ಎತ್ತಿನಹೊಳೆ ನೀರಿಗೂ ಬಂದಿದೆ ಕುತ್ತು: ಸೊಗಡು ಶಿವಣ್ಣ ಆರೋಪ

| Published : May 27 2024, 01:00 AM IST

ಎತ್ತಿನಹೊಳೆ ನೀರಿಗೂ ಬಂದಿದೆ ಕುತ್ತು: ಸೊಗಡು ಶಿವಣ್ಣ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ನೀರಿಗೂ ಕೂಡ ರಾಮನಗರ ಜಿಲ್ಲೆಯ ರಾಜಕಾರಣಿಗಳ ಕಣ್ಣು ಬಿದ್ದಿದ್ದು , ಇದರಲ್ಲೂ ನಮ್ಮ ನೀರಿಗೆ ಕನ್ನ ಹಾಕಲು ಹೊಂಚು ಹಾಕಿ ನೀರು ತೆಗೆದುಕೊಂಡು ಹೋಗಲು ಈಗಾಗಲೇ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ಹೇಮಾವತಿ ನೀರಿನ ಹಂಚಿಕೆಯಲ್ಲೇ 70 ಕಿಮೀ ನಿಂದ 35 ಕಿಮೀ ಎಕ್ಸ್ ಪ್ರೆಸ್ ಕೆನಾಲ್ ಪೈಪ್ ಲೈನ್ ಮೂಲಕ ಮಾಗಡಿಗೆ ನೀರು ಕೊಂಡೊಯ್ಯುವ ಯೋಜನೆಗೆ ಜನರು ವಿರೋಧಿಸುತ್ತಿರುವ ಸಮಯದಲ್ಲೇ ತುಮಕೂರು ಜಿಲ್ಲೆಗೆ ಮತ್ತೊಂದು ಆಘಾತ ಎದುರಾಗಿದೆ.ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿಎಂಸಿ ನೀರಿನಲ್ಲಿ 1.83 ಟಿಎಂಸಿ ನೀರನ್ನು ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳಿಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ಎಲೆರಾಂಪುರಕ್ಕೆ ಭೇಟಿ ನೀಡಿ ಯೋಜನೆಯ ಕಾಮಗಾರಿ ಪರಿಶೀಲಿಸಿ, ವಾಸ್ತವ ಸ್ಥಿತಿ ಅವಲೋಕಿಸಿ, ಸಮಗ್ರ ಮಾಹಿತಿ ಸಂಗ್ರಹಿಸಿ ಅವರು ಮಾತನಾಡಿದರು. ಜಿಲ್ಲೆಯ ರಾಜಕಾರಣಿಗಳು , ಜನಪ್ರತಿನಿಧಿಗಳು, ರೈತರು ಮತ್ತು ಜನರ ದಿಕ್ಕು ತಪ್ಪಿಸಿ ಈ ಯೋಜನೆಯಿಂದ, ಈಗಾಗಲೇ ಕೊರಟಗೆರೆ ತಾಲೂಕು ಎಲೆರಾಂಪುರದ ಬಳಿ ಬೃಹತ್ ಗಾತ್ರದ ಪಂಪ್ ಹೌಸ್, ಪ್ರತ್ಯೇಕ ಕೆಇಬಿ ಸ್ಟೇಷನ್, ಪೈಪ್ ಲೈನ್ ಕೂಡ ಮಾಡಿಕೊಂಡಿದ್ದಾರೆ. ಈ ನೀರಿಗೂ ಕೂಡ ರಾಮನಗರ ಜಿಲ್ಲೆಯ ರಾಜಕಾರಣಿಗಳ ಕಣ್ಣು ಬಿದ್ದಿದ್ದು , ಇದರಲ್ಲೂ ನಮ್ಮ ನೀರಿಗೆ ಕನ್ನ ಹಾಕಲು ಹೊಂಚು ಹಾಕಿ ನೀರು ತೆಗೆದುಕೊಂಡು ಹೋಗಲು ಈಗಾಗಲೇ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಈಗಾಗಲೇ ರಾಜ್ಯ ಸರ್ಕಾರ ನಿರತವಾಗಿದ್ದು , ಪದೇ ಪದೇ ನಾಗರಿಕರು ಮತ್ತು ರೈತರ ಮೇಲೆ ದಬ್ಬಾಳಿಕೆ ಪ್ರವೃತ್ತಿ ಮುಂದುವರೆದಿದೆ, ತುಮಕೂರು ಜಿಲ್ಲೆ ಬರಡಾಗಿ , ಭಾರೀ ಅನ್ಯಾಯವಾಗಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ,ಈ ಯೋಜನೆ ಜನರಿಗೆ ಮರಣಶಾಸನವಾಗಲಿರುವ ಬಗ್ಗೆ ಕಟುವಾಗಿ ಖಂಡಿಸಿದ್ದಾರೆ.ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ನೀರಿನ ಹಂಚಿಕೆಗೆ ಕನ್ನ ಹಾಕುವುದನ್ನು ತಕ್ಷಣವೇ ಕೈ ಬಿಡುವಂತೆ ಒತ್ತಾಯಿಸಿ, ಜಿಲ್ಲೆ ಪ್ರತಿನಿಧಿಸುವ ಮಂತ್ರಿ ಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ, ಜಿಲ್ಲೆಗೆ ಮರಣಶಾಸನವಾಗುವ ಜನವಿರೋಧಿ ಯೋಜನೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡ ಬೆಳಗುoಬ ಪ್ರಭಾಕರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.