ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳ ಮನವಿಯನ್ನು ಡಿ.3ರಂದು ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ ತಿಳಿಸಿದ್ದಾರೆ.

ಮಂಗಳೂರು: ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳ ಮನವಿಯನ್ನು ಡಿ.3ರಂದು ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ ತಿಳಿಸಿದ್ದಾರೆ.

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರ, ಬೋಲ್ನಾಡ್‌ ಶ್ರೀ ಭಗವತೀ ಕ್ಷೇತ್ರಕ್ಕೆ ಒಳಪಟ್ಟ ತೀಯಾ ಸಮಾಜದ ಪ್ರಮುಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀಯಾ ಸಮಾಜ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.25 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು, ರಾಜ್ಯದಲ್ಲಿ 3,50,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಇದುವರೆಗೆ ಯಾವುದೇ ಸರ್ಕಾರದಿಂದ ನಮ್ಮ ಸಮಾಜಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ಪ್ರಯೋಜನ ಲಭಿಸಿದ್ದು ಹೊರತುಪಡಿಸಿ ಸರ್ಕಾರ ಪ್ರತ್ಯೇಕವಾಗಿ ಯಾವುದೇ ರೀತಿಯಲ್ಲಿ ನಮ್ಮ ಸಮಾಜವನ್ನು ಗುರುತಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ತೀಯಾ ಸಮುದಾಯಕ್ಕೆ ನಿಗಮ ರಚನೆ ಮಾಡಬೇಕೆಂಬ ಪ್ರಮುಖ ಮನವಿ ನೀಡಲಾಗುತ್ತಿದೆ ಎಂದರು.ಅಲ್ಲದೆ ಎಲ್ಲ ಜಿಲ್ಲೆಗಳಲ್ಲಿ ತೀಯಾ ಸಮಾಜ ಭವನ ನಿರ್ಮಾಣಕ್ಕೆ ಸ್ಥಳ ಒದಗಿಸಬೇಕು, ದೇವಸ್ಥಾನಗಳ ದರ್ಶನದವರಿಗೆ, ಆಚಾರಪಟ್ಟವರಿಗೆ ಕೇರಳ ಮಾದರಿಯಲ್ಲಿ ಮಾಶಾಸನ ನೀಡಬೇಕು, ತೀಯಾ ಸಮಾಜಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಮನವಿಯನ್ನೂ ಸಿಎಂಗೆ ಸಲ್ಲಿಸಲಾಗುವುದು ಎಂದು ಸದಾಶಿವ ಉಳ್ಳಾಲ ತಿಳಿಸಿದರು.ವರ್ಕಳದ ಶಿವಗಿರಿ ಮಠದ ನೇತೃತ್ವದಲ್ಲಿ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜಿ ಮತ್ತು ಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಡಿ. 3ರಂದು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ‘ಯತಿಪೂಜೆ’ ಮತ್ತು ಸರ್ವಮತ ಸಮ್ಮೇಳನ ಆಯೋಜನೆಗೊಂಡಿದೆ. ವಿವಿಧ ಮಠಗಳಿಂದ ಆಗಮಿಸುವ 50 ಸನ್ಯಾಸಿಗಳಿಗೆ ಗೌರವ ಸಲ್ಲಿಸಲಾಗುವುದು ಎಂದರು.ಉಳ್ಳಾಲ ಭಗವತಿ ಕ್ಷೇತ್ರದ ಸುರೇಶ್‌ ಭಟ್ನಗರ, ಕುದ್ರೋಳಿ ಭಗವತಿ ಕ್ಷೇತ್ರದ ವಿಶ್ವನಾಥ ಮಂಕಿಸ್ಟ್ಯಾಂಡ್‌, ಪ್ರಮುಖರಾದ ದೇವದಾಸ್‌ ಕೊಲ್ಯ, ಪ್ರೇಮಚಂದ್ರ, ಶಶಿಕಲಾ, ಆಶಾ ಚಂದ್ರಮೋಹನ್‌, ಸುಷ್ಮಾ ದೀಪಕ್‌, ಪುರುಷ ಸಾಲಿಯಾನ್‌, ಸುಧೀರ್‌ ಜೆಪ್ಪು, ಉಮೇಶ್‌ ಬಿಕರ್ನಕಟ್ಟೆ, ಪ್ರಭಾಕರ ಯೆಯ್ಯಾಡಿ, ರವಿ ಕೊಡಿಯಾಲ್‌ಬೈಲ್‌, ರಾಘವ ಆರ್‌. ಉಚ್ಚಿಲ್‌, ರಾಜ್‌ಗೋಪಾಲ್‌, ಉಮೇಶ್‌ ಬೆಂಜನಪದವು, ದಿನೇಶ್‌ ಕುಂಪಲ ಇದ್ದರು.