ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ವಿಜಯಪುರ ಮತ್ತಿತರ ಪ್ರದೇಶಗಳಲ್ಲಿನ ವಕ್ಫ್ ಬೋರ್ಡ್ ನೋಟಿಸ್ ಬಿಸಿ ಬಿಸಿಯಾಗಿ ಚರ್ಚೆಯಲ್ಲಿರುವಾಗಲೇ ವಕ್ಫ್ ಆಸ್ತಿ ಪ್ರಕರಣವು ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರದಲ್ಲಿ ೨೦೧೯ರಿಂದಲೇ ಸದ್ದು ಮಾಡುತ್ತಿದ್ದು, ಈಗಲೂ ನೂರಾರು ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಬನಹಟ್ಟಿಯ ವಿಶ್ರಾಂತಿ ಧಾಮದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ರೈತರು ತಮಗೆ ನ್ಯಾಯಾಲಯದಿಂದ ಈಗಲೂ ಬರುತ್ತಿರುವ ನೋಟಿಸ್ ಹಿಡಿದು ಪ್ರತಿಭಟಿಸಿದ ಪ್ರಸಂಗ ಮಂಗಳವಾರ ನಡೆಯಿತು.ಈ ವೇಳೆ ಮಾತನಾಡಿದ ಶಾಸಕ ಸಿದ್ದು ಸವದಿ, ೨೦೧೯-೨೦ರಲ್ಲಿ ೪೨೦ ಎಕರೆಯಷ್ಟು ಭೂಮಿಗೆ ೧೧೦ ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬರುತ್ತಿದೆ. ಈ ಆಸ್ತಿ ವಕ್ಫ್‌ಗೆ ಸಂಬಂಧಿಸಿದೆಯೆಂಬ ತಗಾದೆ ನಡೆಯುತ್ತಿದೆ. ಸ್ವಂತ ಭೂಮಿಯಲ್ಲಿ ಹತ್ತಾರು ತಲೆಮಾರುಗಳಿಂದ ಕೃಷಿ ಮಾಡುತ್ತಾ ಬಂದ ಕುಟುಂಬಗಳು ಆಸ್ತಿ ವಿಭಜನೆ ಬಳಿಕ ಇದೀಗ ತುಂಡು ಭೂಮಿ ಹೊಂದಿದ ರೈತರ ಮೇಲೆಯೂ ಕಾಂಗ್ರೆಸ್ ಸರ್ಕಾರ ಗದಾಪ್ರಹಾರ ನಡೆಸುತ್ತಿರುವುದು ನಾಚಿಕೇಗೇಡಿತನದ ಸಂಗತಿ. ರೈತರ ಬೆನ್ನೆಲುಬಾಗಿ ಯಾವುದೇ ಕಾರಣಕ್ಕೂ ಇಲ್ಲಿನ ರೈತರ ಜಮೀನನ್ನು ವಕ್ಫ್‌ಗೆ ನೀಡುವ ಅವಕಾಶ ನೀಡುವುದಿಲ್ಲ. ರಕ್ತ ಹರಿದರೂ ಚಿಂತೆಯಿಲ್ಲ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲವೆಂದು ಸವದಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ೧೯೯೦ರ ಅವಧಿಯಲ್ಲಿ ೧.೦೬ ಲಕ್ಷ ಎಕರೆಯಷ್ಟು ಹೊಂದಿದ್ದ ವಕ್ಫ್ ಭೂಮಿಯು ಇದೀಗ ೨೦೨೪ಕ್ಕೆ ೯.