ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದರೂ, ಸೋತರೂ ಇತಿಹಾಸ ನಿರ್ಮಿಸಲಿದೆ.1957ರಿಂದ ಈ ವರೆಗೆ ಜರುಗಿದ ಒಟ್ಟು 17 ಚುನಾವಣೆಗಳಲ್ಲಿ 15 ಬಾರಿಯೂ ಇಲ್ಲಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸಿಕೊಂಡಿದ್ದು, ಈ ಚುನಾವಣೆಯಲ್ಲಿ ಮತದಾರ ಮತ್ತೆ ಕೈ ಹಿಡಿದರೆ ಕಾಂಗ್ರೆಸ್ ಸತತ ಐದು ಬಾರಿ ಗೆಲುವು ದಾಖಲಿಸಿ ಹೊಸ ದಾಖಲೆ ನಿರ್ಮಾಣವಾಗಲಿದೆ.
ಒಂದು ವೇಳೆ ಕೈ ಪಡೆ ಸೋತರೆ ಗಣಿಧೂಳಿನಲ್ಲಿ ಮೊದಲ ಬಾರಿಗೆ ಕಮಲ ಅರಳಲು ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ.1985ರಲ್ಲಿ ಕಮ್ಯುನಿಸ್ಟ್ ಪಕ್ಷದಿಂದ (ಸಿಪಿಐ) ಯು. ಭೂಪತಿ ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಸಂತೋಷ್ ಲಾಡ್ ಗೆಲುವು ದಾಖಲಿಸಿದ್ದು ಬಿಟ್ಟರೆ ಉಳಿದ ಎಲ್ಲ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭಾರೀ ಬಹುಮತದ ಗೆಲುವು ದಕ್ಕಿದೆ. 66 ವರ್ಷಗಳ ಸಂಡೂರಿನ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಈ ಕ್ಷೇತ್ರದ ಜನತೆ ಕೈ ಅಭ್ಯರ್ಥಿಯನ್ನು ಚುನಾಯಿಸಿಕೊಂಡಿದ್ದು ಗಣಿನಾಡು ಸಂಡೂರು ಕಾಂಗ್ರೆಸ್‌ನ ಗಟ್ಟಿನೆಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಏಳು ಬಾರಿ ಗೆದ್ದರು ಘೋರ್ಪಡೆ:ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ರಾಜಮನೆತನದ ಎಂ.ವೈ. ಘೋರ್ಪಡೆ ಹಾಗೂ ಈ. ತುಕಾರಾಂ ಸತತ ನಾಲ್ಕು ಬಾರಿ ಗೆಲುವು ದಾಖಲಿಸಿ, ಗಣಿ ಊರಿನಲ್ಲಿ ಕಾಂಗ್ರೆಸ್‌ನ ಬಿಗಿಪಟ್ಟು ಎಂತಹದ್ದು ಎಂಬುದನ್ನು ಸಾಬೀತುಗೊಳಿಸಿದ್ದಾರೆ.
ಈ ಕ್ಷೇತ್ರದ ರಾಜಕೀಯ ನೆಲೆಯ ಗಮನಾರ್ಹ ಸಂಗತಿ ಎಂದರೆ ಸಂಡೂರು ರಾಜಮನೆತನದ ಎಂ.ವೈ. ಘೋರ್ಪಡೆ ಏಳು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1959ರಿಂದ ಶುರುಗೊಂಡ ಇವರ ಗೆಲುವಿನ ಓಟ ಸತತ ನಾಲ್ಕು ಚುನಾವಣೆ ವರೆಗೂ ಮುಂದುವರಿಯುತ್ತದೆ. 1972ರ ಚುನಾವಣೆಯಲ್ಲಿ ಗೆಲುವು ಪಡೆದ ಘೋರ್ಪಡೆ ಅವರು 1978, 1983 ಹಾಗೂ 1985ರ ಚುನಾವಣೆಯಿಂದ ದೂರ ಸರಿಯುತ್ತಾರೆ. ಆದಾಗ್ಯೂ 1978 ಹಾಗೂ 1983ರಲ್ಲಿ ಕಾಂಗ್ರೆಸ್ ಭಾರೀ ಬಹುಮತದ ಗೆಲುವು ದಾಖಲಿಸುತ್ತದೆ.ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಂಡೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತದೆ. ಆದರೆ, ಇಲ್ಲಿನ ಜನರ ಪಕ್ಷ ನಿಷ್ಠೆ ಬದಲಾಗುವುದಿಲ್ಲ. 2008, 2013, 2018 ಹಾಗೂ 2023ರ ಚುನಾವಣೆಯಲ್ಲೂ ಸಂಡೂರಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರನ್ನು ಚುನಾಯಿಸಿ, ವಿಧಾನಸೌಧ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತಾರೆ.
ಸಂಡೂರು ಕ್ಷೇತ್ರದ ಹಿನ್ನೆಲೆ ಕೆದಕಿದರೆ ಇಲ್ಲಿನ ಮತದಾರರು ವ್ಯಕ್ತಿನಿಷ್ಠೆಗಿಂತ ಪಕ್ಷ ನಿಷ್ಠೆಗೆ ಹೆಚ್ಚು ಒತ್ತು ನೀಡಿದ್ದಾರೆ. ಕೈ ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬ ಮಾತು ಗಣಿನಾಡು ಸಂಡೂರಿನಲ್ಲಿ ಸಾಬೀತಾಗುತ್ತಲೇ ಬಂದಿದೆ. 1994ರಿಂದ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿ ಈ ವರೆಗೆ ಗೆಲುವಿನ ರುಚಿ ನೋಡಿಲ್ಲ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂಬ ಉತ್ಸುಕ ಕಮಲ ಪಾಳಯದಲ್ಲಿದೆ. ಒಂದು ವೇಳೆ ಬಿಜೆಪಿ ಈ ಕ್ಷೇತ್ರದಲ್ಲಿ ಜಯ ದಕ್ಕಿಸಿಕೊಂಡರೆ ಕಮಲ ಗಣಿಧೂಳನ್ನು ಕೊಡವಿ ಎದ್ದಂತಾಗುತ್ತದೆ.