ತಾಲೂಕಿನಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಾ ಇದೀಗ ಪಟ್ಟಣದಲ್ಲಿ ಮುಗಿಯುವ ಹಂತಕ್ಕೆ ಬಂದು ನಿಂತಿದೆ.
ಮೇಲ್ಸೇತುವೆ ಕೈಬಿಟ್ಟು ಕಾಮಗಾರಿ ಪೂರ್ಣ । ಅಧಿಕಾರಿಗಳ, ಗುತ್ತಿಗೆ ಕಂಪನಿಯವರ
ನಿರ್ಲಕ್ಷ್ಯಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಾ ಇದೀಗ ಪಟ್ಟಣದಲ್ಲಿ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಹೀಗಿದ್ದೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನರಿಗೆ ಅನುಕೂಲದ ಬದಲು ಅನಾನುಕೂಲವನ್ನೇ ಉಂಟು ಮಾಡಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆ ಕಂಪನಿಯವರ ಕೆಲವು ಧೋರಣೆಯಿಂದ ಇಲ್ಲಿ ಸಮಸ್ಯೆಗಳೇ ಸೃಷ್ಟಿಯಾಗಿವೆ.
ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಮಾಡುವ ಸಮಯದಲ್ಲಿ ಇಲ್ಲಿನ ಜನರು, ಸಂಘಟನೆಗಳು ಮೇಲ್ಸೇತುವೆ ನಿರ್ಮಿಸುವಂತೆ ಹೇಳಿದ್ದರು. ಅವರು ಸಹ ಮೇಲ್ಸೇತುವೆ ಇರಲಿದೆ ಎಂದು ಆರಂಭದಲ್ಲಿ ಹೇಳಿದ್ದರು. ಅದಕ್ಕಾಗಿ ೬೫ ಮೀ ನಷ್ಟು ಜಾಗ ಗುರುತಿಸಲಾಗಿತ್ತು. ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಯ ಧಾರಣ ಶಕ್ತಿಯ ಪರೀಕ್ಷೆ ನಡೆಸಲಾಗಿತ್ತು. ಆದರೆ ನಂತರದಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ೩೫ ಮೀ ಗಳಿಗೆ ತಗ್ಗಿಸಿದ ಪ್ರಾಧಿಕಾರ ಸರ್ವಿಸ್ ರಸ್ತೆ ಮತ್ತು ಮೇಲ್ಸೇತುವೆಯನ್ನು ಕೈಬಿಟ್ಟು ಕಾಮಗಾರಿಯನ್ನು ಮುಗಿಸುವತ್ತ ಬಂದಿದೆ. ಇದರಿಂದ ನಿತ್ಯವೂ ಒಂದಲ್ಲ ಒಂದು ಅಪಘಾತ ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಪಟ್ಟಭದ್ರರ ಹಿತಾಸಕ್ತಿ ಕಾಯಲು ಜನರಿಗೆ ದೊರಕಿಸಬೇಕಾದ ಅವಕಾಶಗಳನ್ನು ಹೆದ್ದಾರಿ ಇಲಾಖೆ ನೀಡುತ್ತಿಲ್ಲ ಎಂಬ ಮಾತುಗಳು ಪಟ್ಟಣದಲ್ಲಿ ಕೇಳಿಬರುತ್ತಿದೆ.ಬಸ್ ನಿಲ್ದಾಣಗಳೇ ಇಲ್ಲ:
ಹೆದ್ದಾರಿ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಪ್ರಮುಖ ವೃತ್ತದಲ್ಲಿ ಬಸ್ ಸ್ಟಾಪ್ ಕಿತ್ತೆಸೆದಿದ್ದಾರೆ. ಬಸ್‌ಗೆ ಕಾಯುವ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಪಟ್ಟಣದ ಶರಾವತಿ ವೃತ್ತ, ಹೈವೇ ವೃತ್ತ, ಗೇರುಸೊಪ್ಪಾ ವೃತ್ತದ ಬಳಿ ಬಸ್ ಕಾಯುವವರಿಗೆ ಸಮರ್ಪಕ ಬಸ್ ಸ್ಟಾಪ್ ನಿರ್ಮಿಸಿಕೊಡಲೇಬೇಕು ಎಂಬುದು ಸಾಮಾನ್ಯ ಜನರ ಬೇಡಿಕೆಯಾಗಿದೆ.ನಾಪತ್ತೆಯಾದ ಆಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್:
ಗೇರುಸೊಪ್ಪ ವೃತ್ತ ಹಾಗೂ ಹೈವೇ ವೃತ್ತದ ಮೂಲಕ ನಿತ್ಯವೂ ಹೊನ್ನಾವರದಿಂದ ಬೇರೆ ಬೇರೆ ಕಡೆ ಹೋಗುವವರು ಬಸ್ ಹಾಗೂ ಇತರ ವಾಹನಗಳನ್ನು ಕಾಯುವ ಸ್ಥಳವಾಗಿದ್ದರಿಂದ ಈ ಹಿಂದೆ ರೋಟರಿ, ಲಯನ್ ಸಂಸ್ಥೆಯಂತಹ ಸಂಘಟನೆಗಳು ಬಸ್ ಸ್ಟಾಪ್ ನಿರ್ಮಿಸಿದ್ದವು. ಆದರೆ ಹೆದ್ದಾರಿ ವಿಸ್ತರಣೆಗೆ ಅದನ್ನು ಕಿತ್ತೆಸೆಯಲಾಗಿದೆ. ಈಗ ಈ ಪ್ರದೇಶದಲ್ಲಿ ಜನ ನಿಲ್ಲಲು ತಂಗುದಾಣ ಇಲ್ಲದಂತಾಗಿದೆ. ವಾಹನ ನಿಲ್ಲಿಸಲು ಸ್ಥಳ ಇಲ್ಲದಂತೆ, ಜನ ವಾಹನ ಕಾಯಲು ಸ್ಥಳ ಇಲ್ಲದಂತೆ ಮಾಡಿ ಹೆದ್ದಾರಿ ಗುತ್ತಿಗೆ ಕಂಪನಿ ರಸ್ತೆ ಕಾಮಗಾರಿ ಮುಗಿಸಿಬಿಟ್ಟಿದೆ.ಪಟ್ಟಣದಲ್ಲಿ ಈ ಮೊದಲಿನಿಂದಲೂ ಆಟೋ, ಟ್ಯಾಕ್ಸಿ ಹಾಗೂ ಟೆಂಪೋ ಸ್ಟ್ಯಾಂಡ್ ಗಳು ರಸ್ತೆ ಪಕ್ಕದಲ್ಲೇ ಇತ್ತು. ಇದರಿಂದ ಗ್ರಾಹಕರಿಗೆ ತಕ್ಷಣ ವಾಹನ ಪಡೆಯಲು ಸಹಾಯವಾಗುತ್ತಿತ್ತು. ಆದರೆ ಈಗ ಅವೆಲ್ಲವೂ ನಾಪತ್ತೆಯಾಗಿದೆ. ಕಾಮಗಾರಿಯ ಪೂರ್ವ ಆಟೋ, ಟ್ಯಾಕ್ಸಿ ಹಾಗೂ ಟೆಂಪೋ ಸ್ಟ್ಯಾಂಡ್‌ಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಕೊಡುವ ಭರವಸೆ ಕೊಟ್ಟವರು ಈಗ ನಾಪತ್ತೆಯಾಗಿದ್ದಾರೆ.
ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸ್ಥಳೀಯ ಸಂಘಟನೆಗಳು ಜನಪ್ರತಿನಿಧಿಗಳ ಹಾಗೂ ಸರ್ಕಾರದ ಗಮನಕ್ಕೂ ತಂದಿತ್ತು. ಕೈಬಿಟ್ಟ ಮೇಲ್ಸೇತುವೆಗಾಗಿ, ರಸ್ತೆ, ಚರಂಡಿ ಹೀಗೆ ಹಲವು ಕಷ್ಟಗಳ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಬದಲಾಗುತ್ತಿರುವ ಜನಪ್ರತಿನಿಧಿಗಳು ಆರಂಭದಲ್ಲಿ ಗುತ್ತಿಗೆ ಕಂಪನಿಯ ವಿರುದ್ಧ ವೀರಾವೇಷದಲ್ಲಿ ಮಾತನಾಡಿ ಕೊನೆಗೆ ತಣ್ಣಗಾಗುತ್ತಿರುವುದು ಸಮಸ್ಯೆ ಇತ್ಯರ್ಥಗೊಳ್ಳದಿರಲು ಕಾರಣವಾಗಿದೆ. ಇನ್ನಾದರೂ ಹೆದ್ದಾರಿ ಇಲಾಖೆ ಪಟ್ಟಣದ ಹೆದ್ದಾರಿಯ ಅವ್ಯವಸ್ಥೆ ಕುರಿತು ಗಮನ ಹರಿಸಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.ಮಳೆ ಬಿಸಿಲು ಎನ್ನದೆ ಪ್ರಯಾಣಿಕರು ರಸ್ತೆಯ ಪಕ್ಕದಲ್ಲಿ ನಿಲ್ಲಬೇಕು. ರಸ್ತೆಯ ಪಕ್ಕದಲ್ಲಿ ಪ್ರಯಾಣಿಕರ ತಂಗುದಾಣಗಳು ಇದ್ದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಯಸ್ಸಾದವರು, ರೋಗಿಗಳಿಗೆ ಈ ತಂಗುದಾಣಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುತ್ತಾರೆ ಪ್ರಯಾಣಿಕ ಅನಂತ.