೦೬ ಲಕ್ಷ ಎಕರೆಯಷ್ಟು ಭೂಮಿಯನ್ನು ಹೊಂದಿರುವುದು ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗಾಗಿ ಕಾಂಗ್ರೆಸ್ ಎಂಥ ನೀಚ ಕೆಲಸಕ್ಕಿಳಿಯಲೂ ಹೇಸದು ಎಂಬುದಕ್ಕೆ ನಿದರ್ಶನವಾಗಿದೆ. ರೈತರ ನ್ಯಾಯಯುತ ಜಮೀನು ಕಸಿದುಕೊಳ್ಳುವ ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣವನ್ನು ವಿರೋಧಿಸುತ್ತೇನೆಂದರು.ತೇರದಾಳದಲ್ಲಿನ ೧೧೦ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಹಾಗೂ ಸರಿಪಡಿಸಲಾಗಿದೆ ಎಂದು ಹೇಳುತ್ತಿರುವ ಕಂದಾಯ ಇಲಾಖೆ ತೆರೆಮರೆಯಲ್ಲಿ ರೈತರ ವಿರುದ್ಧ ಆಟವಾಡುತ್ತಿದೆ. ಬೆಂಗಳೂರಿನಲ್ಲಿರುವ ವಕ್ಫ್ ನ್ಯಾಯಾಲಯದಲ್ಲಿ ಪ್ರಕರಣ ಕಳೆದ ೬ ವರ್ಷಗಳಿಂದ ನಡೆಯುತ್ತಿದೆ. ಈಗಲೂ ಎರಡ್ಮೂರು ತಿಂಗಳಿಗೊಮ್ಮೆ ಈ ಭಾಗದ ರೈತರು ಪ್ರಕರಣ ವಿರುದ್ಧ ಹೋರಾಟ ನಡೆಸುತ್ತಾ ಇದೀಗ ಆರ್ಥಿಕ ಸಂಕಷ್ಟಕ್ಕಿಡಾಗಿದ್ದಾರೆ. ಇದರ ಹೊರತಾಗಿ ಹೊಸದಾಗಿ ಮತ್ತೇ ರೈತರಿಗೆ ತನ್ನ ಆಸ್ತಿಯೆಂದು ನೋಟಿಸ್ ನೀಡುತ್ತಿರುವ ವಕ್ಫ್ ಬೋರ್ಡ್ ಕ್ರಮ ಅಸಿಂಧುವಾಗಿದೆ. ಇದನ್ನೇ ಲಾಭ ಪಡೆದುಕೊಂಡು ಸರ್ಕಾರ ರೈತರ ಮೇಲೆ ಗದಾಪ್ರಹಾರ ನಡೆಸುವುದನ್ನು ಕೈಬಿಡಬೇಕೆಂದು ಸವದಿ ಆಗ್ರಹಿಸಿದರು.
ಮೊಘಲರ, ಬಿಜಾಪೂರ ಸುಲ್ತಾನರ ಆಡಳಿತಾವಧಿ ನೆಪ ಹೇಳುವ ವಕ್ಫ್ ಮಂಡಳಿ ಸನಾತನ ಭಾರತದ ಗುಪ್ತ, ಮೌರ್ಯ ಮೊದಲಾದ ಚಕ್ರವರ್ತಿಗಳ ಕಾಲದಲ್ಲಿ ಈ ದೇಶದ ನೆಲ ಯಾರ ಸೊತ್ತಾಗಿತ್ತು ಎಂಬುದಕ್ಕೆ ಉತ್ತರಿಸಲಿ. ಆ ಕಾಲದಲ್ಲಿ ಇನ್ನೂ ಮುಸ್ಲಿಂ ಧರ್ಮವೇ ಉದಯಿಸಿರಲಿಲ್ಲವಾದ್ದರಿಂದ ವಕ್ಫ್ ಬೋರ್ಡ್ ಅಸ್ತಿತ್ವದಲ್ಲೇ ಇರಲಿಲ್ಲ. ಬ್ರಿಟೀಷರ ಒಡೆದು ಆಳುವ ನೀತಿಯಿಂದ ಆರಂಭಗೊಂಡರೂ ವಿಫಲವಾದ ಬಳಿಕ ಸ್ವಾತಂತ್ರ್ಯಾನಂತರದ ಕಾಂಗ್ರೆಸ್ ತನ್ನ ದುರ್ಬುದ್ಧಿ ತೋರುವ ಮೂಲಕ ಅಲ್ಪಸಂಖ್ಯಾತ ಓಲೈಕೆಯಿಂದಾಗಿ ಶಾಸನಕ್ಕೆ ಮುಂದಾಗಿತ್ತು. ಬಳಿಕ ಮನಮೋಹನಸಿಂಗ್ ಕಾಲದಲ್ಲಿ ವಿಪರೀತ ತುಷ್ಟೀಕರಣದಿಂದ ಸರ್ವಾಧಿಕಾರಿ ಧೋರಣೆ ವಕ್ಫ್ ಬೋರ್ಡ್ ಹೊಂದಿದೆ.