ನೀರಿಗೆ ದೇಶದಲ್ಲಿ ದುಬಾರಿ ಶುಲ್ಕ, ನೀರು ಹರಿಯದಿದ್ದರೂ ಶುಲ್ಕ ವಿಧಿಸುವುದು ಸೇರಿದಂತೆ ಅನೇಕ ಎಡವಟ್ಟುಗಳಿಗೆ ಹೆಸರಾಗಿರುವ ಬೆಂಗಳೂರು ಜಲಮಂಡಳಿ ಈಗ ಬೋರ್‌ವೆಲ್ ಇಲ್ಲದ ಮನೆಗಳಿಗೂ ಬೋರ್‌ವೆಲ್ ಶುಲ್ಕ ವಿಧಿಸಲು ಆರಂಭಿಸಿದೆ. ಜಲಮಂಡಳಿಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರಿಗೆ ದೇಶದಲ್ಲಿ ದುಬಾರಿ ಶುಲ್ಕ, ನೀರು ಹರಿಯದಿದ್ದರೂ ಶುಲ್ಕ ವಿಧಿಸುವುದು ಸೇರಿದಂತೆ ಅನೇಕ ಎಡವಟ್ಟುಗಳಿಗೆ ಹೆಸರಾಗಿರುವ ಬೆಂಗಳೂರು ಜಲಮಂಡಳಿ ಈಗ ಬೋರ್‌ವೆಲ್ ಇಲ್ಲದ ಮನೆಗಳಿಗೂ ಬೋರ್‌ವೆಲ್ ಶುಲ್ಕ ವಿಧಿಸಲು ಆರಂಭಿಸಿದೆ. ಜಲಮಂಡಳಿಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನೋಬೋ ನಗರದ ನಿವಾಸಿ ಮನೋಹರ ಕೊಟೇಶ್ವರ ಎಂಬುವರು ಫೇಸ್‌ಬುಕ್‌ನಲ್ಲಿ ಜಲಮಂಡಳಿಯ ಬಿಲ್ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಬೋರ್‌ವೆಲ್ ಇಲ್ಲದಿದ್ದರೂ ಬೋರ್‌ವೆಲ್ ಶುಲ್ಕ ವಿಧಿಸಲಾಗಿದೆ. ಅದೇ ರೀತಿ ಮೀಟರ್‌ಗೆ ಶುಲ್ಕ ಕಟ್ಟಿದ್ದರೂ ಮೀಟರ್ ಶುಲ್ಕ ವಿಧಿಸಲಾಗಿದೆ. ದರವನ್ನು ಹೆಚ್ಚಿಸಲು ಬೇರೆ ಬೇರೆ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಬಿಲ್‌ನಲ್ಲಿ ನೀರಿನ ವೆಚ್ಚ 525 ರು., ಮಾಪಕ ವೆಚ್ಚ 75 ರು., ಒಳಚರಂಡಿ ವೆಚ್ಚ 263 ರು., ಬೋರ್‌ವೆಲ್ ವೆಚ್ಚ 50 ರು. ಎಂದು ನಮೂದಿಸಲಾಗಿದ್ದು, ಮಾಸಿಕ 31,000 ಲೀ. ನೀರು ಬಳಕೆಗೆ ಬರೋಬ್ಬರಿ 913 ರು. ಶುಲ್ಕ ವಿಧಿಸಲಾಗಿದೆ. ಈ ಕುರಿತು ಮಾಹಿತಿ ಇದ್ದವರು ವಿವರಿಸಿ ಎಂದು ನಗರದ ನಿವಾಸಿ ಮನೋಹರ ಕೋರಿದ್ದಾರೆ.

ಅರ್ಜಿ ಕೊಟ್ರೆ ಶುಲ್ಕ ವಾಪಸ್:

