ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಬಡವರ ಹಾಗೂ ಕಾರ್ಮಿಕರ ಮನೆಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು.

ಅಧಿಕಾರಿಗಳಿಗೆ ಶಾಸಕ ಸತೀಶ್ ಕೆ. ಸೈಲ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸೂಚನೆ

ಕನ್ನಡಪ್ರಭ ವಾರ್ತೆ ಕಾರವಾರ

ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಬಡವರ ಹಾಗೂ ಕಾರ್ಮಿಕರ ಮನೆಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಶಾಸಕ ಸತೀಶ್ ಕೆ. ಸೈಲ್ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರವಾರದ ಶಿರವಾಡ ಹಾಗೂ ಗಾಂಧಿನಗರದ ನಿವಾಸಿಗಳು ಶಾಸಕರು ಮತ್ತು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದರು. ಸಾರ್ವಜನಿಕರ ಸಮಸ್ಯೆ ಆಲಿಸಿದ ಅವರು, ಮಳೆಗಾಲದ ಅವಧಿಯಲ್ಲಿ ತೆರವು ಕಾರ್ಯಾಚರಣೆ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಕಳೆದ 30-35 ವರ್ಷಗಳಿಂದ ವಾಸವಿದ್ದರೂ, ಹೆಸ್ಕಾಂ ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ದಾಖಲೆಗಳಿದ್ದರೂ ಅರಣ್ಯ ಇಲಾಖೆ ಮನೆ ತೆರವಿಗೆ ಮುಂದಾಗಿದೆ ಎಂದು ನಿವಾಸಿಗಳು ಸಭೆಯಲ್ಲಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಜಮೀನಿನಲ್ಲಿರುವ ಅನಧಿಕೃತ ಕಟ್ಟಡಗಳನ್ನು ಮಾತ್ರ ತೆರವು ಮಾಡಲಾಗುತ್ತಿದೆ ಹಾಗೂ ಇಲಾಖೆಯ ನಿಯಮದಂತೆ ಅಕ್ರಮ-ಸಕ್ರಮ ಮನೆಗಳ ದುರಸ್ತಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ನಿವಾಸಿಗಳ ಪರವಾಗಿ ಮಾತನಾಡಿದ ಮುಖಂಡ ಸಮೀರ್ ನಾಯ್ಕ, ಜನವಸತಿ ಪ್ರದೇಶದ ಮಧ್ಯೆ ಅರಣ್ಯ ಜಮೀನು ಇರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಆಗ್ರಹಿಸಿದರು. ಪರಿಸ್ಥಿತಿ ಆಲಿಸಿದ ಶಾಸಕ ಸೈಲ್ ಹಾಗೂ ಜಿಲ್ಲಾಧಿಕಾರಿಗಳು, ಮುಂದಿನ ಕ್ರಮ ಕೈಗೊಳ್ಳುವವರೆಗೆ ನಿವಾಸಿಗಳಿಗೆ ಯಾವುದೇ ತೊಂದರೆ ನೀಡಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.ಇದೇ ವೇಳೆ ನಗರದ ಗಾಂಧಿನಗರದಲ್ಲಿರುವ ಪೌರಕಾರ್ಮಿಕರ ಕಾಲನಿಯಲ್ಲಿ ವಾಸಿಸುತ್ತಿರುವ ಸುಮಾರು 9 ಕುಟುಂಬಗಳು ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ನಿವಾಸಿಗಳು, ತಾವು ಅನೇಕ ವರ್ಷಗಳಿಂದ ಅಲ್ಲೇ ವಾಸವಾಗಿದ್ದು, ತಮಗೆ ಬೇರೆ ಯಾವುದೇ ಮನೆಮಠವಿಲ್ಲ ಎಂದು ಅಂಗಲಾಚಿದರು. ಮಾನವೀಯತೆ ಆಧಾರದ ಮೇಲೆ ಸ್ಪಂದಿಸಿದ ಶಾಸಕ ಸತೀಶ್ ಸೈಲ್, ಮಳೆಗಾಲ ಮುಗಿಯುವವರೆಗೆ ಈ ಕುಟುಂಬಗಳನ್ನು ಏಕಾಏಕಿ ತೆರವು ಮಾಡಬಾರದು ಎಂದು ಆಯುಕ್ತರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಕೆ. ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಮೀರ ನಾಯ್ಕ, ಪೊಲೀಸ್ ಅಧಿಕಾರಿಗಳು, ನಗರಸಭೆ ಪೌರಾಯುಕ್ತರು, ಅರಣ್ಯ ಇಲಾಖೆಯ ಅಧಿಕಾರಿಗಳಾದ ಕೆ.ಡಿ. ನಾಯ್ಕ, ಕೃಷ್ಣಾನಂದ ಗಾಂವಕರ್ ಸೇರಿದಂತೆ ಶಿರವಾಡ, ಹಾರವಾಡ ಹಾಗೂ ಗಾಂಧಿನಗರದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಹಾರವಾಡ ಕಡಲಕೊರೆತ ಸಮಸ್ಯೆಗೆ ಸ್ಪಂದನೆ

ಇದೇ ವೇಳೆ, ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಉಂಟಾಗುತ್ತಿರುವ ತೀವ್ರ ಕಡಲಕೊರೆತ ಸಮಸ್ಯೆಯ ಬಗ್ಗೆಯೂ ಶಾಸಕರು ಪ್ರಸ್ತಾಪಿಸಿದರು. ಕಡಲಕೊರೆತ ತಡೆಗಟ್ಟುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೆ, ಕಡಲಕೊರೆತದಿಂದ ಈಗಾಗಲೇ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಶೀಘ್ರವಾಗಿ ಪರ್ಯಾಯ ಮನೆಗಳನ್ನು ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.