ಸಾರಾಂಶ
ಶಿರಹಟ್ಟಿ ತಾಲೂಕಿನ ತಾಲೂಕಿನ ಹೊಳೆ-ಇಟಗಿ ಗ್ರಾಮದ ಹತ್ತಿರ ಇಟಗಿ-ಸಾಸಲವಾಡ ಬಳಿ ಮೂರು ದಶಕಗಳ ಹಿಂದೆ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದ್ದರೂ ರೈತರ ಜಮೀನಿಗೆ ಒಂದು ಹನಿ ನೀರು ತಲುಪಿಲ್ಲ. ಈ ಬಾರಿ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಸಿಗಬಹುದೇ ಎಂದು ರೈತರು ಕಾಯುತ್ತಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಶಿರಹಟ್ಟಿ ತಾಲೂಕು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು, ತುಂಗಭದ್ರಾ ನದಿ ನೀರು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಕಾರವಾಗದೇ ಅನ್ನದಾತರು ಪರಿತಪಿಸುತ್ತಿದ್ದಾರೆ.ರೈತರ ಹಿತ ಕಾಯುವುದಕ್ಕಾಗಿ ತಾಲೂಕಿನ ಹೊಳೆ-ಇಟಗಿ ಗ್ರಾಮದ ಹತ್ತಿರ ಇಟಗಿ-ಸಾಸಲವಾಡ ಬಳಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ೧೯೯೦-೯೨ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆರಂಭದಲ್ಲೇ ಪೂರ್ಣ ಪ್ರಮಾಣದ ನೀರು ಹರಿಸಲು ಸಾಧ್ಯವಾಗದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಬೇಕಾದ ಯೋಜನೆ ಹಳ್ಳಹಿಡಿದಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ಇಟಗಿ -ಸಾಸಲವಾಡ, ತಂಗೋಡ, ಕನಕವಾಡ, ಹೆಬ್ಬಾಳ, ತೊಳಲಿ, ಕಲ್ಲಾಗನೂರ, ವಿಠಲಾಪುರ ಗ್ರಾಮಗಳು ಸೇರಿದಂತೆ ಒಟ್ಟು ೧೧ ಗ್ರಾಮಗಳ ರೈತರ ಜಮಿನುಗಳಿಗೆ ನೀರಾವರಿ ಒದಗಿಸಿ, ೧,೯೮೪ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿತ್ತು. ವಿಪರ್ಯಾಸವೆಂದರೆ ಆರಂಭವಾದಾಗಿನಿಂದಲೂ ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾ ಬಂದಿದೆ. ಒಂದು ಹನಿ ನೀರು ರೈತರ ಜಮೀನುಗಳಿಗೆ ತಲುಪಿಲ್ಲ. ರೈತರ ಆಶಾದಾಯಕವಾದ ಈ ಯೋಜನೆ ಅನುಷ್ಠಾನ ಯಾವಾಗ? ಎನ್ನುವ ಪ್ರಶ್ನೆ ಸದಾ ಕಾಡುತ್ತಿದೆ.ಹರಿಯದ ನೀರು: ತಾಲೂಕನ್ನು ಸದಾ ಹಚ್ಚಹಸಿರಾಗಿಡಲು ಬಯಸಿ ಇಟಗಿ-ಸಾಸಲವಾಡ ಏತ ನೀರಾವರಿ, ಕೆರೆ ತುಂಬಿಸುವಂತಹ ಯೋಜನೆಗಳನ್ನು ಕೈಗೊಂಡರೂ ಅವುಗಳನ್ನು ಸಾಕಾರಗೊಳಿಸುವಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದು, ರೈತರ ನೀರಾವರಿ ಕನಸು ಕನಸಾಗಿಯೇ ಉಳಿದಿದೆ. ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಈ ಯೋಜನೆಯ ಅಭಿವೃದ್ಧಿಗಾಗಿ ಮತ್ತು ದುರಸ್ತಿಗಾಗಿ ಕೋಟಿ ಕೋಟಿ ರು. ಅನುದಾನ ಬಳಕೆ ಮಾಡಿಕೊಂಡಿದ್ದು, ರೈತರ ಜಮೀನುಗಳಿಗೆ ಮಾತ್ರ ಹನಿ ನೀರು ಬಂದಿಲ್ಲ.
೨೦೦೬ರಲ್ಲಿ ಬೃಹತ್ ಹೋರಾಟ: ಕಳೆದ ೨೦೦೬ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ಶ್ರೀ ರಾಮುಲು ನೇತೃತ್ವದಲ್ಲಿ ಈ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ಬೃಹತ್ ಪ್ರಮಾಣದಲ್ಲಿ ಹೋರಾಟ ಕೂಡ ಮಾಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೋ ಈ ಯೋಜನೆ ರೈತರಿಗೆ ವರವಾಗಿಲ್ಲ. ನೀರು ಹರಿಸಲು ರೈತರ ಜಮೀನುಗಳಲ್ಲಿ ಕಾಲುವೆಗಳನ್ನು ನಿರ್ಮಿಸಿದ್ದು, ರೈತರ ನೀರಾವರಿ ಕನಸು ಮಾತ್ರ ಮೂರು ದಶಕ ಕಳೆದರೂ ಈಡೇರಿಲ್ಲ. ಸರ್ಕಾರ ರೈತರ ಪರ ವಿಶೇಷ ಕಾಳಜಿ ತೋರಿ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಟ್ಟು, ರೈತರ ಮೂರು ದಶಕದ ನೀರಾವರಿ ಕನಸನ್ನು ಈಡೇರಿಸಬೇಕಾಗಿದೆ. ಮಳೆಯಾಶ್ರಿತ ಈ ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಉತ್ಪನ್ನ ಬರದೇ ಇರುವುದರಿಂದ ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಅನುದಾನ ನೀಡಿ ಯೋಜನೆ ಮೂಲಕ ರೈತರ ಬಾಳು ಹಸನು ಮಾಡಬೇಕು ಎಂದು ಈ ಭಾಗದ ರೈತರ ಕೂಗಾಗಿದೆ.ಸರ್ಕಾರ ರೈತರ ಹಿತ ಕಾಪಾಡಲು ಅತ್ಯಂತ ಮಹತ್ವವಾದ ಇಟಗಿ- ಸಾಸಲವಾಡ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದು, ಅದರ ಅನುಷ್ಠಾನಕ್ಕೆ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ. ಅಧಿಕಾರಿಗಳು ಹೆಚ್ಚು ಗಮನ ಹರಿಸಿ ರೈತರ ಹಿತ ಕಾಪಾಡಲು ಮುಂದಾಗಬೇಕಿದೆ. ನದಿಯ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರೈತರ ಆರ್ಥಿಕ ಸಂಕಷ್ಟ ದೂರ ಮಾಡಬೇಕಾಗಿರುವುದು ಅವಶ್ಯಕವಾಗಿದೆ. ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳಸಬೇಕಾಗಿದೆ ಎಂದು ಸ್ಥಳೀಯ ಮುಖಂಡ ಡಿ.ಕೆ. ಹೊನ್ನಪ್ಪನವರ ಹೇಳುತ್ತಾರೆ.