ಜಲಮಂಡಳಿ ಎಂಜಿನಿಯರ್

ಬೋರ್‌ವೆಲ್ ಇಲ್ಲದಿದ್ದರೂ ಬೋರ್‌ವೆಲ್ ಶುಲ್ಕ ವಿಧಿಸುತ್ತಿದ್ದರೆ, ಸಮೀಪದ ಜಲಮಂಡಳಿ ಉಪ ವಿಭಾಗ ಕಚೇರಿಗೆ ಅರ್ಜಿ ನೀಡಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶುಲ್ಕವನ್ನು ರದ್ದುಪಡಿಸುತ್ತಾರೆ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ದಲಾಯತ್ ತಿಳಿಸಿದರು. ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿರುವ ಹಣವನ್ನು ಮರಳಿಸಲಾಗುತ್ತದೆ. ನೀರಿನ ಸಂಪರ್ಕ ನೀಡುವಾಗ ವಿದ್ಯುತ್ ಪ್ಯಾನಲ್ ಬೋರ್ಡ್ ಮೇಲಿನ ವಿದ್ಯುತ್ ಬೇಡಿಕೆ ಸಂಬಂಧಿಸಿದ ವಿವರಗಳು, ಸ್ವಿಚ್‌ಗಳನ್ನು ಗಮನಿಸಿ ಬೋರ್‌ವೆಲ್ ಇರಬಹುದು ಎಂದು ಸಿಬ್ಬಂದಿ ತಪ್ಪಾಗಿ ಗ್ರಹಿಸಿ ಬೋರ್‌ವೆಲ್ ಶುಲ್ಕವನ್ನು ಸೇರ್ಪಡೆ ಮಾಡಿರಬಹುದು ಎಂದು ದಲಾಯತ್ ಹೇಳಿದರು.

ಬತ್ತಿದ ಬೋರ್‌ವೆಲ್‌ಗೂ ಶುಲ್ಕ!

ಬೇಸಿಗೆಗೆ ನಗರದ ಅನೇಕ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಆದರೆ, ಬೋರ್‌ವೆಲ್ ಶುಲ್ಕ ವಿಧಿಸುವುದನ್ನು ಮಾತ್ರ ಜಲಮಂಡಳಿ ನಿಲ್ಲಿಸಿಲ್ಲ. ನೀರಿಲ್ಲದ ಬೋರ್‌ವೆಲ್‌ಗೆ ಶುಲ್ಕ ವಿಧಿಸುವ ಜಲಮಂಡಳಿ ಕ್ರಮದ ವಿರುದ್ಧ ಮನೋಹರ್ ಅವರ ಪೋಸ್ಟ್‌ನಲ್ಲಿ ಅನೇಕರು ಆಕ್ಷೇಪಿಸಿದ್ದಾರೆ. ‘ಜಲಮಂಡಳಿಯ ನೀಡುವ ನೀರಿಗಿಂತ ಹೆಚ್ಚು ನೀರನ್ನು ಬೋರ್‌ವೆಲ್ ಮೂಲಕ ಬಳಸಿ ಆ ಕೊಳಚೆ ನೀರನ್ನು ಜಲಮಂಡಳಿ ಪೈಪ್‌ಲೈನ್‌ಗಳಿಗೆ ಬಿಡುವ ಕಾರಣ ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ ಬೋರ್‌ವೆಲ್ ಬತ್ತಿದ್ದರೆ ಅದಕ್ಕಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂನಿಂದ ಕಡಿತ ಮಾಡಿಸಬೇಕು. ಆ ಬಳಿಕ ಬೆಸ್ಕಾಂನಿಂದ ಜಲಮಂಡಳಿಗೆ ಮಾಹಿತಿ ನೀಡಿದಾಗ ಬೋರ್‌ವೆಲ್ ಶುಲ್ಕ ರದ್ದುಪಡಿಸಲಾಗುತ್ತದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ದಲಾಯತ್ ತಿಳಿಸಿದರು. ಬೇಸಿಗೆ ಮುಗಿದ ಬಳಿಕ ಬೋರ್‌ವೆಲ್‌ನಲ್ಲಿ ನೀರು ಬರುತ್ತದೆ. ಬೋರ್‌ವೆಲ್ ನೀರಿನ ಬಳಕೆ ಆರಂಭವಾಗುತ್ತದೆ. ಅದಕ್ಕಾಗಿ ಜನರು ವಿದ್ಯುತ್ ಸಂಪರ್ಕ ಕಡಿತ ಮಾಡುವುದಿಲ್ಲ. ಹೀಗಾಗಿ, ಬೋರ್‌ವೆಲ್ ಶುಲ್ಕ ಹಾಗೆಯೇ ಮುಂದುವರೆಯುತ್ತದೆ. ಇದು ಮಂಡಳಿಯ ಪಾಲಿಸಿ ವಿಷಯ ಎಂದು ದಲಾಯತ್ ಹೇಳಿದರು.