ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಮೂಲದ ಟ್ರೈಲೈಫ್ ಆಸ್ಪತ್ರೆಯು ನರ ರೋಗಶಾಸ್ತ್ರ ಮತ್ತು ಪುನರ್ವಸತಿಗಾಗಿ 40 ಹಾಸಿಗೆಗಳ ನರಸಂಬಂಧಿತ ಪುನರ್ವಸತಿ (ನ್ಯೂರೋ ರಿಹ್ಯಾಬಿಲಿಟೇಷನ್) ಕೇಂದ್ರ ಮತ್ತು ಕ್ರೀಡಾ ವೈದ್ಯಕೀಯ ಕೇಂದ್ರಗಳನ್ನು ಆರಂಭಿಸಿದೆ.
60,000 ಚದರ ಅಡಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಹೊರರೋಗಿ ವಿಭಾಗ ಮತ್ತು ಪುನರ್ವಸತಿ ಘಟಕವನ್ನು ಸಚಿವ ಕೃಷ್ಣಭೈರೇಗೌಡ, ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಈ ವೇಳೆ ಟ್ರೈಲೈಫ್ ಆಸ್ಪತ್ರೆಯ ಆಡಳಿತ ತಂಡ ಹಾಜರಿತ್ತು.
ಟ್ರೈಲೈಫ್ ಆಸ್ಪತ್ರೆಯು ಅತ್ಯಾಧುನಿಕವಾದ ಹೊರರೋಗಿ ಆರೈಕೆ ಘಟಕವನ್ನೂ ಆರಂಭಿಸಿದೆ. ಆಸ್ಪತ್ರೆಗೆ ಭೇಟಿ ನೀಡುವ ಜನರಿಗೆ ಉತ್ತಮ ಸೌಲಭ್ಯ ನೀಡುವ ಗುರಿ ಹೊಂದಿದೆ. ರೋಗಿಗಳಿಗೆ ವಿಶೇಷ ವೈದ್ಯಕೀಯ ಸಮಾಲೋಚನೆಗಾಗಿಯೇ 4 ಅಂತಸ್ತುಗಳನ್ನು ಮೀಸಲಿರಿಸಲಾಗಿದೆ.
ಮುಂದಿನ 14 ತಿಂಗಳ ಒಳಗೆ ಸಮಾಲೋಚಕರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ. ಕೆಲವು ತಿಂಗಳ ಒಳಗೆ ಆಸ್ಪತ್ರೆ ಪುನರ್ವಸತಿ ವಿಧಾನಗಳಿಗಾಗಿ ರೊಬೊಟಿಕ್ಸ್ ಪರಿಚಯಿಸಲಿದೆ.
ಉದ್ಘಾಟನೆ ಸಂದರ್ಭದಲ್ಲಿ ಟ್ರೈಲೈಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಸ್ಥಾಪಕ ಡಾ। ಎ.ಎಂ.ಶಫೀಕ್ ಮಾತನಾಡಿ, ಇದು ಅತ್ಯಾಧುನಿಕ ಹೊರರೋಗಿ ಆರೈಕೆ ಘಟಕವಾಗಿದ್ದು, ಸಮಗ್ರ ಆರೋಗ್ಯ ಸೇವೆಗೆ ಪ್ರವೇಶದ್ವಾರವಾಗಿ ಸೇವೆ ಸಲ್ಲಿಸಲಿದೆ.
ಸಾಮಾನ್ಯ ಆರೋಗ್ಯ ಪರೀಕ್ಷೆಗಳಿಂದ ಹಿಡಿದು ವಿಶೇಷ ಸಮಾಲೋಚನೆಗಳಿಗೆ ಅವಕಾಶ ಮಾಡಿಕೊಡಲಿದೆ. ನಮ್ಮ ಪ್ರತಿಯೊಬ್ಬ ಪರಿಣತರು ರೋಗಿಯ ಯೋಗಕ್ಷೇಮ, ಜೀವನದ ಗುಣಮಟ್ಟವನ್ನು ವಿಸ್ತರಿಸಲು ಸಜ್ಜಾಗಿದ್ದಾರೆ ಎಂದರು.
