ಸಾರಾಂಶ
ಒಳಮೀಸಲಾತಿ ಜಾಗೃತಿ ಸಮಿಯ ಜಾಗೃತಿ ಸಭೆ । ಸಮರ್ಪಕ ಮಾಹಿತಿ ನೀಡಿ
ಕನ್ನಡಪ್ರಭ ವಾರ್ತೆ ಚಾಮರಾಜನಗರಒಳಮೀಸಲಾತಿ ವರ್ಗಿಕರಣ ಸಂಬಂಧ ಏಕ ಸದಸ್ಯ ನ್ಯಾಯಮೂರ್ತಿಗಳ ಸಮಿತಿಯು ಇನ್ನು ಮೂರು ತಿಂಗಳಲ್ಲಿ ಸಮೀಕ್ಷೆ ನಡೆಸಿ, ವರದಿ ನೀಡಲಿದೆ. ಬಲಗೈ ಸಮುದಾಯದವರು ನಿಖರವಾದ ಮಾಹಿತಿಯನ್ನು ದಾಖಲು ಮಾಡಿ, ಒಳಮೀಸಲಾತಿ ಪಡೆಯುವ ಜಾತಿಗಳನ್ನು ಹೆಚ್ಚು ಗುರುತಿಸುವಂತೆ ಸಂಘಟನೆಗಳು, ಪ್ರಗತಿಕರ ಚಿಂತಕರು, ದಲಿತ ಹೋರಾಟಗಾರರು ಕಾರ್ಯಪ್ರವೃತ್ತರಾಗಬೇಕು ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು ತಿಳಿಸಿದರು.
ನಗರದ ಶ್ರೀ ರಾಮಚಂದ್ರ ಕಾಲೇಜು ಅವರಣದಲ್ಲಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ನಡೆದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವ ಬಗ್ಗೆ ಚಿಂತನೆ ಮಾಡಿದೆ. ಈ ಹಿಂದೆ ನೀಡಿದ್ದ ಆಯೋಗಗಳ ವರದಿಗಳು ಅವೈಜ್ಞಾನಿಕವಾಗಿದ್ದು, ಈ ಹಿಂದೆ ನೀಡಿದ್ದ ಎಲ್ಲಾ ವರದಿಗಳು ಸಹ ಸತ್ತು ಹೋಗಿವೆ. ಈ ವರದಿಗಳ ಬಗ್ಗೆ ನಾವು ಚರ್ಚೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈಗ ನಮ್ಮ ಮುಂದೆ ಇರುವುದು ಸರ್ಕಾರ ನೇಮಕ ಮಾಡಿರುವ ಸಮಿತಿಯ ಮುಂದೆ ನಮ್ಮ ಜಾತಿಯ ಸಂಖ್ಯೆಯನ್ನು ನಿಖರವಾಗಿ ಹೇಳುವ ಮೂಲಕ ಈಗ ಎದ್ದಿರುವ ಗಂಡಾಂತರದಿಂದ ಪಾರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯ ವಿದ್ಯಾವಂತರು, ಪ್ರಗತಿಪರರರು, ಬುದ್ಧಿಜೀವಿಗಳು, ದಲಿತ ಹೋರಾಟಗಾರರು ಈ ಮೂರು ತಿಂಗಳ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು. ಮನೆ ಮನೆಗೆ ಕರಪತ್ರಗಳನ್ನು ಹಂಚಿ ಸಮೀಕ್ಷೆಯಲ್ಲಿ ಭಾಗವಹಿಸಿ, ಸಮರ್ಪಕ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.ಬಲಗೈ ಸಮುದಾಯ ಒಳಮೀಸಲಾತಿ ವಿರೋಧಿ ಎಂಬ ಮಾತುಗಳು ಬರುತ್ತಿವೆ. ನಮ್ಮ ಸಹೋದರರಗಿರುವ ಮಾದಿಗ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. 101 ಜಾತಿಗಳಲ್ಲಿ ನಮ್ಮ ಸಮುದಾಯದ ಹಿರಿಯ ಅಣ್ಣನಂತೆ ಇದ್ದೇವೆ. ನಮ್ಮಲ್ಲಿಯೇ ಹೊಡೆದಾಟ ಬೇಡ. ಎಲ್ಲಾ ಸಮುದಾಯವನ್ನು ಒಟ್ಟಿಗೆಗೆ ತೆಗೆದುಕೊಂಡು ಹೋಗುವ ಜಾಣ್ಮೆ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ನಡೆ ಜಾಗೃತವಾಗಿರಬೇಕು ಎಂದರು.
