ನಿರುದ್ಯೋಗ ನಿವಾರಣೆಗೆ ‘ವಿಂಗ್‌’ ಸ್ಥಾಪನೆ: ಎಚ್‌ಡಿಕೆ

| Published : Oct 19 2024, 12:25 AM IST

ನಿರುದ್ಯೋಗ ನಿವಾರಣೆಗೆ ‘ವಿಂಗ್‌’ ಸ್ಥಾಪನೆ: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಂಸತ್ ಚುನಾವಣೆಗೆ ನಿಂತಾಗ ಜಿಲ್ಲೆಯಲ್ಲಿ ನಿರುದ್ಯೋಗವೇ ಬಹುದೊಡ್ಡ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂತು. ಈ ನಿಟ್ಟಿನಲ್ಲಿ ಜನ ನನ್ನ ಮೇಲೆ ನಂಬಿಕೆ ಇಟ್ಟು ಉದ್ಯೋಗ ಕಲ್ಪಿಸಬಹುದೆಂಬ ಕಾರಣಕ್ಕೆ ನನಗೆ ಮತ ಕೊಟ್ಟಿದ್ದಾರೆ. ಮಂಡ್ಯ ಜನರ ವಿಶ್ವಾಸವನ್ನು ನಾನು ಉಳಿಸಿಕೊಳ್ಳುವೆ. ನಾನು ದೇಶದ ಪ್ರವಾಸ ಮಾಡಿದರೂ ನನ್ನ ಗಮನ ಕರ್ನಾಟಕ ಮತ್ತು ಮಂಡ್ಯ ಜಿಲ್ಲೆಯ ಮೇಲಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸೇರಿದಂತೆ ದೇಶದ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಕೈಗಾರಿಕಾ ಇಲಾಖೆಯಿಂದ ವಿಂಗ್ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ಕೈಗಾರಿಕಾ ಇಲಾಖೆ, ಜಿಲ್ಲಾಡಳಿತ ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ (ಮಂಡ್ಯ ಟು ಇಂಡಿಯಾ)ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರಮುಖ ಸಮಸ್ಯೆಯೇ ನಿರುದ್ಯೋಗವಾಗಿದೆ. ಕೇಂದ್ರದ ಕೈಗಾರಿಕಾ ಸಚಿವನಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದೇ ನನ್ನ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಕೈಗಾರಿಕಾ ಇಲಾಖೆಯ ಸಹಕಾರದಿಂದ ನೂತನ ಆಟೋ ಮೊಬೈಲ್ಸ್ ಇಂಡಸ್ಟ್ರಿಗಳು, ಎಲೆಕ್ಟ್ರಾನಿಕ್ ಸರ್ವೀಸ್ ಸಂಸ್ಥೆಗಳು ಆರಂಭವಾಗಿದ್ದು, ಇವುಗಳ ಸದುಪಯೋಗವನ್ನು ನಿರುದ್ಯೋಗಿಗಳು ಪಡೆದುಕೊಳ್ಳಬೇಕು. ಐಟಿಐ, ಎಲೆಕ್ಟ್ರಾನಿಕ್ ಇಂಜಿನಿಯರ್‌ಗಳಿಗೆ ಕೈಗಾರಿಕಾ ಇಲಾಖೆಯಲ್ಲಿ ಉದ್ಯೋಗಗಳಿಗೆ ಮುಕ್ತ ಅವಕಾಶಗಳಿವೆ. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾಗಿರುವವರಿಗೂ ಉದ್ಯೋಗಾವಕಾಶವಿದೆ. ಆದರೆ ಬೆಂಗಳೂರಿಗೆ ತೆರಳಿ ಕೇವಲ 15 ಸಾವಿರ ರು. ವೇತನ ಪಡೆಯಲು ನಮ್ಮ ಜಿಲ್ಲೆಯ ಯುವಕ, ಯುವತಿಯರು ಹಿಂದೇಟು ಹಾಕುತ್ತಿದ್ದಾರೆ. ಮಂಡ್ಯ ಸುತ್ತಮುತ್ತಲ ಪ್ರದೇಶದಲ್ಲಿ ಉದ್ಯೋಗ ಕಲ್ಪಿಸುವಂತೆ ಕೋರಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಲಾಗುವುದು ಎಂದು ಹೇಳಿದರು.

ದೃತಿಗೆಡುವ ಅವಶ್ಯಕತೆ ಇಲ್ಲ:

ಮಂಡ್ಯ ಉದ್ಯೋಗ ಮೇಳದಲ್ಲಿ ಯುವಕ, ಯುವತಿಯರಿಗೆ ಒಳ್ಳೆಯ ಉದ್ಯೋಗ ಸಿಗುವ ವಿಫುಲ ಅವಕಾಶಗಳಿದ್ದು, ಅವುಗಳನ್ನು ನಿರುದ್ಯೋಗಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ಈ ಉದ್ಯೋಗ ಮೇಳದಲ್ಲಿ ಕನಿಷ್ಠ ಒಂದೂವರೆ ಸಾವಿರ ಮಂದಿಗೆ ಉದ್ಯೋಗ ಸಿಗುವ ಭರವಸೆ ಇದೆ. ಕಂಪ್ಯೂಟರ್ ಇಂಜಿನಿಯರ್ ಸೇರಿದಂತೆ ಉನ್ನತ ವ್ಯಾಸಂಗ ಮಾಡಿರುವ ಅನೇಕರು ಸಹ ಉದ್ಯೋಗಕ್ಕಾಗಿ ಬಂದಿದ್ದಾರೆ. ಅವರಿಗೆ ಸಂಬಂಧಿಸಿದ ಖಾಸಗಿ ಕಂಪನಿಗಳು ಇಲ್ಲಿಗೆ ಆಗಮಿಸಿಲ್ಲ. ಆದರೆ ಅವರು ಧೃತಿಗೆಡುವ ಅವಶ್ಯಕತೆ ಇಲ್ಲ. ಅವರ ಅರ್ಜಿಗಳನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದು, ಡಿಸೆಂಬರ್ ವೇಳೆಗೆ ಉನ್ನತ ವ್ಯಾಸಂಗ ಮಾಡಿರುವ ಅರ್ಜಿದಾರರು ಸೇರಿದಂತೆ, ಮೇಳದಲ್ಲಿ ತಕ್ಷಣಕ್ಕೆ ಉದ್ಯೋಗ ಸಿಗದ ಇನ್ನಿತರ ಅರ್ಜಿದಾರರಿಗೆ ಉದ್ಯೋಗವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜನರ ವಿಶ್ವಾಸ ಉಳಿಸಿಕೊಳ್ಳುವೆ:

ನಾನು ಸಂಸತ್ ಚುನಾವಣೆಗೆ ನಿಂತಾಗ ಜಿಲ್ಲೆಯಲ್ಲಿ ನಿರುದ್ಯೋಗವೇ ಬಹುದೊಡ್ಡ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂತು. ಈ ನಿಟ್ಟಿನಲ್ಲಿ ಜನ ನನ್ನ ಮೇಲೆ ನಂಬಿಕೆ ಇಟ್ಟು ಉದ್ಯೋಗ ಕಲ್ಪಿಸಬಹುದೆಂಬ ಕಾರಣಕ್ಕೆ ನನಗೆ ಮತ ಕೊಟ್ಟಿದ್ದಾರೆ. ಮಂಡ್ಯ ಜನರ ವಿಶ್ವಾಸವನ್ನು ನಾನು ಉಳಿಸಿಕೊಳ್ಳುವೆ. ನಾನು ದೇಶದ ಪ್ರವಾಸ ಮಾಡಿದರೂ ನನ್ನ ಗಮನ ಕರ್ನಾಟಕ ಮತ್ತು ಮಂಡ್ಯ ಜಿಲ್ಲೆಯ ಮೇಲಿರುತ್ತದೆ ಎಂದರು.

ಮಂಡ್ಯ, ಮೈಸೂರು, ತುಮಕೂರು, ಹಾಸನ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಹಲವು ನಗರಗಳಲ್ಲಿ ಬೃಹತ್ ಕೈಗಾರಿಕೋದ್ಯಮ ಸ್ಥಾಪಿಸಬೇಕೆಂಬ ಚಿಂತನೆ ನನಗಿದ್ದು, ಅದಕ್ಕಾಗಿ ಬಂಡವಾಳ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಇದಕ್ಕೆ ನನ್ನ ಜೊತೆಗೆ ರಾಜ್ಯ ಸರ್ಕಾರದ ಸಹಕಾರ ಸಹ ಬೇಕು. ಆದ್ದರಿಂದ ಕೈಗಾರಿಕೋದ್ಯಮಿಗಳ ಜೊತೆಗೆ ಚರ್ಚೆ ನಡೆಸಿದ್ದು, ಕೆಲಸಗಳು ಶೀಘ್ರ ಪ್ರಾರಂಭವಾಗಲಿವೆ ಎಂದು ತಿಳಿಸಿದರು.

