6 ಕಡೆ ಚೆಕ್‌ಪೋಸ್ಟ್‌ ಸ್ಥಾಪನೆ: ಅಜ್ಜಪ್ಪ ಸೊಗಲದ್

| Published : Mar 20 2024, 01:15 AM IST

6 ಕಡೆ ಚೆಕ್‌ಪೋಸ್ಟ್‌ ಸ್ಥಾಪನೆ: ಅಜ್ಜಪ್ಪ ಸೊಗಲದ್
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಎರಡು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್‌ನ ೯ ತಂಡಗಳನ್ನು ರಚಿಸಲಾಗಿದೆ.

ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ೨೩೩ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ೨೧ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಒಟ್ಟು ೧,೮೪,೬೦೦ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಲ್ಲಾಪುರ ತಾಲೂಕಿನಲ್ಲಿ ೩೩,೪೦೩ ಪುರುಷ ಮತದಾರರು ಮತ್ತು ೩೩,೫೦೯ ಮಹಿಳಾ ಮತದಾರರಿದ್ದು, ಒಟ್ಟು ೬೬,೯೧೨ ಮತದಾರರಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ೩೮,೮೪೪ ಪುರುಷ ಮತದಾರರು ಹಾಗೂ ೩೭,೪೩೭ ಮಹಿಳಾ ಮತದಾರರಿದ್ದು, ಒಟ್ಟು ೭೬,೨೮೧ ಮತದಾರರಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿರಸಿ(ಬನವಾಸಿ) ಯಲ್ಲಿ ೨೦,೮೧೧ ಪುರುಷ ಮತ ಮತದಾರರು ಹಾಗೂ ೨೦,೫೯೬ ಮಹಿಳಾ ಮತದಾರರಿದ್ದು, ಒಟ್ಟು ೪೧,೪೦೭ ಮತದಾರರಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ೯೩,೦೫೮ ಪುರುಷ, ೯೧,೫೪೨ ಮಹಿಳೆ ಮತದಾರರು ಸೇರಿದಂತೆ ೧,೮೪,೬೦೦ ಮತದಾರಿದ್ದಾರೆ ಎಂದರು.

ಕ್ಷೇತ್ರದಲ್ಲಿ ೨,೨೬೮ ಅಂಗವಿಕಲ ಮತದಾರರಿದ್ದಾರೆ. ೮೫ ವರ್ಷ ದಾಟಿದ ೧,೬೮೪ ಮತದಾರಿದ್ದು, ಮತದಾನದಿಂದ ಹೊರಗುಳಿಯುವ ಇಂತಹ ಹಿರಿಯ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಲಾಗುತ್ತದೆ. ಯಲ್ಲಾಪುರ ತಾಲೂಕಿನ ಕಿರವತ್ತಿ, ಮುಂಡಗೋಡ ತಾಲೂಕಿನ ಅಗಡಿ, ಸನವಳ್ಳಿ, ಬಾಚಣಕಿ, ಶಿರಸಿ ತಾಲೂಕಿನ ದಾಸನಕೊಪ್ಪ ಮತ್ತು ತಿಗಣಿಯಲ್ಲಿ ಒಟ್ಟು ಆರು ಕಡೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ಗೆ ತಲಾ ಎರಡು ಅಧಿಕಾರಿಗಳು, ಸಿಬ್ಬಂದಿಯನ್ನು ಒಳಗೊಂಡ ೧೮ ಎಸ್‌ಎಸ್‌ಟಿ ತಂಡಗಳನ್ನು ರಚಿಸಲಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಎರಡು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್‌ನ ೯ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ತಲಾ ಇಬ್ಬರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಡಿಯೋ ಸೇರ್ವಿಲೆನ್ಸ್ ಟೀಮ್(ವಿಎಸ್‌ಟಿ) ಆರು ತಂಡಗಳನ್ನು ರಚಿಸಲಾಗಿದೆ ಎಂದರು.

ಮತದಾನ ಮೇ ೭ರಂದು ನಡೆಯಲಿದೆ. ಮಾ. ೧೬ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆಗೆ ಮುನ್ನ ಆರು ತಿಂಗಳಿಂದ ಪೂರ್ವಭಾವಿ ತಯಾರಿ ನಡೆಸಲಾಗಿದೆ ಎಂದ ಅವರು, ಏ. ೧೨ರ ವರೆಗೆ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದರು.