ಸಾರಾಂಶ
೨೧ನೇ ಶತಮಾನ ಯೋಗ್ಯತೆ ಹಾಗೂ ಸಾಮರ್ಥ್ಯದಿಂದ ಬದುಕುವುದಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ವಿದ್ಯೆ ಕಲಿಯುವುದು ಅತ್ಯವಶ್ಯ.
ಮುಂಡಗೋಡ:
೨೧ನೇ ಶತಮಾನ ಯೋಗ್ಯತೆ ಹಾಗೂ ಸಾಮರ್ಥ್ಯದಿಂದ ಬದುಕುವುದಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ವಿದ್ಯೆ ಕಲಿಯುವುದು ಅತ್ಯವಶ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಶನಿವಾರ ತಾಲೂಕಿನ ಸನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಹಾಗೂ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ವಿದ್ಯಾವಂತರಾದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಯಾವುದೇ ಕ್ಷೇತ್ರಕ್ಕೆ ಹೋಗಬೇಕಾದರೂ ಶಿಕ್ಷಣ ಜ್ಞಾನ ಅತ್ಯವಶ್ಯವಾಗಿದ್ದು, ಇಂದಿನ ದಿನಗಳಲ್ಲಿ ಊಟ ಕಡಿಮೆಯಾದರೂ ವಿದ್ಯೆಯ ಕೊರತೆಯಾಗುವಂತಿಲ್ಲ. ಹಾಗಾಗಿ ಶಿಕ್ಷಣ ಪಡೆದು ವಿದ್ಯಾವಂತರಾಗಲೇಬೇಕು. ಸಮಾಜಕ್ಕೆ ಹೊಸ ರೂಪ ನೀಡುವಂತಹ ಮಕ್ಕಳನ್ನಾಗಿ ಪರಿವರ್ತಿಸುವ ಉದ್ದೇಶ ಪ್ರತಿಯೊಬ್ಬ ಪಾಲಕರದ್ದಾಗಿರುತ್ತದೆ. ಅವರ ಅಪೇಕ್ಷೆ ಈಡೇರಿಸುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳ ಮೇಲಿರುತ್ತದೆ ಎಂದರು.ಒಂದು ಕಾಲದಲ್ಲಿ ಗಂಡು ಮಕ್ಕಳು ಮಾತ್ರ ವಿದ್ಯೆ ಕಲಿಯುತ್ತಿದ್ದರು. ಆದರೆ ಈಗ ಹೆಣ್ಣು ಮತ್ತು ಗಂಡು ಸಮಾನವಾಗಿ ವಿದ್ಯೆ ಪಡೆಯುತ್ತಿದ್ದು, ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲಿಯು ದಾಪುಗಾಲು ಇಡುತ್ತಿದ್ದಾರೆ. ಅವರು ವಿದ್ಯಾವಂತರಾದರೆ ಭವಿಷ್ಯದಲ್ಲಿ ಆಕೆಯ ಕುಟುಂಬ ಒಂದು ವಿದ್ಯಾವಂತ ಕುಟುಂಬವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು.ಶಿಕ್ಷಕರ ವೃತ್ತಿ ಕೇವಲ ಒಂದು ನೌಕರಿಯಲ್ಲ. ಬದಲಾಗಿ ಸಮಾಜದಲ್ಲಿ ಅತಿ ಹೆಚ್ಚು ಗೌರವ ಹೊಂದಿದ ಸ್ಥಾನವಾಗಿದೆ. ಬೇರೆ ನೌಕರರು ವೃತ್ತಿಯಲ್ಲಿರುವಾಗ ಮಾತ್ರ ಜನ ಕೈ ಮುಗಿಯುತ್ತಾರೆ. ಆದರೆ ಶಿಕ್ಷಕರು ನಿವೃತ್ತಿ ಹೊಂದಿದ ಬಳಿಕವು ಅವರಿಗೆ ಗೌರವವಿದೆ. ಸಮಾಜದಲ್ಲಿ ಯಾವುದೇ ಹುದ್ದೆಯಲ್ಲಿ ಇರುವವರು ತಪ್ಪು ಮಾಡಿದರೆ ತಿದ್ದಬಹುದು. ಆದರೆ, ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಸಮಾಜವೇ ತಲೆ ತಗ್ಗಿಸಬೇಕಾಗುತ್ತದೆ. ಮಕ್ಕಳನ್ನು ಶೀಲೆಗಳನ್ನಾಗಿ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡಬೇಕಿರುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇದರಿಂದ ಶಿಕ್ಷಕರಿಗೂ ಗೌರವ ಹೆಚ್ಚುತ್ತದೆ ಎಂದು ಹೆಬ್ಬಾರ ಹೇಳಿದರು.ಕುಡಿಯುವ ನೀರಿಗೆ ಪ್ರಥಮ ಆದ್ಯತೆ:ಅನಾವೃಷ್ಟಿಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಹಾಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಪಟ್ಟಣದ ೩೦ ಸಾವಿರ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯದ ನೀರು ಕುಡಿಯಲು ಮೊದಲ ಆದ್ಯತೆ. ಬಳಿಕ ಬೆಳೆಗಳಿಗೆ ನೀರು ಪೂರೈಸಲಾಗುವುದು. ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ. ಇದರಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಇದನ್ನು ಅರ್ಥ ಮಾಡಿಕೊಂಡು ಸ್ಪಂದಿಸುವಂತೆ ರೈತರಲ್ಲಿ ಮನವಿ ಮಾಡಿದರುಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಗ್ರಾಪಂ ಅಧ್ಯಕ್ಷ ಗಣಪತಿ ಬಾಳಮ್ಮನವರ, ಗೌರೀಶ ಹರಿಜನ, ರಾಜು ಗುಬ್ಬಕ್ಕನವರ, ಡಿ.ಎಫ್. ಮಡ್ಲಿ, ಫಕೀರಸ್ವಾಮಿ ಗುಲ್ಯಾನವರ, ಸುರೇಶ ಕೆರೆಹೊಲ್ದವರ, ಫಕೀರಜ್ಜ ಭೋಕಿಯವರ, ರೇಣುಕಾ ಕೋಣನಕೇರಿ ಉಪಸ್ಥಿತರಿದ್ದರು.