ಎತ್ತಿನಹೊಳೆ ಪೈಪ್‌ಲೈನ್‌: 3ನೇ ಹಂತದ ಶುದ್ಧೀಕರಣ ಮರೀಚಿಕೆ

| Published : Oct 24 2024, 12:35 AM IST

ಎತ್ತಿನಹೊಳೆ ಪೈಪ್‌ಲೈನ್‌: 3ನೇ ಹಂತದ ಶುದ್ಧೀಕರಣ ಮರೀಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: 14 ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆ ಪ್ರಾರಂಭದ ದಿನಗಳಲ್ಲಿ ಹೇಳುತ್ತಿದ್ದ ಮಾತುಗಳನ್ನೇ ಈಗಲೂ ಹೇಳುತ್ತಿದ್ದೇವೆ. ಈ ಯೋಜನೆಯಿಂದ ಬಯಲುಸೀಮೆಯ ಜನರ ಕುಡಿಯುವ ನೀರಿನ ಬವಣೆ ನೀಗುವುದಿಲ್ಲ. ಆದರೆ ರಾಜಕೀಯ ಪಕ್ಷಗಳ ಬೆಂಬಲಿಗರು, ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆ ಕುರಿತಂತೆ ಜನರಿಗೆ ಸುಳ್ಳು ಹೇಳುತ್ತಲೇ ಬರುತ್ತಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

ದೊಡ್ಡಬಳ್ಳಾಪುರ: 14 ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆ ಪ್ರಾರಂಭದ ದಿನಗಳಲ್ಲಿ ಹೇಳುತ್ತಿದ್ದ ಮಾತುಗಳನ್ನೇ ಈಗಲೂ ಹೇಳುತ್ತಿದ್ದೇವೆ. ಈ ಯೋಜನೆಯಿಂದ ಬಯಲುಸೀಮೆಯ ಜನರ ಕುಡಿಯುವ ನೀರಿನ ಬವಣೆ ನೀಗುವುದಿಲ್ಲ. ಆದರೆ ರಾಜಕೀಯ ಪಕ್ಷಗಳ ಬೆಂಬಲಿಗರು, ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆ ಕುರಿತಂತೆ ಜನರಿಗೆ ಸುಳ್ಳು ಹೇಳುತ್ತಲೇ ಬರುತ್ತಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

ತಾಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನತೋಟದಲ್ಲಿ ನಡೆದ ರೈತ ನಾಯಕ ದಿ. ಡಾ.ಎನ್.ವೆಂಕಟರೆಡ್ಡಿ ಅವರ 13ನೇ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ಬರುವುದಿಲ್ಲ. ಜನಪ್ರತಿನಿಧಿಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ಪೈಪ್‌ಲೈನ್‌ಗಳನ್ನು ಹಾಕಿಸುವ ಕಡೆಗೆ ಇರುವಷ್ಟು ಆಸಕ್ತಿ 3ನೇ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಮಾಡಿಸುವ ಕಡೆಗೆ ಇಲ್ಲದಾಗಿದೆ ಎಂದು ದೂರಿದರು.

ಜಲಶುದ್ಧೀಕರಣ ಮರೀಚಿಕೆ:

