ಸಾರಾಂಶ
ಧಾರವಾಡ:
ಉತ್ತರ ಕರ್ನಾಟಕ ಭಾಗದ ಮಾವು ಬೆಳೆಗಾರರ ಬಹುದಿನಗಳ ಬೇಡಿಕೆಯಾಗಿದ್ದ ಮಾವು ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.ನಿರೀಕ್ಷೆಯಂತೆ ಧಾರವಾಡ ಜಿಲ್ಲಾ ಕೇಂದ್ರದಲ್ಲಿಯೇ ಈ ಮಂಡಳಿ ಮುಖ್ಯ ಕಚೇರಿ ಸ್ಥಾಪನೆಗೆ ಜಾಗ ಅಂತಿಮಗೊಂಡಿದ್ದು ಇಲ್ಲಿಯ ಮಾವು ಬೆಳೆಗಾರರಿಗೆ ಖುಷಿ ತಂದಿದೆ. ಭವಿಷ್ಯದಲ್ಲಿ ಈ ಮಂಡಳಿ ಉತ್ತರ ಕರ್ನಾಟಕದಲ್ಲಿ ಮಾವು ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತದೆ. ಜತೆಗೆ ಅಕ್ಕಪಕ್ಕದ ಜಿಲ್ಲೆಗಳಾಗಿರುವ ಕೊಪ್ಪಳ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ ಭಾಗದಲ್ಲಿಯೂ ಮಾವಿನ ತೋಟಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂದಾಜು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿವೆ.ಪ್ರತಿ ವರ್ಷ ಈ ಭಾಗದಲ್ಲಿಯೇ 90 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್‌ನಷ್ಟು ಅಲ್ಪಾನ್ಸೋ ಮಾವು ಉತ್ಪಾದನೆ ಆಗುತ್ತದೆ. ಆದರೆ, ಅದಕ್ಕೆ ತಕ್ಕ ಮಾರುಕಟ್ಟೆ ಇಲ್ಲದೇ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಿದೆ. ಇಲ್ಲಿಯ ಮಾವು ಖರೀದಿಸಿ ದಲ್ಲಾಳಿಗಳು ಮುಂಬೈ, ಗುಜರಾತಗೆ ಕಳುಹಿಸುತ್ತಿದ್ದರು. ಹೀಗಾಗಿ ಉತ್ತರ ಕರ್ನಾಟಕಕ್ಕೆ ಮಾವು ಅಭಿವೃದ್ಧಿ ಮಂಡಳಿ ಬೇಕು ಎಂದು ಈ ಭಾಗದ ಮಾವು ಬೆಳೆಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ರಾಜ್ಯ ಸರ್ಕಾರ ಈ ಮಂಡಳಿಯನ್ನು ಮಂಜೂರು ಮಾಡಿದ್ದು, ಧಾರವಾಡದಲ್ಲಿಯೇ ಮಂಡಳಿ ಸ್ಥಾಪನೆಗೆ ಆದೇಶವಾಗಿದೆ.
₹ 7.5 ಕೋಟಿ ಅನುದಾನ:ಈ ಮಂಡಳಿ ಸ್ಥಾಪನೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ₹ 7.5 ಕೋಟಿ ಅನುದಾನ ಮಂಜೂರಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ಕಾಶಿನಾಥ ಭದ್ರನ್ನವರ ಮಾಹಿತಿ ನೀಡಿದರು. ಇದಕ್ಕಾಗಿ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಜಾಗ ನೀಡಬೇಕಿದೆ. ಧಾರವಾಡ ತಾಲೂಕಿನ ಕುಂಬಾಪುರದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದ ಪಕ್ಕದಲ್ಲಿಯೇ ಒಂದೂವರೆ ಎಕರೆ ಜಾಗವನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ ಜಾಗವನ್ನು ಸ್ವಚ್ಛಗೊಳಿಸಿದ್ದು, ಶಂಕುಸ್ಥಾಪನೆಗೆ ಮುಹೂರ್ತ ನೋಡಲಾಗಿದೆ ಎಂದರು.
