ಜೀವ ಬಿಟ್ಟರೂ, ಜಮೀನು ಬಿಡೆವು: ರೈತರ ನಿಲುವು

| Published : Mar 01 2024, 02:23 AM IST

ಸಾರಾಂಶ

ತಾಲೂಕಿನ ಬಾಣಸಂದ್ರ, ದುಂಡ, ಬಲಮಾದಿಹಳ್ಳಿ, ಕೋಡಿಹಳ್ಳಿ, ಕುಣೀಕೇನಹಳ್ಳಿ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಕ್ಕಲ್ ನಿಕ್ಷೇಪ ಪತ್ತೆಯಾಗಿದೆ ಎಂಬ ಸುದ್ದಿ ಹರಡಿ ಸುತ್ತಮುತ್ತಲಿನ ರೈತಪಿ ವರ್ಗ ಕಂಗಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಬಾಣಸಂದ್ರ, ದುಂಡ, ಬಲಮಾದಿಹಳ್ಳಿ, ಕೋಡಿಹಳ್ಳಿ, ಕುಣೀಕೇನಹಳ್ಳಿ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಕ್ಕಲ್ ನಿಕ್ಷೇಪ ಪತ್ತೆಯಾಗಿದೆ ಎಂಬ ಸುದ್ದಿ ಹರಡಿ ಸುತ್ತಮುತ್ತಲಿನ ರೈತಪಿ ವರ್ಗ ಕಂಗಾಲಾಗಿದ್ದಾರೆ.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ನಡೆಸಿರುವ ಸರ್ವೇ ಕಾರ್ಯದಲ್ಲಿ ಈ ಭಾಗದಲ್ಲಿ ನಿಕ್ಕಲ್ ನಿಕ್ಷೇಪ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಈ ಸಂಬಂಧ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್‌ಗೆ ಇಲಾಖೆಯಿಂದ ಪತ್ರ ರವಾನೆಯಾಗಿದ್ದು, ಈ ಗ್ರಾಮಗಳಲ್ಲಿ ಸರ್ವೇ ಕಾರ್ಯ ಮಾಡಬೇಕೆಂದು ಸೂಚನೆ ಬಂದಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ತಾಲೂಕಿನ ಕೋಡಿಹಳ್ಳಿ ಬಳಿ ಜಮಾಯಿಸಿದ ನೂರಾರು ರೈತರು ತಮ್ಮ ಪ್ರಾಣವನ್ನು ಬಿಟ್ಟೇವು. ಆದರೆ ಜಮೀನು ಬಿಡೆವು ಎಂಬ ಘೋಷವಾಕ್ಯದಿಂದ ಇಂದಿನಿಂದ ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ.

ದುಂಡದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್, ದಂಡಿನ ಶಿವರ ಗ್ರಾಮ ಪಂಚಾಯ್ತಿ ಸದಸ್ಯ ದುಂಡ ಕುಮಾರ್‌, ಬಾಣಸಂದ್ರದ ರವಿಕುಮಾರ್‌ ಮತ್ತು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮೀದೇವಮ್ಮ ನವರ ನೇತೃತ್ವದಲ್ಲಿ ಸಭೆ ಸೇರಿದ ರೈತಾಪಿಗಳು ಯಾವುದೇ ಕಾರಣಕ್ಕೂ ಸಮೀಕ್ಷೆಗೆ ಅವಕಾಶ ನೀಡಬಾರದೆಂದು ನಿರ್ಧರಿಸಿದ್ದಾರೆ.

