ಸಾರಾಂಶ
ನಗರದ 4 ಕಡೆ ತಲಾ 100 ಎಕರೆ ಜಾಗದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುವರ್ಣ ವಿಧಾನ ಪರಿಷತ್ : ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ ವಿಷಯದಲ್ಲಿ ದೊಡ್ಡ ಮಾಫಿಯಾ ಇದ್ದು, ಸುಳ್ಳು ಲೆಕ್ಕ, ಬೆದರಿಕೆ ಒಡ್ಡುವಿಕೆ ನಡೆಯುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಆದರೆ ಯಾರು ಏನೇ ಹೇಳಲಿ, ನಗರದ 4 ಕಡೆ ತಲಾ 100 ಎಕರೆ ಜಾಗದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಬಿಜೆಪಿ ಎಂಎಲ್‌ಸಿ ಎಸ್.ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಬೇರೆ ಬೇರೆ ಕ್ರಮ ಕೈಗೊಳ್ಳಲಾಗುವುದು, ತಾವು ನಗರದ ನಾಲ್ಕು ಕಡೆ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಬಗ್ಗೆ ಹೇಳಿದಾಗ ಬಿಜೆಪಿ ಅಧ್ಯಕ್ಷರು 15,500 ಕೋಟಿ ರು.ಗಳ ಭ್ರಷ್ಟಾಚಾರದ ಆರೋಪ ಮಾಡಿದರು. ಆದರೆ, ನಾನು ಇಂತಹ ಮಾತಿಗೆ ಜಗ್ಗುವ ಮಗನೇ ಅಲ್ಲ. ಕಸ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ಯಾರ ಕಾಲದಲ್ಲೂ ಈ ಕಸ ಮಾಫಿಯ ನಿಯಂತ್ರಿಸಲು ಆಗಿಲ್ಲ. ಕಸ ವಿಲೇವಾರಿ ಮಾಡುವವರದ್ದೇ ಒಂದು ಮಾಫಿಯಾ ಆಗಿದೆ. ಬಿಗಿ ಮಾಡಿದರೆ ಕಸ ತೆಗೆಯಲ್ಲ ಎಂದು ಬೆದರಿಸುತ್ತಾರೆ. ಗಾಂಧಿ ಲೆಕ್ಕ, ತಿರುಪತಿ ಲೆಕ್ಕಇದೆ. ಈಗಿರುವ ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ವಾಸನೆ ಬರುತ್ತಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಘಟಕದ ಅಭಿವೃದ್ಧಿಗೆ 200 ಕೋಟಿ ರು. ವಸೂಲಿ ಮಾಡಲಾಗಿದೆ. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕಗಳು ಕೆಲಸ ಮಾಡುತ್ತಿಲ್ಲ. 25-50 ಕೋಟಿ ರು. ವೆಚ್ಚದಲ್ಲಿ ಇಂತಹ ಘಟಕ ಸ್ಥಾಪನೆ ಉಪಯೋಗವಿಲ್ಲ. ಏನಿದ್ದರೂ ಸಾವಿರ, ಎರಡು ಸಾವಿರ ಕೋಟಿ ರು.ಗಳ ಘಟಕ ಸ್ಥಾಪಿಸಿದರೆ ಮಾತ್ರ ಸಮರ್ಪಕವಾಗಿ ನಡೆಸಬಹುದು ಎಂದರು.