಯಾಗಿ ಅಮೆರಿಕದ ಶ್ವೇತಭವನ, ದ.ಕೋರಿಯಾ, ಆಸ್ಟ್ರೇಲಿಯಾದ ಪಾರ್ಲಿಮೆಂಟ್‌ಗಳಿಗೆ ಹೋಗಿದ್ದಾರೆ. ಪೋಪ್ ಆಮಂತ್ರಣದ ಮೇರೆಗೆ 2 ಬಾರಿ ವ್ಯಾಟಿಕನ್‌ಗೂ ಭೇಟಿ ನೀಡಿದ್ದಾರೆ.
ಶ್ರೀಗಳಿಗೆ ಅಮೆರಿಕದ ಒಕ್ಲಹಾಮ ನಗರದ ಸಿಟಿ ಕೀ ಗೌರವ ಲಭಿಸಿದೆ. ಅರಿಜೋನಾ ರಾಜ್ಯದಲ್ಲಿ ಪ್ರತಿವರ್ಷ ಅ.8ರಂದು ಶ್ರೀಗಳ ಗೌರವಾರ್ಥ ಶ್ರೀ ಸುಗುಣೇಂದ್ರ ಡೇಯನ್ನು ಆಚರಿಸಲಾಗುತ್ತದೆ.ಒಟ್ಟಿನಲ್ಲಿ ಇಸ್ಕಾನ್ ನಂತರ ಕೃಷ್ಣಪ್ರಜ್ಞೆಯನ್ನು ಜಾಗತಿಕ ಮಟ್ಟದಲ್ಲಿ ಹರಡಿದ, ಇನ್ನಷ್ಟು ಹರಡುವ ಆಕಾಂಕ್ಷೆಯಲ್ಲಿರುವ ಪುತ್ತಿಗೆ ಶ್ರೀಗಳ ಪರ್ಯಾಯವು ವಿಶ್ವಾದ್ಯಂತ ಹರಡಿರುವ ಕೃಷ್ಣ ಭಕ್ತರಲ್ಲಿ ಸಂಭ್ರಮವನ್ನು ಹರಡುತ್ತಿದೆ.
ವಿದೇಶಗಳಲ್ಲಿ 15 ಕಡೆಗಳಲ್ಲಿ ಕೃಷ್ಣ ಮಂದಿರಅಮೆರಿಕದ ನ್ಯೂಜೆರ್ಸಿ, ಫಿನಿಕ್ಸ್, ಲಾಸ್ ಏಂಜಲಿಸ್, ಹ್ಯೂಸ್ಟನ್, ಆಸ್ಟಿನ್, ಡಲ್ಲಾಸ್, ಸ್ಯಾನ್ ಓಸೆ, ಅಟ್ಲಾಂಟಾ, ರಾಲೆ, ಶಿಕಾಗೋ ಮತ್ತು ಸಿಯಾಟಲ್ ಹೀಗೆ ಒಟ್ಟು 11 ಕಡೆಗಳಲ್ಲಿ ಪುತ್ತಿಗೆ ಶ್ರೀಗಳು ಕೃಷ್ಣ ವೃಂದಾನವಗಳನ್ನು ಸ್ಥಾಪಿಸಿದ್ದಾರೆ.
ಜೊತೆಗೆ ಕೆನಡಾದ ಟೊರಾಂಟೋ, ಆಸ್ಟ್ರೇಲಿಯಾದ ಮೆಲ್ಬರ್ನ್ ಮತ್ತು ಸಿಡ್ನಿಗಳಲ್ಲಿ ಶ್ರೀ ಕೃಷ್ಣ ವೃಂದಾವನ ಹಾಗೂ ಲಂಡನ್ ನ ವೆಂಬ್ಲಿಎಂಬಲ್ಲಿ ಶ್ರೀ ವೆಂಕಟಕೃಷ್ಣ ಕ್ಷೇತ್ರಗಳನ್ನು ಸ್ಥಾಪಿಸಿದ್ದಾರೆ.