ರೈತರು ಉತ್ಪಾದಿಸುವ ಇಂಧನದಿಂದ ವಿಮಾನವೂ ಚಲಿಸುತ್ತೆ: ಕೇಂದ್ರ ಸಚಿವ ನಿತೀನ್‌ ಗಡ್ಕರಿ

| Published : Oct 05 2024, 01:41 AM IST

ರೈತರು ಉತ್ಪಾದಿಸುವ ಇಂಧನದಿಂದ ವಿಮಾನವೂ ಚಲಿಸುತ್ತೆ: ಕೇಂದ್ರ ಸಚಿವ ನಿತೀನ್‌ ಗಡ್ಕರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ದೇಶದ ಮತ್ತು ಪ್ರಪಂಚದ ಭವಿಷ್ಯದ ಸಂರಕ್ಷಕರು, ಭಾರತ ಹಾಗೂ ಜಗತ್ತಿನಲ್ಲಿ ವಾಹನಗಳಿಗೆ ಸಿಎನ್‌ಜಿ ಬಳಕೆ ಹೆಚ್ಚಾಗಿದ್ದು, ಇದಕ್ಕೆ ರೈತರ ಕೊಡುಗೆ ಅಪಾರವಾಗಿದೆ. ಸಿಎನ್‌ಜಿಗೆ ಬಯೋಗ್ಯಾಸ್ ಬಳಸಿದರೆ ದೇಶ ರೈತರ ಎಂಜಿನ್‌ನಲ್ಲಿ ಓಡುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರೈತರು ದೇಶದ ಮತ್ತು ಪ್ರಪಂಚದ ಭವಿಷ್ಯದ ಸಂರಕ್ಷಕರು, ಭಾರತ ಹಾಗೂ ಜಗತ್ತಿನಲ್ಲಿ ವಾಹನಗಳಿಗೆ ಸಿಎನ್‌ಜಿ ಬಳಕೆ ಹೆಚ್ಚಾಗಿದ್ದು, ಇದಕ್ಕೆ ರೈತರ ಕೊಡುಗೆ ಅಪಾರವಾಗಿದೆ. ಸಿಎನ್‌ಜಿಗೆ ಬಯೋಗ್ಯಾಸ್ ಬಳಸಿದರೆ ದೇಶ ರೈತರ ಎಂಜಿನ್‌ನಲ್ಲಿ ಓಡುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ಹೇಳಿದರು.ನಿಪ್ಪಾಣಿಯಲ್ಲಿ ಶುಕ್ರವಾರ 40 ವರ್ಷಗಳ ಕಾಲ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ್ದಕ್ಕಾಗಿ ಡಾ.ಪ್ರಭಾಕರ ಕೋರೆ ಅವರಿಗೆ ಪೌರಸನ್ಮಾನ ಹಾಗೂ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ಎಂಬಿಎ, ಎಂಸಿಎ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎನ್‌ಜಿ ಬಳಕೆಯಿಂದ ಪ್ರತಿ ಕಿಮೀಗೆ ₹1 ಖರ್ಚು ಬಂದರೆ, ಪೆಟ್ರೋಲ್ ವಾಹನಕ್ಕೆ ಕಿಮೀಗೆ ₹2.25 ಖರ್ಚು ಬರುತ್ತದೆ. ಬರುವ ದಿನಗಳಲ್ಲಿ ರೈತರು ಉತ್ಪಾದಿಸುವ ಇಂಧನದಿಂದ ವಿಮಾನವೂ ಚಲಿಸಲಿದೆ ಎಂದು ಅಭಿಪ್ರಾಯಪಟ್ಟರು.

ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರು ಬೆಳೆದ ಬೆಳೆ ಮಾರುಕಟ್ಟೆಗೆ ಬಂದಾಗ ಮಾತ್ರ ಸಾಧ್ಯ. ಬೆಳಗಾವಿ ಮತ್ತು ಕೊಲ್ಲಾಪುರ ಜಿಲ್ಲೆಗಳು ತರಕಾರಿ ಮತ್ತು ಕಬ್ಬು ಬೆಳೆಗೆ ಹೆಸರುವಾಸಿಯಾಗಿವೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ, ಆರೋಗ್ಯ, ಕೃಷಿ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡಾ.ಪ್ರಭಾಕರ ಕೋರೆ ಅವರು ಸಮಾಜಕ್ಕೆ ಸೇವೆ ಸಲ್ಲಿಸಿದ ಡಾ.ಕೋರೆಯವರ ಕಾರ್ಯ ಶ್ಲಾಘನೀಯ. ಕಲಿಕೆಯ ನಂತರವೇ ಪ್ರಗತಿಯಾಗುತ್ತದೆ. ಅದಕ್ಕಾಗಿ ಶಿಕ್ಷಣದ ಬಾಗಿಲು ತೆರೆದವರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಡಾ.ಕೋರೆ ಅವರ ಕಾರ್ಯ ಬೆಳಗಾವಿ ಜಿಲ್ಲೆಯ ಪುಟ್ಟ ಹಳ್ಳಿಯಿಂದ ದೆಹಲಿಯಿಂದ ಶತಸಮುದ್ರದತ್ತ ವ್ಯಾಪಿಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ಸಂಸ್ಥೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆಯಲ್ಲಿದ್ದಾರೆ. ಕೆಎಲ್ ಇ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿ ಜ್ಞಾನ ಧಾರೆ ಎರೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.

ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ, ವ್ಯಾಪಾರಿ ಕೇಂದ್ರ ಸ್ಥಾನವಾಗಿರುವ ನಿಪ್ಪಾಣಿ ಜನತೆಗೆ ಬಹುದಿನಗಳ ಕನಸಾಗಿರುವ ರೈಲ್ವೆ ಲೈನ್‌ನ್ನು ಮಂಜೂರು ಮಾಡುವಂತೆ ಕೇಂದ್ರ ಸಚಿವ ಗಡ್ಕರಿ ಹಾಗೂ ಪ್ರಲ್ಹಾದ ಜೋಶಿ ಅವರಲ್ಲಿ ಮನವಿ ಮಾಡಿದರು.

ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ವಿಎಸ್‌ಎಂ ಸಂಸ್ಥೆ ಹಾಗೂ ಕೆಎಲ್‌ಇ ಸಂಸ್ಥೆಗೆ ಅವಿಭಾವ ಸಂಬಂಧವಿದೆ. ಡಾ.ಪ್ರಭಾಕರ ಕೋರೆಯವರ ಸುದೀರ್ಘ 40 ವರ್ಷಗಳು ಕೆಎಲ್‌ಇ ಸಂಸ್ಥೆಗೆ ನೀಡಿದ ಕೊಡುಗೆ ಸ್ಮರಿಸಿದ ಅವರು, ಅವರಿಗೆ ನಿಪ್ಪಾಣಿ ಜನತೆ ಪೌರ ಸನ್ಮಾನ ಮಾಡಿರುವುದು ಹರ್ಷ ತಂದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಡಾ.ಕೋರೆಯವರ ಕಾರ್ಯವನ್ನು ಸ್ಮರಿಸಿದರು. ಶಶಿಕಲಾ ಜೊಲ್ಲೆ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಜಗದೀಶ ಕವಟಗಿಮಠ, ಕಾಕಾಸಾಹೇಬ ಪಾಟೀಲ, ಪ್ರೊ. ಸುಭಾಸ ಜೋಶಿ, ಉತ್ತಮ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ಕೆಎಲ್‌ಇ, ವಿಎಸ್‌ಎಂ ಸಂಸ್ಥೆ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಎಸ್ಎಂ ಸಂಸ್ಥೆ ಚಂದ್ರಕಾಂತ ಕೋಠಿವಾಲೆ ಸ್ವಾಗತಿಸಿದರು.ಭಾರತವಿಂದು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿದ್ದು, ವಿವಿಧ ಯೋಜನೆಗಳ ಮೂಲಕ ಬಲಿಷ್ಠ ಭಾರತ ರೂಪಿಸಲು ಕೇಂದ್ರ ಸರ್ಕಾರ ಕಾರ್ಯತತ್ಪರವಾಗಿದೆ. ಸ್ವದೇಶಿ, ಸ್ವಾವಲಂಬನೆ, ಆದಾಯ ಹೆಚ್ಚಳ, ಶಿಕ್ಷಣದ ಜತೆಗೆ ಸಂಸ್ಕೃತಿಯೂ ಹೆಚ್ಚಬೇಕು. ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ನಾಗರಿಕರನ್ನು ತಯಾರು ಮಾಡಬೇಕಿದೆ. ಜಾತೀಯತೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಿಸಬೇಕು.

ನಿತೀನ್ ಗಡ್ಕರಿ ಕೇಂದ್ರ ಸಾರಿಗೆ ಸಚಿವ