ನ್ಯಾಯಾಲಯಗಳು ನೀಡುವ ತೀರ್ಪುಗಳಲ್ಲಿಯೂ ಸಹ ಸಮುದಾಯಕ್ಕೆ ಅನ್ಯಾಯವಾಗಿದೆ. ಮೀಸಲಾತಿ ನೀಡುವಾಗ ದತ್ತಾಂಶಗಳು ಇರಬೇಕು. ಈ ದತ್ತಾಂಶ ಇಲ್ಲದಿದ್ದರೆ ಯಾವುದೇ ಮೀಸಲಾತಿಯನ್ನು ಒಪ್ಪಲು ಸಾಧ್ಯವಿಲ್ಲ. ಸಮೀಕ್ಷೆ ತಂಡ ಬಂದಾಗ ಬಲಗೈ ಸಮುದಾಯದ ಉಪ ಜಾತಿಗಳು, ಎಡಗೈ ಸಮುದಾಯದ ಉಪ ಜಾತಿಗಳ ಬಗ್ಗೆ ನಿಖರವಾಗಿ ಬರೆಸಬೇಕು ಎಂದು ತಿಳಿಸಿದರು.ಒಳಮೀಸಲಾತಿ ವಿರೋಧಿಗಳಲ್ಲ:
ಬಲಗೈ ಸಮುದಾಯದವರು ಯಾವುದೇ ಕಾರಣಕ್ಕೂ ಒಳಮೀಸಲಾತಿ ವಿರೋಧಿಗಳಲ್ಲ. ಬಲಗೈ ಹಾಗೂ ಎಡಗೈ ಸಮುದಾಯಕ್ಕೆ ಜನಸಂಖ್ಯೆಯ ಆಧಾರಿತ ಮೀಸಲಾತಿ ಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಆದರೆ ಪ್ರೊ.ಗೋವಿಂದಯ್ಯ ಅವರು ನಮ್ಮನ್ನು ಒಳಮೀಸಲಾತಿ ವಿರೋಧಿಗಳು, ಇವರು ನಮ್ಮನ್ನು ವಂಚಿಸಿದ್ದಾರೆ. ಇನ್ನು ಮುಂದೆ ನಡೆಯಲ್ಲ. ಎಂದು ಟೀಕೆ ಮಾಡಿದ್ದಾರೆ. ಆದರೆ, ವಾಸ್ತವವಾಗಿ ಎಡ-ಬಲ ಸಮುದಾಯ ಮಧ್ಯೆ ವೈಮನಸ್ಸು ತರಲು ಹುನ್ನಾರ ಮಾಡುತ್ತಿದ್ದಾರೆ ಎಂದು ಯೋಜನಾ ಇಲಾಖೆಯ ರಾಜ್ಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ತಿಳಿಸಿದರು.ಇತ್ತೀಚೆಗೆ ವಿಚಾರ ಸಂಕಿರಣದಲ್ಲಿ ನಮ್ಮ ವಿರುದ್ದ ಪ್ರೊ.ಗೋವಿಂದಯ್ಯ ಮಾತನಾಡಿ ಸಚಿವರಾದ ಎಚ್.ಸಿ.ಮಹದೇವಪ್ಪ, ಡಾ.ಪರಮೇಶ್ವರ್, ದೇವನೂರು ಮಹದೇವ್, ದಾಸಯ್ಯ ಅವರನ್ನು ಟೀಕೆ ಮಾಡಿದ್ದಾರೆ. ಇದು ವಾಸ್ತವಕ್ಕೆ ದೂರವಾಗಿದೆ. ನಮ್ಮ ಎರಡು ಸಮುದಾಯಗಳು ಒಗ್ಗಟ್ಟಾಗಿದ್ದರೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ಬರುತ್ತದೆ ಎಂಬ ಏಕೈಕ ಕಾರಣದಿಂದ ಪಿತೂರಿ ಮಾಡಿ ಒಳಮೀಸಲಾತಿಯನ್ನು ಮುನ್ನಲೆಗೆ ತಂದಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನಾವು ಬಳಕೆ ಮಾಡಿಕೊಳ್ಳದಿದ್ದರೆ ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಕಡೆ ಸಂಘಟನೆ ಮಾಡಿ, ಸಮೀಕ್ಷೆಯ ಸಂದರ್ಭದಲ್ಲಿ ನಮ್ಮ ಸಮುದಾಯವು ನಿಖರವಾದ ದತ್ತಾಂಶ ದಾಖಲು ಮಾಡಲು ಮುಂದಾಗಬೇಕು. ಆದೇ ರೀತಿ ಅವರು ಸಹ ದಾಖಲು ಮಾಡಲಿ, ಬಳಿಕ ಇದರ ಬಗ್ಗೆ ಸರ್ಕಾರ ಒಂದು ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತದೆ. ಈ ಮೂರು ತಿಂಗಳು ನಮ್ಮ ಸಮುದಾಯ ನಿಖರವಾದ ಮಾಹಿತಿ ನೀಡಲು ಈ ಜಾಗೃತಿ ಸಭೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ದಲಿತ ಮುಖಂಡರಾದ ಹೊನ್ನೂರು ಕೃಷ್ಣಮೂರ್ತಿ, ಆಶೋಕಪುರಂ ಭಾಸ್ಕರ್, ಶೇಖರ್ ಬುದ್ದ, ಸಿ.ಎಂ.ಕೃಷ್ಣಮೂರ್ತಿ, ವಾಸು, ಡಾ.ಶಿವಕುಮಾರ್, ಸುಭಾಷ್ ಮಾಡ್ರಹಳ್ಳಿ, ಕೆ.ಎಂ.ನಾಗರಾಜು, ಅನೇಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ದಲಿತ ಮುಖಂಡರಾದ ಚನ್ನಕೇಶವ, ಚಿಕ್ಕಜವರಯ್ಯ, ಇತರರು ಇದ್ದರು.