8 ವರ್ಷ ಕಳೆದರೂ ರೈತರಿಗೆ ಸಿಗದ ಪರಿಹಾರ

| Published : Jul 23 2024, 12:44 AM IST

ಸಾರಾಂಶ

ಪರಿಹಾರದ ಹಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತರು ನಿತ್ಯವೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗಿದ್ದು

ಶಿವಕುಮಾರ ಕುಷ್ಟಗಿ ಗದಗ

ಗದಗ ಬೆಟಗೇರಿ ಅವಳಿ ನಗರಕ್ಕೆ ಪ್ರತಿ ಬೇಸಿಗೆಯಲ್ಲಿ ಎದುರಾಗುವ ಕುಡಿವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ 2016-17ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಗದಗ ತಾಲೂಕಿನ ಪಾಪನಾಶಿ ವ್ಯಾಪ್ತಿಯಲ್ಲಿ ನೀರು ಸಂಗ್ರಹಣೆಗೆ ಕೆರೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ ಆಡಳಿತಾತ್ಮಕ ಒಪ್ಪಿಗೆ ನೀಡಿ ಅಗತ್ಯ ಹಣಕಾಸು ಬಿಡುಗಡೆ ಮಾಡಿತ್ತು.

ಸಧ್ಯ ಯೋಜನೆ ಪ್ರಾರಂಭವಾಗಿ 8 ವರ್ಷ ಕಳೆದಿದ್ದರೂ ಕೆರೆ ಪೂರ್ತಿ ಮುಗಿದಿಲ್ಲ, ನೀರು ಸಂಗ್ರಹವಾಗಿಲ್ಲ, ಅಷ್ಟೇ ಅಲ್ಲ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ನಯಾಪೈಸೆ ಪರಿಹಾರ ಬಂದಿಲ್ಲ. ಪರಿಹಾರದ ಹಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತರು ನಿತ್ಯವೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗಿದ್ದು, ರೈತರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.

ಏನಿದು ಯೋಜನೆ: ಗದಗ ಬೆಟಗೇರಿ ಅವಳಿ ನಗರಕ್ಕೆ ಪ್ರತಿ ವರ್ಷ ಫೆಬ್ರವರಿಯಿಂದ ಮೇ ತಿಂಗಳ ವರೆಗೆ ಬೇಸಿಗೆ ಅವಧಿಯಲ್ಲಿ ಕುಡಿವ ನೀರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ನದಿ ಪಾತ್ರದಲ್ಲಿ ಅಪಾರ ನೀರಿನ ಹರಿವು ಇದ್ದಾಗಲೇ ನೀರು ಸಂಗ್ರಹಿಸಿಟ್ಟುಕೊಳ್ಳಲು ಪಾಪನಾಶಿ ಬಳಿ ಕೆರೆ ನಿರ್ಮಾಣ ಮಾಡಿ ಅಲ್ಲಿಂದ ಅವಳಿ ನಗರಕ್ಕೆ ನೀರು ಪೂರೈಕೆ ಮಾಡಲು ಸರ್ಕಾರ 2-6-2017 ರಂದು ಆದೇಶ ಹೊರಡಿಸಿದೆ. ಕೆರೆ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಬೇಸಮೆಂಟ್‌ ಕಾಮಗಾರಿ ಮಾತ್ರ ಮುಗಿದಿದ್ದು, ಬಳಿಕ ಕಾಮಗಾರಿ ನನೆಗುದಿಗೆ ಬಿದ್ದಿದೆ. ನೀರೂ ಸಂಗ್ರಹವಾಗಿಲ್ಲ, ನಗರದ ಜನರ ನೀರಿನ ದಾಹವೂ ತೀರಿಲ್ಲ, ಭೂಮಿ ಕೊಟ್ಟ ರೈತರಿಗೆ ಪರಿಹಾರವೂ ಬಂದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಅತೀ ಜರೂರು ಯೋಜನೆಯೊಂದು ಅರ್ಧಕ್ಕೆ ನಿಂತಿದೆ.