ನರ ಸಂಬಂಧಿತ ಪುನರ್ವಸತಿ ಮತ್ತು ಕ್ರೀಡಾ ವೈದ್ಯಕೀಯಕ್ಕೆ ಸಂಪೂರ್ಣ ಅಂತಸ್ತನ್ನು ಮೀಸಲಿಟ್ಟಿದ್ದೇವೆ. ಒಳರೋಗಿಗಳು, ಹೊರರೋಗಿಗಳಿಗೆ ಸೇವೆ ಲಭ್ಯವಿದೆ. ಜೊತೆಗೆ ದೀರ್ಘಕಾಲದವರೆಗೆ ಪುನರ್ವಸತಿ ಸೌಲಭ್ಯದ ಅಗತ್ಯವಿರುವವರಿಗೆ ನೆರವಾಗಲಿದ್ದೇವೆ.
ಅನುಭವಿ ಫಿಜಿಯೋಥೆರಪಿಸ್ಟ್‌ಗಳ ತಂಡ ಪರಿಣತ ಮನಃಶಾಸ್ತ್ರಜ್ಞರು, ಮೂಳೆರೋಗ, ನರರೋಗ ತಜ್ಞರೊಂದಿಗೆ ಕೆಲಸ ಮಾಡುವವರು. ಕ್ರೀಡಾ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ.
ಈ ಘಟಕ ನವಜಾತ ಶಿಶುಗಳಿಂದ ಹಿಡಿದು, ಹಿರಿಯ ವೃದ್ಧರಿಗೆ ಚಿಕಿತ್ಸೆ ನೀಡಲಿದೆ. ಜೊತೆಗೆ ಪ್ರಸವಪೂರ್ವ ಮತ್ತು ಹೆರಿಗೆ ನಂತರದಲ್ಲಿ ಮಹಿಳೆಯರ ಆರೋಗ್ಯ ಸೇವೆಯನ್ನು ಪೂರೈಸಲಿದೆ. ಫಿಜಿಯೋಥೆರಪಿಸ್ಟ್‌ಗಳಿಂದ ಮನೆಯಲ್ಲಿಯೂ ಆರೈಕೆ ನೀಡಲಾಗುತ್ತಿದೆ. ವೈದ್ಯಕೀಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು ಎಂದರು.
ನ್ಯೂರೊ ರಿಹ್ಯಾಬಿಲಿಟೇಷನ್ ಘಟಕದಲ್ಲಿ 24 ಗಂಟೆ ವೈದ್ಯರು ಮತ್ತು ಐಸಿಯು ಬ್ಯಾಕ್‌ಅಪ್ ಸೇವೆಗಳು ಲಭ್ಯವಾಗಲಿವೆ. ಹೈಪರ್ ಡಿಪೆಂಡೆನ್ಸಿ ಘಟಕವಾಗಿ (ಸ್ಟೆಪ್ ಡೌನ್ ಐಸಿಯು) ಇದು ಕಾರ್ಯನಿರ್ವಹಿಸಲಿದೆ.
ಅಲ್ಲದೆ ರೋಗಿಯ ಪ್ರಮುಖ ಅಂಗಗಳ ಮೇಲ್ವಿಚಾರಣೆಗಾಗಿ ರೊಬೊಟಿಕ್ಸ್ ಮತ್ತು ಹೈಪರ್‌ಬ್ಯಾರಿಕ್ ಆಕ್ಸಿಜನ್ (ಎಚ್‌ಬಿಒ2) ಥೆರಪಿ ಸಿಗುತ್ತದೆ. ಜೊತೆಗೆ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಪುನರ್ವಸತಿ, ಆಕ್ಯೂಪೇಷನಲ್ ಥೆರಪಿ ಮತ್ತು ಫಿಜಿಯೋಥೆರಪಿಗಳನ್ನು ಪೂರೈಸಲಿದೆ ಎಂದು ವಿವರಿಸಿದರು.
ಹೊರರೋಗಿಗಳ ಆರೈಕೆ ಘಟಕವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ರೋಗಿಗಳ ಅನುಕೂಲ ಒದಗಿಸಲಿದೆ. ಜವಾಬ್ದಾರಿಯುತ ಯೋಗಕ್ಷೇಮಕ್ಕೆ ನಮ್ಮ ಬದ್ಧತೆ ಎಂದು ಟ್ರೈಲೈಫ್ ಆಸ್ಪತ್ರೆಯ ನಿರ್ದೇಶಕರು ಮತ್ತು ಸಹ ಸಂಸ್ಥಾಪಕ ರಾಮಚಂದ್ರಗೌಡ ಹೇಳಿದರು.