ಸಾರಾಂಶ
ಕನ್ನಡ ರಾಜ್ಯೋತ್ಸವದಲ್ಲಿ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುತ್ತಾ ಬಂದರೂ ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಹಾಗೆಯೇ ಉಳಿದಿವೆ. ಕೆಲವೂ ಇನ್ನು ಹೆಚ್ಚು ಗಂಭೀರವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಗಡಿ ವಿವಾದ, ನೆರೆ ರಾಜ್ಯಗಳೊಂದಿಗಿನ ನೀರಿನ ಹಂಚಿಕೆ, ಮಣ್ಣಿನ ಮಕ್ಕಳಿಗೆ ಉದ್ಯೋಗದ ಆದ್ಯತೆ, ಮಾತೃಭಾಷೆಯಲ್ಲಿ ಶಿಕ್ಷಣ ಮುಂತಾದವುಗಳು ಸವಾಲುಗಳಾಗಿಯೇ ಮುಂದುವರಿದಿವೆ ಎಂದರು. ಕನ್ನಡ ನಾಡು ಕಟ್ಟುವುದರೆಂದರೆ ನಮ್ಮನ್ನು ಕಟ್ಟಿಕೊಳ್ಳುತ್ತಲೇ ಕನ್ನಡದ ಎಲ್ಲಾ ಮನಸ್ಸು, ಹೃದಯಗಳನ್ನು ಬೆಸೆಯುವಂತಹುದಾಗಿದೆ. ತಾಯಿ ಮೇಲೆ ಪ್ರೀತಿ ವಾತ್ಸಲ್ಯ ಹೇಗಿದೆಯೋ ಹಾಗೇ ತಾಯ್ನಾಡಿನ ಭಾಷೆಯ ಬಗ್ಗೆ ಪ್ರೀತಿ, ವಾತ್ಸಲ್ಯ ನಮ್ಮಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ನಾಡು ಪ್ರಕಾಶಮಾನವಾಗಿ ಬೆಳಗಲಿದೆ. ದೇಶ, ನಾಡು ಕಟ್ಟುವ ಮತ್ತು ಸಾಮರಸ್ಯಯುತ ಸಂಬಂಧಗಳನ್ನು ಬೆಸೆಯುವ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಸುವ ಕೆಲಸವನ್ನು ನಾವೆಲ್ಲಾ ಒಗ್ಗಟ್ಟಿನಿಂದ ಮಾಡಬೇಕಿದೆ ಎಂದರು.
ರಾಜ್ಯದ ಏಕೀಕರಣಕ್ಕೆ ತಮ್ಮ ತನು-ಮನಗಳನ್ನು ಪಣಕ್ಕಿಟ್ಟು ದುಡಿದು ದಣಿದ ದಿವ್ಯ ಚೇತನರು ಮತ್ತು 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ಮಾಡಿದ ಅಂದಿನ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ್ ಅರಸು ಅವರ ನುಡಿ, ನೆಲ ಮತ್ತು ಸಂಸ್ಕೃತಿ ಬಗೆಗಿನ ಭಾವನಾತ್ಮಕ ಪ್ರೇರಣೆ, ನಾಡುಕಟ್ಟುವ ಸಂಘಟಿತ ಪ್ರಯತ್ನಗಳಿಂದಾಗಿಯೇ ನಾವಿಂದು ಸ್ವಾಭಿಮಾನಿ ಕನ್ನಡದ ಪ್ರಜೆಗಳಾಗಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿದ್ದೇವೆ. ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಮತ್ತು ಪ್ರಜಾಸತ್ತಾತ್ಮಕ ಕಲ್ಯಾಣ ರಾಜ್ಯದ ವಾರಸುದಾರರಾಗಿದ್ದೇವೆ. ಮುಂದಿನ ದಿನಗಳಲ್ಲಿಯೂ ನಾವು ಈ ಅಸ್ಮಿತೆಗಳನ್ನು ಶ್ರೇಷ್ಠ ಸಾಂಸ್ಕೃತಿಕ ಮೌಲ್ಯಗಳನ್ನು, ಕಲ್ಯಾಣ ರಾಜ್ಯದ ಆದರ್ಶಗಳನ್ನು ಇವತ್ತಿನ ಭಾರತೀಯ ಸಂವಿಧಾನದ ಆಶಯದ ಬೆಳಕಿನಲ್ಲಿ ಬಿತ್ತಿ ಬೆಳೆಯುವ ಮೂಲಕ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗುವ ಕನಸುಗಳನ್ನು ನಿತ್ಯವೂ ವಾಸ್ತವಗೊಳಿಸುವ ಕರ್ತವ್ಯದಲ್ಲಿ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ ಎಂದರು. ಇಂದು ನಮ್ಮ ಕನ್ನಡ ಬಂಧುಗಳು ವಿಶೇಷವಾಗಿ ಯುವ ಪ್ರತಿಭೆಗಳು ಜಗತ್ತಿನಾದ್ಯಂತ ಕನ್ನಡದ ಜ್ಯೋತಿಯನ್ನು ಹಚ್ಚುತ್ತಿದ್ದಾರೆ. ಕನ್ನಡ ನೆಲದ ಮೂಲದ ಕಂಪನವನ್ನು ಬಿತ್ತುತ್ತಿದ್ದಾರೆ, ಬೀರುತ್ತಿದ್ದಾರೆ. ಉದಯವಾಗಲಿ ನಮ್ಮ ಚಲುವ ಕನ್ನಡನಾಡು ಎಂದು ಆರಂಭವಾದ ಕನ್ನಡನಾಡು ನುಡಿಕಟ್ಟುವ ಕೆಲಸ ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಎಂದೆವಿಸುತ್ತಾ ಎಲ್ಲಾ ಜಾತಿ ಜನಾಂಗಗಳು ಅರಿಶಿನ ಕುಂಕುಮವಿಟ್ಟು ಬಾಗೀನ ಕೊಡುವಂತೆ, ಹಳದಿ ಕೆಂಪು ಬಣ್ಣದ ಬಾವುಟವನ್ನು ಜಗತ್ತಿನಾದ್ಯಂತ ಹಾರಿಸುತ್ತಿದ್ದಾರೆ. ನರನಾಡಿಗಳನ್ನು ಹೊಸೆದು, ಬೌದ್ಧಿಕ ಶಕ್ತಿಯ ಜ್ಯೋತಿಯ ಮುಟ್ಟಿಸಿ, ಹಚ್ಚಿ ಬೆಳಗಿಸುತ್ತಿರುವ ಕನ್ನಡದ ದೀಪ ಕತ್ತಲ ಜಗತ್ತಿಗೆ ಬೆಳಕು ನೀಡುವಂಥಹುದಾಗಿದೆ ಎಂದರು. ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ ಜ್ಞಾನ ಭಾರತಿ ಶಾಲೆ ಹಾಗೂ ಸಂತ ಜೋಸೆಫ್ ಶಾಲೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕೃತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ‘ಅವ್ವ ಕಣೋ ಕನ್ನಡ, ನಮ್ ಜೀವ ಕಣೋ ಕನ್ನಡ’, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ’ ಚಿತ್ರಗೀತೆಗಳಿಗೆ ಅಮೋಘ ಎನಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಭಾವಾಭಿನಯದೊಂದಿಗೆ ನೃತ್ಯ ಪ್ರದರ್ಶಿಸಿದರು.ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 28 ಮಂದಿ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸನ್ಮಾನಿಸಿದರು. ಕರ್ನಾಟಕಕ್ಕೆ 50ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ 5 ಕವಿಗಳು ರಚಿಸಿರುವ ಗೀತೆಗಳನ್ನು ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಕಲಾವಿದರು ಹಾಡಿದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ತಹಸೀಲ್ದಾರ್ ನಾಗವೇಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು. ಶಿವರಾಂ ಹಾಗೂ ಗಣೇಶಯ್ಯ ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು. ---------------------