ಕಾಂಗ್ರೆಸ್ ಸರ್ಕಾರದಿಂದ ಮುಸಲ್ಮಾನ್ ರಾಜ್ಯ ಸ್ಥಾಪನೆ: ಕೆ.ಎಸ್‌.ಈಶ್ವರಪ್ಪ

| Published : Sep 10 2025, 01:03 AM IST

ಸಾರಾಂಶ

ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಗುಡುಗಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಗುಡುಗಿದರು.

ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಮುಸಲ್ಮಾನ್ ರಾಜ್ಯ ಮಾಡಲು ಹೊರಟಿದೆ. ಭದ್ರಾವತಿಯ ಶಾಸಕ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಸುಳ್ಳು, ತನಿಖೆ ಆಗಲಿ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಓಲೈಕೆಯಿಂದಲೇ ಇಂದು ಈ ರೀತಿ ಕೂಗುತ್ತೀರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳು ಗಣೇಶೋತ್ಸವ ಮೆರವಣಿಗೆ ಮಾಡಿದರೆ ಮಸೀದಿಯಿಂದ ಕಲ್ಲು ಹೊಡಿತಾರೆ. ರಾಷ್ಟ್ರ ಭಕ್ತರ ಜೊತೆ ಪೊಲೀಸರಿಗೂ ಕಲ್ಲು ಹೊಡೆಯುತ್ತಾರೆ. ಹುಬ್ಬಳ್ಳಿಯಲ್ಲಿ ನಾಲ್ಕು ಜನ ಯುವಕರಿಗೆ ಚಾಕು ಇರಿದಿದ್ದಾರೆ. ರಾಜ್ಯದ ಮುಸಲ್ಮಾನರು ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದರು.

ಮಂಡ್ಯದ ಹೆಣ್ಣು ಮಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ನಾಲ್ಕೈದು ಜನ ಮುಸ್ಲಿಮರನ್ನ ಬಂಧನ ಮಾಡಿದರೆ ಸಾಕಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಗಂಡುಗಲಿ ರೀತಿ ನಿರ್ಧಾರ ಕೈಗೊಳ್ಳಬೇಕಿತ್ತು. ಸಿಎಂ ಹಾಗೂ ಗೃಹ ಸಚಿವರು ಇವರು ಮುಸಲ್ಮಾನರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಹಿಂದೂಗಳು ಜಾತಿ ಜಾತಿ ಅಂತಾರೇ. ಮುಸ್ಲಿಮರು ಒಟ್ಟಾಗಿ ನಮಗೆ ವೋಟ್ ಕೊಡ್ತಾರೆ ಎಂದು ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ರಾಜ್ಯದಲ್ಲಿ ಮುಸಲ್ಮಾನರ ಸಂತೃಪ್ತಿ ಮಾಡಲು ಸರ್ಕಾರ ಹೊರಟಿದೆ. ಅದಕ್ಕಾಗಿಯೇ ಹೀಗೆ ರಾಷ್ಟ್ರದ್ರೋಹಿ ಘೋಷಣೆ ಕೂಗ್ತಾರೆ. ತಕ್ಷಣವೇ ಕಾಂಗ್ರೆಸ್ ಸರ್ಕಾರ ಜಾಗೃತಿಯಾಗಬೇಕು. ಪಾಕಿಸ್ತಾನ ಜಿಂದಾಬಾದ್ ಕೂಗಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಸಾಧ್ಯವಾದ್ರೇ ಅವರನ್ನು ಗಲ್ಲಿಗೇರಿಸಬೇಕು ಎಂದು ಕಿಡಿಕಾರಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ, ಹುಟ್ಟುತ್ತೇನೆ ಎಂಬ ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾಬರಿಗಾದ್ರೂ ಹುಟ್ಟಲಿ, ಅವರು ಯಾರಿಗಾದ್ರೂ ಹುಟ್ಟಲಿ ಎಂದು ಹರಿಹಾಯ್ದರು.

ಮಂಡ್ಯದ ಗಲಾಟೆ ಹಾಗೂ ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಖಂಡಿಸಿ, ರಾಷ್ಟ್ರಭಕ್ತರ ಬಳಗದಿಂದ ಶಿವಮೊಗ್ಗ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.