ಒಬ್ಬ ಮಂತ್ರಿಯೂ ನನ್ನನ್ನು ಭೇಟಿಯಾಗಿಲ್ಲ:

ಕೇಂದ್ರದ ಕೈಗಾರಿಕಾ ಸಚಿವನಾಗಿರುವ ನನ್ನ ಜೊತೆಗೆ ಕೈಗಾರಿಕಾಭಿವೃದ್ಧಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಒಬ್ಬ ಮಂತ್ರಿಯೂ ನನ್ನನ್ನು ಭೇಟಿಯಾಗಿಲ್ಲ. ಅವರಿಗೆ ರಾಜ್ಯವನ್ನು ಅಭಿವೃದ್ಧಿ ಮಾಡಬೇಕೆಂಬ ಹೃದಯ ವೈಶಾಲ್ಯತೆ ಇಲ್ಲ. ಪರಸ್ಪರ ವಿಶ್ವಾಸದಿಂದ ನಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಬೇಕು. ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಮಾಡಿದರೆ ಅಭಿವೃದ್ಧಿ ಅಸಾಧ್ಯ ಎಂದರು.

ಗಾರ್ಮೆಂಟ್ಸ್‌ ಸ್ಥಾಪನೆಗೆ ಸಿದ್ಧತೆ:

ಮಂಡ್ಯ ಜಿಲ್ಲೆಗೆ ವಿಶೇಷವಾಗಿ ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಗಾರ್ಮೆಂಟ್ಸ್‌ಗಳ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಇದರಿಂದ ಕೇವಲ ಮಂಡ್ಯ ಮಾತ್ರವಲ್ಲದೇ ಅಕ್ಕ- ಪಕ್ಕದ ಜಿಲ್ಲೆಗಳ ಮಹಿಳೆಯರಿಗೆ ತಮ್ಮೂರಿನ ಸಮೀಪದಲ್ಲೇ ಕೆಲಸ ಸಿಕ್ಕಂತಾಗುತ್ತದೆ. ಇದರ ಜೊತೆಗೆ ಕೇಂದ್ರ ಕೈಗಾರಿಕಾ ಇಲಾಖೆ ಸುಪರ್ದಿಗೆ ಬರುವ ಹಲವು ಕಾರ್ಖಾನೆಗಳು ಮುಚ್ಚಿ ಹೋಗಿದ್ದು, ಎಚ್‌ಎಂಟಿ ಸೇರಿದಂತೆ ಅನೇಕ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಪುನರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಶಾಸಕರಾದ ಎಚ್.ಟಿ.ಮಂಜು, ಕೆ.ವಿವೇಕಾನಂದ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಸಾ.ರಾ.ಮಹೇಶ್, ಜಿ.ಬಿ.ಶಿವಕುಮಾರ್, ದೊಡ್ಡನಗೌಡ ನರಿಬೋಳ್, ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ವಿವಿಧ ಖಾಸಗಿ ಕಂಪನಿಗಳ ಮುಖ್ಯಸ್ಥರಾದ ಕೊಹ್ಲಿ, ಶಿವಮೂರ್ತಿ, ಸುರೇಂದ್ರನಾಥ್, ರವಿಕುಮಾರ್, ಪಿ.ಎಂ.ಶರ್ಮಾ, ಸಂಜಯ್ ಬಂಗಾರ್, ಅಮಿತಾಬ್ ಮುಖರ್ಜಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ದಿಶಾ ಸಮಿತಿ ಸದಸ್ಯೆ ವಿದ್ಯಾ ನಾಗೇಂದ್ರ, ಮನ್‌ಮುಲ್ ನಿರ್ದೇಶಕಿ ರೂಪಾ, ಕೇಂದ್ರ ಸಚಿವರಾದ ಆಪ್ತ ಕಾರ್ಯದರ್ಶಿ ಬಿ.ಎನ್.ಕೃಷ್ಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.