ಇಡೀ ವಿಶ್ವದಲ್ಲಿ ಇಂದು ನಗರಗಳ ತ್ಯಾಜ್ಯ ನೀರನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮಲ್ಲಿ ಸೂಕ್ತ ಶುದ್ಧೀಕರಣ ಇಲ್ಲದೆ ಜನರ ಬದುಕಿಗೆ ಶಾಪವಾಗಿ ಪರಿಣಮಿಸಿದೆ. ಕೆ.ಸಿ.ವ್ಯಾಲಿ ಯೋಜನೆ ಪ್ರಾರಂಭವಾದ ದಿನಗಳಿಂದಲು ಸಹ ದೇಶದ ವಿವಿಧ ಸರ್ಕಾರಿ ಸಂಸ್ಥೆಗಳ ನೀರಿನ ಪರೀಕ್ಷಾ ಕೇಂದ್ರಗಳು, ತಜ್ಞರು ನೀಡಿರುವ ವರದಿಗಳ ಆಧಾರದ ಮೇಲೆ ಯೋಜನೆ ಜಾರಿಗೆ ತರುವಂತೆ ಹೋರಾಟ ಮಾಡುತ್ತಲೇ ಇದ್ದೇವೆ. ಆದರೆ ಜನರಿಗೆ ಹಾಗೂ ಸರ್ಕಾರಕ್ಕೆ ಇನ್ನೂ ತ್ಯಾಜ್ಯ ನೀರಿನ ಅಪಾಯದ ತೀವ್ರತೆಯ ಬಗ್ಗೆ ಅರಿವಾಗಿಲ್ಲ. ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ತುಂಬುತ್ತಿರುವ ಪ್ರದೇಶಗಳ ಜನರಲ್ಲಿ ಕಿಡ್ನಿ, ಪಾರ್ಶ್ವವಾಯು, ಕ್ಯಾನ್ಸರ್‌ಗಳ ಪ್ರಮಾಣ ಹೆಚ್ಚಾಗುತ್ತಿವೆ. ಆದರೆ ಜನರು ಇದೊಂದು ಪೂರ್ವಜನ್ಮದ ಕರ್ಮಫಲದ ರೋಗವೆಂದು ಪರಿಗಣಿಸುತ್ತಿದ್ದಾರೆಯೇ ಹೊರತು, ಅಂತರ್ಜಲ ಸೇರುತ್ತಿರುವ ತ್ಯಾಜ್ಯ ನೀರಿನಲ್ಲಿನ ರಾಸಾಯನಿಕದ ಕಡೆಗೆ ಯಾರೂ ಗಮನವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಹಜ ಸಮೃದ್ಧ ಸಾವಯವ ಸಾಧನೆ:

ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿ ಸಿಇಒ ಸೋಮೇಶ್‌ ಮಾತನಾಡಿ, ರೈತರೆ ಸಂಘಟಿಸಿಕೊಂಡಿರುವ ನಮ್ಮ ಕಂಪನಿ ಇಡೀ ರಾಜ್ಯದಲ್ಲಿಯೇ ಸಾವಯವ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೋಟಿಗಟ್ಟಲೆ ಸಾವಯವ ಕೃಷಿ ಉತ್ಪನ್ನಗಳ ವಹಿವಾಟು ನಡೆಸುತ್ತಿದೆ. ಸಂಸ್ಥೆಯಲ್ಲಿ ನೋಂದಾಯಿತ ರೈತರಿಗೆ ಸಾವಯವ ಕೃಷಿ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೆ ರೈತರ ತೋಟಗಳಿಗೆ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಸಾವಯವ ಕೃಷಿ ಬಗ್ಗೆ ಪರಿಶೀಲಿಸುತ್ತಾರೆ. ನಮ್ಮ ಮಳಿಗೆಗಳಲ್ಲಿ ಮಾರಾಟ ಮಾಡುವಷ್ಟು ಮಾತ್ರ ಕೃಷಿ ಉತ್ಪನ್ನಗಳನ್ನು ರೈತರಿಂದ ಬೆಳೆಸಿಕೊಳ್ಳುತ್ತೇವೆ. ಇದರಿಂದ ರೈತರ ಬೆಳೆಗಳಿಗೆ ಬೆಲೆ ಇಲ್ಲದೆ, ಖರೀದಿ ಇಲ್ಲದೆ ನಷ್ಟ ಅನುಭವಿಸುವುದು ತಪ್ಪುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಲಕ್ಷ್ಮೀದೇವಿಪುರ ಗ್ರಾಮದ ನರಸಿಂಹರಾಜು, ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಮುತ್ತೇಗೌಡ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ನಾಯಕ್, ಕ್ಯಾನ್ಸರ್ ತಜ್ಞ ಡಾ.ವಿಷ್ಣುವರ್ಧನ್ ಇತರರಿದ್ದರು.

22ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನತೋಟದಲ್ಲಿ ರೈತ ನಾಯಕ ದಿ. ಡಾ.ವೆಂಕಟರೆಡ್ಡಿ 13ನೇ ಸ್ಮರಣೆ ಕಾರ್ಯಕ್ರಮ ನಡೆಯಿತು.