ಕ್ರಿಸ್ತ ಹುಟ್ಟುವ ಮುನ್ನವೇ ಕನ್ನಡ ಆಡು ಭಾಷೆ

| Published : Nov 02 2025, 02:00 AM IST

ಸಾರಾಂಶ

ಇಂಗ್ಲಿಷ್‌ಗಿಂತ ಕನ್ನಡ ಒಂದೂವರೆ ಸಾವಿರ ವರ್ಷದಷ್ಟು ಪ್ರಾಚೀನ ಭಾಷೆ. ಕ್ರಿಸ್ತ ಹುಟ್ಟುವ ಮುನ್ನವೇ ಕನ್ನಡ ಆಡು ಭಾಷೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಚಿತ್ರದುರ್ಗ: ಇಂಗ್ಲಿಷ್‌ಗಿಂತ ಕನ್ನಡ ಒಂದೂವರೆ ಸಾವಿರ ವರ್ಷದಷ್ಟು ಪ್ರಾಚೀನ ಭಾಷೆ. ಕ್ರಿಸ್ತ ಹುಟ್ಟುವ ಮುನ್ನವೇ ಕನ್ನಡ ಆಡು ಭಾಷೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಉಪನಿಷತ್ತು, ಮಹಾಭಾರತ ಮತ್ತು ತಮಿಳು ಕಾವ್ಯಗಳಲ್ಲಿ ಕನ್ನಡಿಗರ ಉಲ್ಲೇಖವಿದೆ. ಕ್ರಿ.ಶ 450ರ ಹಲ್ಮಿಡಿ ಶಾಸನದಿಂದ ನಮ್ಮ ಭಾಷೆ ಬರಹರೂಪಕ್ಕೆ ಬಂದು ಸಾಹಿತ್ಯ ರೂಪ ಪಡೆದು ಗ್ರಂಥಸ್ಥ ಸ್ವರೂಪಕ್ಕೆ ಬಂದಿತು ಎಂದರೆ ಆಶ್ಚರ್ಯವಾಗುತ್ತದೆ. ಸರ್ಕಾರ ಈ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲ್ಮಿಡಿ ಶಾಸನದ ಪ್ರತಿರೂಪವನ್ನು ಎಲ್ಲರೂ ನೋಡಲೆಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದೆ ಎಂದರು. ಒಂದು ನಾಡಿನ ನಿಜವಾದ ಸಂಪತ್ತು ಎಂದರೆ ಪರರ ಧರ್ಮ ಹಾಗೂ ಪರರ ವಿಚಾರವನ್ನು ಸಹನೆಯಿಂದ ಕಾಣುವುದು ಎಂದು 9ನೇ ಶತಮಾನದ ಗ್ರಂಥ ಕವಿರಾಜ ಮಾರ್ಗದಲ್ಲಿ ಹೇಳಲಾಗಿದೆ. ಪರಧರ್ಮ ಸಹಿಷ್ಣುತೆಯೇ ಕನ್ನಡ ನಾಡಿನ ನಿಜ ಅಂತಃಸತ್ವ. ಕನ್ನಡ ನಾಡು ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಹಲವು ಧರ್ಮಗಳಿದ್ದರೂ ಸಾಮರಸ್ಯದಿಂದ ಎಲ್ಲರೂ ಬದುಕುತ್ತಿದ್ದೇವೆ. ಇದು ಕನ್ನಡಿಗರ ಔದಾರ್ಯ, ಮಾನವೀಯತೆಯನ್ನು ಜಗತ್ತಿಗೆ ಎತ್ತಿ ತೋರಿಸಿದೆ. ಕನ್ನಡ ನಾಡಿನ ಬಹುತೇಕ ಸಾಹಿತಿಗಳು ತಮ್ಮ ಕಾವ್ಯದಲ್ಲಿ ಇದನ್ನು ಚಿತ್ರಿಸಿದ್ದಾರೆ ಎಂದು ತಿಳಿಸಿದರು.

ಮಾರ್ಕ್ಸ್ ವಾದ, ಸ್ತ್ರೀವಾದ, ಅಸ್ತಿತ್ವವಾದ, ಕಾಯಕದ ಸಮಾನತೆ ಇಂತಹ ಹಲವು ತಾತ್ವಿಕ ಸಿದ್ಧಾಂತಗಳನ್ನು ಎಂಟುನೂರು ವರ್ಷಗಳ ಮೊದಲೇ ಕನ್ನಡಿಗ ವಚನಕಾರರ ತಾತ್ವಿಕ ವಿಚಾರಗಳಾಗಿದ್ದವು. ಕುಮಾರವ್ಯಾಸರು, ಕನಕದಾಸರು, ಪುರಂದರದಾಸರ ವಿಚಾರಗಳು ಸಮಾಜ ಸುಧಾರಣೆಯ ಚಿಂತನೆಗಳಾಗಿವೆ. ಆಧುನಿಕ ಕವಿಗಳಾದ ಕುವೆಂಪು, ಮಾಸ್ತಿ, ಬೇಂದ್ರೆ, ಗೋಕಾಕ್, ಕಾರ್ನಾಡ್, ಕಂಬಾರ ಮುಂತಾದವರು ಕನ್ನಡದ ಭಾಷಾ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನಾಡನ್ನಾಳಿದ ಎಲ್ಲಾ ರಾಜರು ಕವಿಗಳಿಗೆ ಆಶ್ರಯ ನೀಡಿ ಕನ್ನಡವನ್ನು ಬೆಳಸಿದ್ದಾರೆ ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವದಿಂದಲೇ ಭಾಷವಾರು ಪ್ರಾಂತ್ಯ ರಚನೆಗಾಗಿ ಹೋರಾಟ ಆರಂಭವಾಗಿತ್ತು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳು ಪುನ: ಒಂದಾಗಿ ಸಾಂಸ್ಕೃತಿಕ ಏಕತೆ ಹಾಗೂ ರಾಜಕೀಯ ಏಕತೆಯನ್ನು ಸಾಧಿಸಬೇಕು ಎಂಬ ಸದಾಶಯದಿಂದ ಏಕೀಕರಣ ಚಳವಳಿ ಹುಟ್ಟಿಕೊಂಡಿತು. ಡೆಪ್ಯೂಟಿ ಚನ್ನಬಸಪ್ಪ, ಆಲೂರು ವೆಂಕಟರಾಯರು, ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಯು.ರಾಮರಾವ್, ಬೆನಗಲ್ ಶಿವರಾಂ, ಬೆನಗಲ್‍ರಾಮರಾವ್, ಮದವೀಡು ಕೃಷ್ಣರಾವ್, ಕಡಪ ರಾಘವೇಂದ್ರರಾವ್, ದೇಶ್‍ಪಾಂಡೆ, ಗಂಗಾಧರರಾವ್, ಗದಿಗೆಯ್ಯ, ಹೊನ್ನ ಪುರಮಠ್, ಹರ್ಡೇಕರ್ ಮಂಜಪ್ಪ, ಹುಯಿಲಗೋಳ ನಾರಾಯಣರಾವ್, ಕಾರ್ನಾಡ್ ಸದಾಶಿವರಾವ್, ಶ್ರೀನಿವಾಸ ಮಲ್ಯ, ಕೆ.ಆರ್.ಕಾರಂತ್, ಆರ್.ಆರ್.ದಿವಾಕರ್, ಡಾ.ನಾಗನಗೋಡ, ಅಂದಾನಪ್ಪ ದೊಡ್ಡಮೇಟಿ, ಜಿನರಾಜ್ ಹೆಗಡೆ, ಚಿತ್ರದುರ್ಗದ ರಾಷ್ಟ್ರನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸ್ ಮೊದಲಾದವರು ಏಕೀಕರಣಕ್ಕಾಗಿ ಶ್ರಮಿಸಿದರು. ಇವರ ಹೋರಾಟಗಳ ಫಲವಾಗಿ ಇಂದು ನಾವು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಸ್ಮರಿಸಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 26 ಮಂದಿ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗದಿಂದ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದ ಗಣತಿದಾರರನ್ನೂ ಸನ್ಮಾನಿಸಲಾಯಿತು.

ಚಿತ್ರದುರ್ಗ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ವೆಸ್ಟರ್ನ್ ಹಿಲ್ಸ್ ಹಾಗೂ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕೃತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಸಿಕೊಟ್ಟರು. ಸಂಸದ ಗೋವಿಂದ ಎಂ.ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

.