ಕೇಂದ್ರ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರ ವಕ್ಫ್ ಬೋರ್ಡನ್ನು ವಿಸರ್ಜಿಸುವ ಮೂಲಕ ದೇಶದಲ್ಲೇ ರಕ್ಷಣಾ, ರೇಲ್ವೇ ಇಲಾಖೆಗಳ ಬಳಿಕ ಅಕ್ರಮಣಕಾರಿ ನೀತಿಯಿಂದ ಭೂಮಿಯನ್ನು ಹೊಂದಿರುವ ವಕ್ಫ್ ಬೋರ್ಡ್ ರದ್ದುಗೊಳಿಸಿಬೇಕು. ನಮ್ಮ ರೈತರ ಮತ್ತು ನಾಗರಿಕ ಪ್ರದೇಶಗಳ ತಂಟೆಗೆ ಬಂದಲ್ಲಿ ಎಂಥದೇ ರಕ್ತಪಾತವಾದರೂ ಸರಿ ನಾವು ಎದುರಿಸಿ ತಕ್ಕ ಉತ್ತರ ನೀಡುತ್ತೇವೆಂದು ಶಾಸಕ ಸವದಿ ಗುಡುಗಿದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ನೊಂದ ರೈತರು, ಧುರೀಣರಾದ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ನಗರ ಬಿಜೆಪಿ ಅಧ್ಯಕ್ಷ ಶ್ರೀಶೈಲ ಬೀಳಗಿ, ದುಂಡಪ್ಪ ಮಾಚಕನೂರ ಸೇರಿದಂತೆ ಪ್ರಮುಖರಿದ್ದರು.--------
ಕೋಟ್....ಕಳೆದ ೬ ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದು ಸುಸ್ತಾಗಿದ್ದೇವೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಉಳುಮೆ ಮಾಡುತ್ತ ಬಂದಿರುವ ಜಮೀನಿನ ಮೇಲೆ ಸರ್ಕಾರ ವಿನಾಕಾರಣ ಕ್ಯಾತೇ ನಡೆಸುತ್ತಿರುವದು ಸರಿಯಲ್ಲ.
- ಭೂಪಾಲ ಮಾಲಗಾಂವಿ, ರೈತ, ತೇರದಾಳ.----
ನಮ್ಮದು ೧೨೦ ಜನರ ತುಂಬು ಕುಟುಂಬಕ್ಕೆ ೬೪ ಎಕರೆ ಭೂಮಿಯಿದೆ. ಇದೀಗ ತುಂಡು ರೈತರಾಗಿ ಬದುಕು ಸಾಗಿಸುತ್ತಿದ್ದೇವೆ. ಇಂತಹ ಭೂಮಿ ಕಸಿದುಕೊಳ್ಳುವ ಹುನ್ನಾರ ಸಲ್ಲದು.- ಹುಸೇನಸಾಬ ಇನಾಮದಾರ, ರೈತ, ತೇರದಾಳ
------ಫೋಟೊ-೨೯ಆರ್‌ಬಿಕೆ೨/ಬನಹಟ್ಟಿಯಲ್ಲಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ತೇರದಾಳದ ನೂರಾರು ರೈತರು ೪೨೦ ಎಕರೆಯಷ್ಟು ಭೂಮಿ ವಕ್ಫ್ ಆಸ್ತಿಯೆಂದು ನೀಡಿದ ನೋಟಿಸ್ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸುತ್ತಿರುವುದು.---------