ಹಾಲಿನ ಹೊಳೆಯೇ ಹರಿದರೂ ದರ ಹೆಚ್ಚಳವೇಕೆ?: ಬಿಜೆಪಿ

| Published : Jun 30 2024, 12:46 AM IST

ಹಾಲಿನ ಹೊಳೆಯೇ ಹರಿದರೂ ದರ ಹೆಚ್ಚಳವೇಕೆ?: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹಾಲಿನ ಉತ್ಪಾದನೆ 1 ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ನೆಪದಲ್ಲಿ ಹಾಲು ದರ ಏರಿಕೆ ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹಾಲಿನ ಉತ್ಪಾದನೆ 1 ಕೋಟಿ ಲೀ. ಸನಿಹ ಎಂಬ ನೆಪದಲ್ಲಿ ದರ ಏರಿಕೆ ಹಾಸ್ಯಾಸ್ಪದ: ಸತೀಶ ಕೋನೇನಹಳ್ಳಿ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಹಾಲಿನ ಉತ್ಪಾದನೆ 1 ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ನೆಪದಲ್ಲಿ ಹಾಲು ದರ ಏರಿಕೆ ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಉತ್ಪನ್ನಗಳ ಅಭಾವ ಆದಾಗ ದರ ಹೆಚ್ಚಾಗುವುದು ಸಹಜ. ಆದರೆ, ರಾಜ್ಯದಲ್ಲಿ ಹೊಳೆಯೇ ಹರಿಯುತ್ತಿರುವಾಗ ದರ ಹೆಚ್ಚಿಸಿರುವುದು ಮೂರ್ಖತನದ ಪರಮಾವಧಿ ಎಂದರು.

ಹಾಲಿಗೆ ಹುಳಿ ಹಿಂಡಿದ ಸರ್ಕಾರ:

ಹಾಲು ಅಮೃತ ಸಮಾನವಾಗಿದ್ದು, ಇದು ಪೋಷಕಾಂಶಗಳ ಆಗರ. ಸಮೃದ್ಧಿಯ ಸಂಕೇತ ಹಾಲು. ಹಾಲಿನ ವಿಚಾರದಲ್ಲಿ ದರ ಹೆಚ್ಚು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹುಚ್ಚು ಹೆಚ್ಚಾಗಿ ನಿರ್ವಹಣೆ ಮಾಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಾಗಿದ್ದರಿಂದ 1 ಲೀಟರ್ ಪ್ಯಾಕೆಟ್ ಮೇಲೆ 100 ಎಂಎಲ್‌ ಹೆಚ್ಚಿಸಿ, ಹಳೆಯ ದರಕ್ಕೆ ಮಾರಾಟ ಮಾಡಿದ್ದರೆ ಗ್ರಾಹಕರು ಕ್ಷೀರಭಾಗ್ಯ ಅಂತಲೇ ಕೊಂಡಾಡುತ್ತಿದ್ದರು. ಆದರೆ, ಹಾಲಿನ ದರ ಹೆಚ್ಚಿಸಿದ ಕಾಂಗ್ರೆಸ್ ವರ್ತನೆ ಹಾಲಿಗೆ ಹುಳಿ ಹಿಂಡಿದಂತಾಗಿದೆ ಎಂದು ಟೀಕಿಸಿದರು.

ರಾಜ್ಯದ 15 ಹಾಲು ಒಕ್ಕೂಟಗಳಲ್ಲಿ 768691 ಹಾಲು ಉತ್ಪಾದಕ ರೈತರಿದ್ದಾರೆ. ಆಗಸ್ಟ್ 2023ರಿಂದ ಮಾರ್ಚ್ 2024ರವರೆಗೆ ಒಟ್ಟು 8 ತಿಂಗಳ ₹1083 ಕೋಟಿ ಪ್ರೋತ್ಸಾಹಧನ ಬಾಕಿ ನೀಡಬೇಕಾಗಿದೆ. ಆದರೆ, ಏಪ್ರಿಲ್ ತಿಂಗಳ ಪ್ರೋತ್ಸಾಹಧನ ₹109 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. 2023-24ನೇ ಸಾಲಿನ ಬಾಕಿ ಪ್ರೋತ್ಸಾಹಧನ ವಿಚಾರ ನನೆಗುದಿಗೆ ಬಿದ್ದಿದೆ. ಇದರಿಂದ ಹಾಲು ಉತ್ಪಾದಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಹಾಲಿನ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಲಿ ಎಂದು ಅವರು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಚಂದ್ರಶೇಖರ ಪೂಜಾರ, ಶಿರಮಗೊಂಡನಹಳ್ಳಿ ಮಂಜುನಾಥ, ಬಾತಿ ಶಿವಕುಮಾರ, ಅಣಬೇರು ಶಿವಪ್ರಕಾಶ, ಈಶ್ವರಪ್ಪ, ಮಂಜುನಾಥ ಇತರರು ಇದ್ದರು.

