ಸಾರಾಂಶ
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರುವಿಚ್ಛೇದನ ಮಂಜೂರಾಗಿದೆ ಹಾಗೂ ವಿಚ್ಛೇದಿತ ಪತ್ನಿ ಉದ್ಯೋಗ ಮಾಡುತ್ತಾ ವೇತನ ಪಡೆಯುತ್ತಿದ್ದಾರೆ ಎಂಬ ಕಾರಣದಿಂದ ತನ್ನ ಅಪ್ರಾಪ್ತ ಮಗುವಿಗೆ ಜೀವನಾಂಶ ಪಾವತಿಸುವ ಶಾಸನಬದ್ಧ ಕರ್ತವ್ಯದಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್, ಅಪ್ರಾಪ್ತ ಮಗಳಿಗೆ ನೀಡಲು ನಿಗದಿಪಡಿಸಲಾಗಿರುವ ಮಾಸಿಕ ಐದು ಸಾವಿರ ರು. ಜೀವನಾಂಶ ಮೊತ್ತವನ್ನು ಕಡಿತಗೊಳಿಸಲು ಕೋರಿದ ತಂದೆಯ ಕಿವಿ ಹಿಂಡಿದೆ.
ಅಪ್ರಾಪ್ತ ಮಗಳಿಗೆ ಮಾಸಿಕ ಐದು ಸಾವಿರ ರು. ಜೀವನಾಂಶ (ಜೀವನ ನಿರ್ವಹಣಾ ವೆಚ್ಚ) ನೀಡಲು 2014ರ ಸೆ.30ರಂದು ಚಾಮರಾಜನಗರದ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ಹೊರಡಿಸಿದ ಆದೇಶ ಹಾಗೂ ಅದನ್ನು ಕಾಯಂಗೊಳಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಮರು ಪರಿಶೀಲನಾ ನ್ಯಾಯಾಲಯ) 2025ರ ಮಾ.28ರಂದು ಹೊರಡಿಸಿರುವ ಆದೇಶ ರದ್ದುಪಡಿಸಲು ಕೋರಿ ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣ ನಿವಾಸಿ ಎ.ಕೆ. ಅರುಣ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮೊಗದಂ ಅವರ ಪೀಠ ಈ ಆದೇಶ ಮಾಡಿದೆ.ವಿಚಾರಣಾ ನ್ಯಾಯಾಲಯಗಳು ನಿಗದಿಸಿರುವ ಜೀವನಾಂಶದ ಮೊತ್ತ ಹೆಚ್ಚಿದೆ ಹಾಗೂ ತನ್ನ ಸಾಮರ್ಥ್ಯಕ್ಕೆ ಮೀರಿದೆ. ವಿಚ್ಛೇದಿತ ಪತ್ನಿ ಉದ್ಯೋಗ ಮಾಡುತ್ತಿದ್ದು, ಮಾಸಿಕ 61 ಸಾವಿರ ರು. ವೇತನ ಪಡೆಯುತ್ತಿದ್ದಾರೆ. ವಿವಾಹ ಅಸಿಂಧುಗೊಂಡು, ವಿಚ್ಚೇದನ ಮಂಜೂರಾಗಿದ್ದರೂ ಮತ್ತು ಪತ್ನಿಯು ಮಗುವನ್ನು ಆರೈಕೆ ಮಾಡಲು ಆರ್ಥಿಕ ಸಾಮರ್ಥ್ಯ ಹೊಂದಿದ್ದರೂ ವಿಚಾರಣಾ ನ್ಯಾಯಾಲಯಗಳು ಮಗುವಿನ ಜೀವನಾಂಶಕ್ಕೆಂದು ಮಾಸಿಕ 5 ಸಾವಿರ ರು. ನೀಡಬೇಕೆಂಬ ಹೊರೆ ಹಾಕಿದೆ. ಇದು ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಜೀವನಾಂಶ ಮೊತ್ತವನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದರು.
ಈ ವಾದ ಒಪ್ಪದ ಹೈಕೋರ್ಟ್, ವಿಚ್ಛೇದಿತ ಪತ್ನಿ 61 ಸಾವಿರ ರು. ಮಾಸಿಕ ವೇತನ ಪಡೆಯುತ್ತಾರೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯ-ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಗಳ ಮುಂದಿರಿಸಿಲ್ಲ. ಹಾಗೊಂದು ವೇಳೆ ಮಗುವಿನ ತಾಯಿ ಆದಾಯ ಮೂಲ ಹೊಂದಿರುವುದಾಗಿ ಕಲ್ಪಿಸಿಕೊಂಡರೂ ಸಹ ಮಗಳ ಜೀವನ ನಿರ್ವಹಣೆಯ ಕಾನೂನುಬದ್ಧ ಹೊಣೆಗಾರಿಕೆಯಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.ಅಪರಾಧ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 125 ಅಡಿ ಪ್ರಕಾರ ತನ್ನ ಗಳಿಕೆಯ ಸಾಮರ್ಥ್ಯ ಮತ್ತು ಜೀವನದಲ್ಲಿನ ಸ್ಥಾನಮಾನಕ್ಕೆ ಅನುಗುಣವಾಗಿ ಅಪ್ರಾಪ್ತ ಮಗುವಿನ ಅಗತ್ಯಗಳನ್ನು ಪೂರೈಸುವ ಶಾಸನಬದ್ಧ ಬಾಧ್ಯತೆ ಹಾಗೂ ಕರ್ತವ್ಯವನ್ನು ತಂದೆ ಹೊಂದಿರುತ್ತಾರೆ. ಅಧೀನ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಮಾಸಿಕ ಐದು ಸಾವಿರ ರು. ಹೆಚ್ಚಲ್ಲ ಮತ್ತು ವಿಚಾರಹೀನವಾಗಿಲ್ಲ ಎಂದು ಹೈಕೋರ್ಟ್ ಕಟುವಾಗಿ ನುಡಿದಿದೆ.
ಜೀವನಾಂಶ ಮೊತ್ತ ಕಡಿಮೆಯಿದೆ:ಪ್ರಸ್ತುತ ನಿರಂತರವಾಗಿ ಜೀವನ ವೆಚ್ಚ, ಶೈಕ್ಷಣಿಕ ವೆಚ್ಚ, ವೈದ್ಯಕೀಯ ಅಗತ್ಯತೆಗಳ ವೆಚ್ಚು ಹೆಚ್ಚುತ್ತಿದೆ. ಬೆಳೆಯುತ್ತಿರುವ ಮಗುವಿನ ಅಗತ್ಯತೆಗಳನ್ನು ಗಮನಿಸಿದರೆ ವಿಚಾರಣಾ ನ್ಯಾಯಾಲಯಗಳು ನಿಗದಿಪಡಿಸಿರುವ ಜೀವನಾಂಶ ಮೊತ್ತ ಕಡಿಮೆ ಇದೆ. ಆದ್ದರಿಂದ ಅಧೀನ ನ್ಯಾಯಾಲಯಗಳ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಯಾವುದೇ ದೃಷ್ಟಿಕೋನದಿಂದಲೂ ಅರ್ಜಿದಾರರ ವಾದ ಒಪ್ಪಲಾಗದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಆದರೆ, ಭವಿಷ್ಯದಲ್ಲಿ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆಗಳು ಸೃಷ್ಟಿಯಾದರೆ ಜೀವನಾಂಶದ ಮೊತ್ತದಲ್ಲಿ ಮಾರ್ಪಾಡು ಮಾಡಲು ಅಧೀನ ನ್ಯಾಯಾಲಯವನ್ನು ಕೋರುವ ಮುಕ್ತ ಅವಕಾಶವನ್ನು ಅರ್ಜಿದಾರರು ಹೊಂದಿದ್ದಾರೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.