ಸಾರಾಂಶ
ಜನವಸತಿ ಪ್ರದೇಶಗಳಿಂದ ಕಾರ್ಖಾನೆಗಳು ಸಾಕಷ್ಟು ದೂರದಲ್ಲಿರಬೇಕೆಂಬ ನಿಯಮವಿದೆ. ಕಾರ್ಖಾನೆಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದು ಎಂಬ ಕಾಯ್ದೆ ಇದ್ದರೂ ನಿಯಮ ಉಲ್ಲಂಘಿಸಿ ಕಾರ್ಖಾನೆ ಸ್ಥಾಪಿಸಿದ್ದರಿಂದ 30ಕ್ಕೂ ಹೆಚ್ಚು ಹಳ್ಳಿ ಮತ್ತು ನಗರದ ಜನರಿಗೆ ಆರೋಗ್ಯದ ಸಮಸ್ಯೆಯಾಗುತ್ತಿದೆ.
ಕೊಪ್ಪಳ:
ತಾಲೂಕಿನ ಗಿಣಿಗೇರಿ ಭಾಗದಲ್ಲಿ ಅನೇಕ ಕಾರ್ಖಾನೆಗಳು ನಿಯಮ ಉಲ್ಲಂಘಿಸಿ ಜನವಸತಿ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಆಕ್ರೋಶ ವ್ಯಕ್ತಪಡಿಸಿದರು,ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಗ್ರಾಮೀಣ ಹಾಗೂ ನಗರದ ಬೀದಿಗಳಲ್ಲಿ ಎಂಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆ ಹಾಗೂ ಅಣುಸ್ಥಾವರ ಸ್ಥಾಪನೆ ವಿರುದ್ಧ ಜನ ಜಾಗೃತಿ ಬೀದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನವಸತಿ ಪ್ರದೇಶಗಳಿಂದ ಕಾರ್ಖಾನೆಗಳು ಸಾಕಷ್ಟು ದೂರದಲ್ಲಿರಬೇಕೆಂಬ ನಿಯಮವಿದೆ. ಕಾರ್ಖಾನೆಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದು ಎಂಬ ಕಾಯ್ದೆ ಇದ್ದರೂ ನಿಯಮ ಉಲ್ಲಂಘಿಸಿ ಕಾರ್ಖಾನೆ ಸ್ಥಾಪಿಸಿದ್ದರಿಂದ 30ಕ್ಕೂ ಹೆಚ್ಚು ಹಳ್ಳಿ ಮತ್ತು ನಗರದ ಜನರಿಗೆ ಆರೋಗ್ಯದ ಸಮಸ್ಯೆಯಾಗುತ್ತಿದೆ. ಮನೆಗಳ ಮೇಲೆ ಬೂದಿ ಬೀಳುತ್ತಿದ್ದು ಉಸಿರಾಡುವುದು ಸಮಸ್ಯೆಯಾಗಿದೆ. ಪ್ರಬಲವಾಗಿ ಬೆಳೆದಿರುವ ಕಾರ್ಖಾನೆಗಳಿಂದ ಸ್ಥಳೀಯ ಜನರಿಗೆ ಯಾವುದೇ ಲಾಭವಾಗುತ್ತಿಲ್ಲ. ಸಣ್ಣ ಪುಟ್ಟ ಉದ್ಯೋಗ ನೀಡಿ ಉನ್ನತ ಹುದ್ದೆಗಳನ್ನು ಅನ್ಯರಾಜ್ಯದವರಿಗೆ ನೀಡಲಾಗುತ್ತಿದೆ. ಕಾರ್ಖಾನೆಗೆ ಜಮೀನು ನೀಡಿದವರು ಲಾಭವಿಲ್ಲದೆ ಬೀದಿಪಾಲಾಗಿದ್ದಾರೆ ಎಂದು ಕಿಡಿಕಾರಿದರು.ಟಿಯುಸಿಐ ಸಂಚಾಲಕ ಕೆ.ಬಿ. ಗೋನಾಳ ಮಾತನಾಡಿ, ಬಲ್ಡೋಟಾ ಮಾಲಿಕತ್ವದ ಮಿನರಲ್ಸ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ₹ 54 ಸಾವಿರ ಕೋಟಿ ಹೂಡಿಕೆಯ 1.50 ಎಂಟಿಪಿ ಉಕ್ಕಿನ ಉತ್ಪಾದನಾ ವಿಸ್ತರಣಾ ಘಟಕವನ್ನು ಬಲ್ಡೋಟಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಹೆಸರು ಬದಲಿಸಿಕೊಂಡು, ಸ್ಥಳೀಯ ಜನರ ಗಮನ ಬೇರೆಡೆ ಸೆಳೆಯುವ ಹುನ್ನಾರ ಹೊಂದಿದೆ. ಇಷ್ಟಾದರೂ ಸರ್ಕಾರ ಅನುಮತಿ ನೀಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ನಗರ, ಹಾಲವರ್ತಿ, ಬೆಳವಿನಹಾಳ, ಬೇವಿನಹಳ್ಳಿ, ಹುಲಿಗಿ, ಹೊಸ ಹಾಗೂ ಹಳೆ ಕನಕಪುರದಲ್ಲಿ ಆಂದೋಲನ ಜರುಗಿತು. ಕಾಸನಕಂಡಿ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ಲಾಚನಕೇರಿ ಮುಂತಾದ ಗ್ರಾಮಗಳಲ್ಲಿ ಕಾರ್ಯಕ್ರಮ ಜರುಗಿತು. ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ, ಎಐಟಿಯುಸಿ ಜಿಲ್ಲಾಧ್ಯಕ್ಷ ಬಸವರಾಜ್ ಶೀಲವಂತರ, ಎಐಯುಟಿಯುಸಿ ಮುಖಂಡ ಶರಣು ಗಡ್ಡಿ, ಕೆಆರ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ಬಸವರಾಜ ಪೂಜಾರ ನರೇಗಲ್ಲ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದಕಪ್ಪ ಹೊಸಮನಿ ನರೇಗಲ್ಲ, ರಾಘು ಚಾಕರಿ, ಸುಂಕೇಶ, ಕರ್ನಾಟಕ ವಿದ್ಯಾರ್ಥಿ ಸಂಘದ ದುರುಗೇಶ ಬರಗೂರ, ಯಮನೂರ, ಮಾರುತಿ, ವಿದ್ಯಾರ್ಥಿನಿ ಯಮುನಾ ಮುಂತಾದವರು ಭಾಗವಹಿಸಿದ್ದರು.