59.9 ಎಕರೆಯಲ್ಲಿ ಕೆರೆ ನಿರ್ಮಾಣ: ಗದಗ ತಾಲೂಕಿನ ಪಾಪನಾಶಿ ಬಳಿಯಿದ್ದ 11 ಎಕರೆ 9 ಗುಂಟೆ ಸರ್ಕಾರಿ ಜಮೀನು ಹಾಗೂ ಇನ್ನುಳಿದ 48 ಎಕರೆ ಖಾಸಗಿ ಜಮೀನಿನಲ್ಲಿ (ರೈತರ) ಕೆರೆ ನಿರ್ಮಾಣ ಮಾಡುವಂತೆ ಅಂದು ಶಾಸಕರಾಗಿದ್ದ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸರ್ವೇ ನಂಬರ್ 723ರ ವಿವಿಧ ಹಿಸ್ಸಾಗಳ ಅಡಿಯಲ್ಲಿ 48 ಎಕರೆ ರೈತರ ಭೂಮಿ ಬಳಕೆ ಮಾಡಿಕೊಂಡು ಕೆರೆ ನಿರ್ಮಿಸಬೇಕು. ಅವರಿಗೆ ಸರ್ಕಾರದ ನಿಯಮಗಳ ಪ್ರಕಾರ ಪರಿಹಾರ ನೀಡುವಂತೆ ಸಭೆಯಲ್ಲಿ ನಿರ್ಧರಿಸಲಾಗಿತ್ತು.

8 ವರ್ಷ ಕಳೆದರೂ ಏನೂ ಆಗಿಲ್ಲ: ಈ ಯೋಜನೆ ಪ್ರಾರಂಭವಾಗಿ 8 ವರ್ಷ ಕಳೆದಿದ್ದು, ಇದುವರೆಗೂ ಜಮೀನು ಕಳೆದುಕೊಂಡ ರೈತರಿಗೆ ಯಾವುದೇ ರೀತಿಯ ಪರಿಹಾರ ಕೊಟ್ಟಿಲ್ಲ. ಅಷ್ಟೇ ಅಲ್ಲ ಕೆರೆ ನಿರ್ಮಾಣ ಕಾಮಗಾರಿ ಕೂಡಾ ಸಮರ್ಪಕವಾಗಿಲ್ಲ. ಈ ಕೆರೆ ನಿರ್ಮಾಣದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಅದೇಕೊ ಈಗ ನಿರಾಸಕ್ತಿ ವಹಿಸಿದ್ದೇ ಈ ಯೋಜನೆ ಇಷ್ಟೊಂದು ನನೆಗುದಿಗೆ ಬೀಳಲು ಕಾರಣವಾಗಿದೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

2 ಲಕ್ಷ ಜನರಿಗೆ ಅನುಕೂಲ: ಪ್ರತಿ ಬೇಸಿಗೆಯಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿರುವ 2 ಲಕ್ಷ ಜನರು ಇನ್ನಿಲ್ಲದಂತೆ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಈ ಯೋಜನೆ ರೂಪಿತವಾಗಿತ್ತು. ಅಲ್ಲಿ ನೀರು ಸಂಗ್ರಹಣಾ ಕೆರೆ ನಿರ್ಮಾಣ ಯೋಜನೆ ಅವಶ್ಯಕತೆಯೂ ಇತ್ತು. ಇದರಿಂದ ಜನರಿಗೆ ಉಪಯುಕ್ತವೂ ಆಗುತ್ತದೆ ಎನ್ನುವ ಆಶಾಭಾವನೆ ಇತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ವರ್ಷ ಕಳೆದರೂ ಅದು ಪೂರ್ಣಗೊಂಡಿಲ್ಲ.

ಜಿಲ್ಲಾಧಿಕಾರಿಗಳ ಮೂಲಕ ಅನುದಾನಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪತ್ರ ರವಾನಿಸಲಾಗಿದೆ ಎಂದು ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್ ತಿಳಿಸಿದ್ದಾರೆ.