ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಬಾಲಕಿ ಹತ್ಯೆ ಸಹಿಸಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಆಗುತ್ತದೆ, ಮೀನಾ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ. ವಿಶೇಷವಾಗಿ ಸ್ಪೆಷಲ್ ಪ್ರಾಸಿಕ್ಯೂಟರ್ ನೇಮಕ ಮಾಡಿ, ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಕುಂಬಾರಗಡಿಗೆ ಗ್ರಾಮದಲ್ಲಿ ಇತ್ತೀಚೆಗೆ ಬರ್ಬರವಾಗಿ ಹತ್ಯೆ ಆಗಿದ್ದ ಮೀನಾ ಮನೆಗೆ ಗುರುವಾರ ಭೇಟಿ ನೀಡಿದ ಡಾ.ಪರಮೇಶ್ವರ್ ಆಕೆಯ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ಪರಿಹಾರ ನೀಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀತಿ ಸಂಹಿತೆ ಸಡಿಲವಾದ ನಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ಅಲ್ಲಲ್ಲಿ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆದರೆ ಈ ಕೊಲೆಗಳು ಪೂರ್ವಯೋಜಿತ ಕೃತ್ಯಗಳಲ್ಲ. ಆ ಕ್ಷಣಕ್ಕೆ ಮಾಡಿದ ಕೃತ್ಯ ಎಂದು ಕಾಣುತ್ತಿದೆ. ಈ ಬಗ್ಗೆ ತನಿಖೆ ಆದ ಬಳಿಕ ಸತ್ಯಾಂಶ ಬಯಲಿಗೆ ಬರಲಿದೆ. ಪೊಲೀಸ್ ಇಲಾಖೆ ಸಮರ್ಥವಾಗಿದೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಈ ಸಂದರ್ಭ ಪೋಷಕರಿಗೆ ಸಾಂತ್ವನದೊಂದಿಗೆ ಭರವಸೆ ನೀಡಿದರು. ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಮೀನಾಳ ತಾಯಿಯ ಬಳಿ ಇದೇ ಸಂದರ್ಭ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಶಾಸಕ ಮಂತರ್ ಗೌಡ, ಪಕ್ಷದ ಮುಖಂಡರು ಹಾಜರಿದ್ದರು.
ಶೆಟ್ಟರ್ ಸರ್ಟಿಫಿಕೇಟ್ ಬೇಕಿಲ್ಲ: ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಿದೆ.ಕೊಲೆಯಂತಹ ಪ್ರಕರಣಗಳನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಿಲ್ಲಿಯಾಗಿ ತೆಗೆದುಕೊಳ್ಳುತ್ತಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಜಗದೀಶ್ ಶೆಟ್ಟರ್ ಕಾಲದಲ್ಲಿ ಎಷ್ಟು ರೇಪ್ ಆಗಿದ್ದವು ಎಂದು ಪ್ರಶ್ನಿಸಿದರು.
ಅವರ ಕಾಲದಲ್ಲಿ ಎಷ್ಟು ಹತ್ಯೆಯಾಗಿದ್ದವು, ಸುಲಿಗೆ ನಡೆದಿದ್ದವು, ಅವರು ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಪ್ರಕರಣ ದಾಖಲಾಗಿದೆ. ಅವರ ಕಾಲದ ಅಂಕಿಅಂಶ ತೆಗೆದು ನೋಡಿದರೆ ಗೊತ್ತಾಗುತ್ತೆ. ಅವುಗಳನ್ನು ಬಿಚ್ಚಿಡಲಾ ಎಂದು ಪ್ರಶ್ನಿಸಿದರು.ಶೆಟ್ಟರ್ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಜನರು ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದರು.