ವಿಶೇಷ ಅಗತ್ಯವುಳ್ಳ ಮಕ್ಕಳಲ್ಲೂ ಪ್ರತಿಭೆ ಇದೆ: ಹೆಬಸೂರ

| Published : Feb 25 2025, 12:45 AM IST

ವಿಶೇಷ ಅಗತ್ಯವುಳ್ಳ ಮಕ್ಕಳಲ್ಲೂ ಪ್ರತಿಭೆ ಇದೆ: ಹೆಬಸೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಅವರಲ್ಲಿಯೂ ವಿಶೇಷ ಪ್ರತಿಭೆ, ಸಾಧನೆ ಹೊರಹೊಮ್ಮಲು ಸಾಧ್ಯ ಎಂದು ವ್ಯಾಪಾರಸ್ಥ ಸಂಕೇತ ಹೆಬಸೂರ ಹೇಳಿದರು.

ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಅವರಲ್ಲಿಯೂ ವಿಶೇಷ ಪ್ರತಿಭೆ, ಸಾಧನೆ ಹೊರಹೊಮ್ಮಲು ಸಾಧ್ಯ ಎಂದು ವ್ಯಾಪಾರಸ್ಥ ಸಂಕೇತ ಹೆಬಸೂರ ಹೇಳಿದರು.

ಅವರು ಗದಗ ನಗರದ ಸೇವಾ ಭಾರತಿ ಟ್ರಸ್ಟ್‌ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೇಕಾಗಿರುವದು ಅನುಕಂಪ ಅಲ್ಲ, ಅವಕಾಶ ಮತ್ತು ಪ್ರೋತ್ಸಾಹ. ಸಾಮಾನ್ಯ ಮಕ್ಕಳಿಗಿಂತಲೂ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಹಸ, ಸಾಧನೆ ಮಾಡಿರುವದನ್ನು ನಾವಿಂದು ಕಾಣಬಹುದಾಗಿದೆ. ಆದ್ದರಿಂದ ಇಂತಹ ಮಕ್ಕಳಿಗೆ ಪಾಲಕ ಪೋಷಕರು, ಸಮಾಜ ಗೌರವದಿಂದ ಕಾಣಬೇಕು ಎಂದರು. ಇನ್ನೋರ್ವ ರಿಯಲ್‌ಎಸ್ಟೇಟ್ ಉದ್ಯಮಿ ಸಾಗರ ಪವಾರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸೇವಾ ಭಾರತಿ ಟ್ರಸ್ಟ್‌ನ ಅರುಣೋದಯ ಶಾಲೆ ನಿಜಕ್ಕೂ ಒಳ್ಳೆಯ ಹಾಗೂ ಮಾನವೀಯತೆ ಕಳಕಳಿಯಿಂದ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ತುಕಾರಾಮಸಿಂಗ್ ಜಮಾದಾರ, ಇದು ಪುಣ್ಯದ ಕೆಲಸ, ಇಂತಹ ಕಾರ್ಯ ಮಾಡಲು ಅವಕಾಶ ಸಿಗುವುದೇ ಭಾಗ್ಯ ಎನ್ನಬೇಕು. ಸುದೀರ್ಘ ಅವಧಿಯವರೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಸಂತೃಪ್ತ ಭಾವನೆ ನನ್ನದಾಗಿದೆ ಎಂದರು. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ, ದೇಶಭಕ್ತಿಯ ಕಾರ್ಯಕ್ರಮಗಳು ಜನಮನ ಸೆಳೆದವು. ಡಿ.ಸಿ. ಪಾವಟೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯದರ್ಶಿ ಜಯರಾಜ ಮುಳಗುಂದ ಸ್ವಾಗತಿಸಿದರು. ಡಾ. ಉಮೇಶ ಹಾದಿ ಹಾಗೂ ಬಸವರಾಜ ಪಟ್ಟಣಶೆಟ್ಟಿ ಪರಿಚಯಿಸಿದರು. ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ವರದಿ ವಾಚಿಸಿ, ನಿರೂಪಿಸಿದರು. ಮಲ್ಲಿಕಾರ್ಜುನ ನಾಗಲಾಪೂರ ಸೇವಾ ಭಾರತಿ 25 ವಾರ್ಷಿಕೋತ್ಸವದ ಮಾಹಿತಿ ನೀಡಿದರು. ಜಗದೀಶ ಹಡಪದ ವಂದಿಸಿದರು. ಸಾಧಕ ವಿದ್ಯಾರ್ಥಿಗಳಾದ ಪೂಜಾ ಭಗವತಿ, ನುಮಾನ ಮಜ್ಜಗಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸೇವಾ ಭಾರತಿಯ ಶ್ರೀಧರ ನಾಡಗೇರ, ಆಹ್ವಾನಿತ ಸದಸ್ಯರಾದ ಮಾಜಿ ಸೈನಿಕ ಸುಧೀರಸಿಂಹ ಘೋರ್ಪಡೆ ವಕೀಲರು, ಬಸವರಾಜ ನಾಗಲಾಪೂರ, ಮಾಜಿ ಸೈನಿಕ ಸುಭಾಸಚಂದ್ರ ಪೆಂಟಾ, ಜೀತೇಂದ್ರ ಶಹಾ, ಜಯಶ್ರೀ ಭಾವರೆ, ವೀಣಾ ಕೊಲ್ಹಾಪುರೆ, ರೇಣುಕಾ ದಾಸರ, ಆರ್‌ಡಿಪಿಆರ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಾಲಕ ಪೋಷಕರು ಪಾಲ್ಗೊಂಡಿದ್ದರು.