- - -

ಬಾಕ್ಸ್‌ * ಜುಲೈ 1ರಂದು ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ರಾಜ್ ಸರ್ಕಾರ ಕ್ಷೀರ ಸಮೃದ್ಧ ಬ್ಯಾಂಕ್ ಯಾಕೆ ಆರಂಭಿಸಿಲ್ಲ? ರಾಜ್ಯದಲ್ಲಿ 824 ರೈತರ ಆತ್ಮಹತ್ಯೆಗೆ ಕಾರಣಗಳು ಏನು? ರೈತರಿಗೆ ಅತ್ಯಂತ ನಿಕಟವಾಗಿರುವ ಕಂದಾಯ ಇಲಾಖೆಯಲ್ಲೇ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 1ರಂದು ಬಿಜೆಪಿ ಜಿಲ್ಲಾ ಘಟಕದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಬಡವರ ವಿರೋಧಿ ನೀತಿ, ಧೋರಣೆ, ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ 5 ಪುಕ್ಕಟೆ ಭಾಗ್ಯಗಳು ರಾಜ್ಯದ ಅಭಿವೃದ್ಧಿಗೆ ಶಾಪವಾಗಿವೆ. 200 ಯೂನಿಟ್ ವಿದ್ಯುತ್ ಉಚಿತ ಎಂದು ಅನೇಕ ಕಾನೂನು ಹೇರಿದರು. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ದರಗಳ ಏರಿಸಿದರು. ಬರ ಆವರಿಸಿ, ಕಂಗಾಲಾಗಿದ್ದ ರೈತರಿಗೆ ಬೀಜ, ಗೊಬ್ಬರದ ದರ ಹೆಚ್ಚಿಸಿ, ರೈತ ವಿರೋಧಿ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದೆ. ಈಗ ಹಾಲಿನ ದರ ಹೆಚ್ಚಿಸಿ, ಜನ ಸಾಮಾನ್ಯರಿಗೆ ಬರೆ ಎಳೆದಿದೆ ಎಂದು ಆರೋಪಿಸಿದರು. ಯಾಂತ್ರೀಕೃತ ಕೃಷಿಗೆ ಪ್ರೋತ್ಸಾಹಿಸಲು ರೈತರಿಗಾಗಿ ಡೀಸೆಲ್ ಬೆಲೆಯನ್ನು ಹಿಂದಿನ ಬಿಜೆಪಿ ಸರ್ಕಾರ ರೈತಶಕ್ತಿ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿ, ಡೀಸೆಲ್, ಪೆಟ್ರೋಲ್ ದರ ಏರಿಸಿ, ಯಾಂತ್ರೀಕೃತ ಕೃಷಿ ಚಟುವಟಿಕೆ ದುಬಾರಿ ಆಗುವಂತೆ ಮಾಡಿದೆ. ಪಂಪ್‌ ಸೆಟ್‌ಗಳಿಗೆ ಬಿಜೆಪಿ ಸರ್ಕಾರವಿದ್ದಾಗ ರೈತರು ₹25 ಸಾವಿರ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ರೈತರು ಕನಿಷ್ಠ ₹3-₹4 ಲಕ್ಷ ಖರ್ಚು ಮಾಡುವ ಸ್ಥಿತಿ ಬಂದಿದೆ. ಭೂ ಸಿರಿ ಯೋಜನೆ ನಿಲ್ಲಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆ ಸಹ ನಿಲ್ಲಿಸಿದ್ದಾರೆ. ದುಪ್ಪಟ್ಟು ಹಣ ಕೊಟ್ಟು, ಟ್ರಾನ್ಸ್‌ಫಾರ್ಮರ್ ಪಡೆಯುವಂತಾಗಿದೆ. ಮುದ್ರಾಂಕ ಶುಲ್ಕ ಏರಿಕೆ, ಆಸ್ತಿ ನೋಂದಣಿ ಶುಲ್ಕ ಶೇ.30 ಹೆಚ್ಚಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

- - - -29ಕೆಡಿವಿಜಿ1, 2:

ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.