ಮಧ್ಯವರ್ತಿ ಹಾವಳಿಗೆ ತಡೆ:ಈ ಮಂಡಳಿ ಸ್ಥಾಪನೆಯಾದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಮಾವಿಗೆ ದೊಡ್ಡ ಮಾರುಕಟ್ಟೆಯೂ ಲಭಿಸಲಿದ್ದು, ರೈತರು ನೇರವಾಗಿ ಮಂಡಳಿ ಮೂಲಕವೇ ಮಾವಿನ ವ್ಯವಹಾರ ಮಾಡಬಹುದು. ಹೀಗಾಗಿ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದೆ ಎಂದವರು ತಿಳಿಸಿದರು.
ವಿದೇಶದಲ್ಲೂ ಬೇಡಿಕೆ:ಧಾರವಾಡ ಭಾಗದ ಅಲ್ಫಾನ್ಸೋ ಮಾವಿನ ಹಣ್ಣಿಗೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಆದರೆ, ಈ ತಳಿ ಹಣ್ಣು ಹಾಗೂ ಅದರ ಉತ್ಪನ್ನ ಗುರುತಿಸದೇ ಹಲವು ವರ್ಷಗಳಿಂದ ದಲ್ಲಾಳಿಗಳೇ ಲಾಭ ಮಾಡಿಕೊಳ್ಳುತ್ತಿದ್ದರು. ಈ ಹಣ್ಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲು ಈ ಕೇಂದ್ರ ಸಹಕಾರಿಯಾಗಲಿದ್ದು, ಮಾವು ತಳಿಗಳ ಅಭಿವೃದ್ಧಿ, ಸಂಶೋಧನೆ, ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ಮಾವಿನ ಹಣ್ಣು ಮತ್ತು ಮಾವಿನ ಕಾಯಿಗೆ ರಫ್ತು ವ್ಯವಸ್ಥೆ ಒದಗಿಸುವ ಕೆಲಸಗಳನ್ನು ಈ ಕೇಂದ್ರ ಮಾಡಲಿದೆ ಎಂದು ಮಾವು ಬೆಳೆಗಾರರ ದೇವೇಂದ್ರ ಜೈನರ್ ಖುಷಿ ವ್ಯಕ್ತಪಡಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿಯುತ್ತಿದ್ದು ಮಾವು ಬೆಳೆಗಾರರು ನಿಧಾನವಾಗಿ ಮಾವು ತೆಗೆದು ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸಿದ್ದರು. ಈ ಸಂದರ್ಭದಲ್ಲಿ ಮಾವು ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾವು ಬೆಳೆಗಾರರಿಗೆ ಎಷ್ಟರ ಮಟ್ಟಿಗೆ ಮಾವು ಉತ್ಪಾದನೆಗೆ ಪುಷ್ಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಲವು ವರ್ಷಗಳಿಂದ ಮಾವು ಅಭಿವೃದ್ಧಿ ಮಂಡಳಿ ಸ್ಥಾಪನೆ ಬಗ್ಗೆ ಹೋರಾಟ ನಡೆದಿತ್ತು. ಈ ಕುರಿತಾಗಿ ತಾವು ಸಹ ಪ್ರಯತ್ನ ಮಾಡಿದ್ದು, ಇದೀಗ ಹೋರಾಟದ ಫಲವಾಗಿ ಮಂಡಳಿ ಧಾರವಾಡಕ್ಕೆ ಬಂದಿದೆ. ಮಾವು ಬೆಳೆಗಾರರು ಮಂಡಳಿಯ ಅನುಕೂಲತೆ ಪಡೆದು ಮಾವು ಉತ್ಪಾದನೆಯಲ್ಲಿ ಗರಿಷ್ಠ ಸಾಧನೆ ಮಾಡಬೇಕು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.