ಈ ಕುರಿತು ಮಾತನಾಡಿದ ದುಂಡ ಸುರೇಶ್, ನೂರಾರು ವರ್ಷಗಳಿಂದ ಇಲ್ಲಿ ದಲಿತರು, ಹಿಂದುಳಿದ ಜನಾಂಗ ಸೇರಿದಂತೆ ಹಲವಾರು ಮಂದಿ ರೈತರು ಇಲ್ಲಿರುವ ಜಮೀನನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿ ಯಾರೂ ಸಹ ನೂರಾರು ಎಕರೆ ಭೂಮಿ ಹೊಂದಿದವರು ಇಲ್ಲ. ಒಂದೆರೆಡು ಎಕರೆ ಜಮೀನನ್ನು ಮಾತ್ರ ಹೊಂದಿ ಅದರಲ್ಲೇ ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬದ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈಗ ಈ ಜಮೀನುಗಳ ತಳಭಾಗದಲ್ಲಿ ನಿಕ್ಕಲ್ ನಿಕ್ಷೇಪ ಸಿಗಲಿದೆ ಎಂದು ಹಬ್ಬಿರುವ ಸುದ್ದಿಯಿಂದ ರೈತಾಪಿಗಳು ಕಂಗಾಲಾಗಿದ್ದಾರೆ.

ನಿಕ್ಕಲ್ ಗಣಿಗಾರಿಕೆ ಆರಂಭಿಸಿದರೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜಮೀನು ಹಾಳಾಗಿ ಹೋಗಲಿದೆ. ಅದ್ದರಿಂದ ರೋಗರುಜಿನಗಳು ಜಾಸ್ತಿಯಾಗಲಿದೆ. ನೂರಾರು ಅಡಿ ಆಳ ಭೂಮಿಯನ್ನು ಅಗೆಯುವುದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಲಿದೆ. ಈಗ ಮಾಡಲು ಉದ್ಧೇಶಿಸಿರುವ ಗಣಿಗಾರಿಕೆಯಿಂದ ಸಮೀಪವೇ ಇರುವ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯ, ಸಾರಿಗೇಹಳ್ಳಿ ಕೆರೆ ಸೇರಿದಂತೆ ನೂರಾರು ಜೀವರಕ್ಷಕವಾಗಿರುವ ಪ್ರಕೃತಿ ಸಂಕುಲ ಹಾನಿಯಾಗಲಿದೆ ಎಂದು ದುಂಡ ಸುರೇಶ್ ಕಳವಳ ವ್ಯಕ್ತಪಡಿಸಿದರು.

ಸುಮಾರು ಎರಡು ಸಾವಿರ ಎಕರೆ ಜಮೀನಿನಲ್ಲಿ ನಿಕ್ಕಲ್ ನಿಕ್ಷೇಪ ತೆಗೆಯಲು ಸರ್ಕಾರ ಮುಂದಾದರೆ ಇಲ್ಲಿರುವ ರೈತ ಕುಟುಂಬದ ಎಲ್ಲಾ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಎಚ್ಚರಿಕೆ ನೀಡಿದ್ದಾರೆ.

ಮನವಿ: ಈ ಕುರಿತಂತೆ ರೈತಾಪಿಗಳಲ್ಲಿ ಇರುವ ಆತಂಕವನ್ನು ಹಾಲಿ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ರವರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ರೈತರ ಉಳಿವಿಗಾಗಿ ಉದ್ದೇಶಿತ ನಿಕ್ಕಲ್ ನಿಕ್ಷೇಪ ಸಮೀಕ್ಷೆ ಕಾರ್ಯಕ್ಕೆ ಪೂರ್ಣ ವಿರಾಮ ಹಾಕಿಸಿ ಎಂದಿನಂತೆ ರೈತಪಿಗಳು ತಮ್ಮ ಜೀವನವನ್ನು ನಿರ್ವಹಿಸಿಕೊಂಡು ಹೋಗುವಂತೆ ತಮ್ಮೆಲ್ಲರ ಜೊತೆ ಕೈ ಜೋಡಿಸಬೇಕೆಂದು ರೈತಾಪಿಗಳು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಯಾಮರಣ ಕರುಣಿಸಲಿ: ನಿಕ್ಕಲ್ ನಿಕ್ಷೇಪವನ್ನು ಹೊರತೆಗೆಯಬೇಕೆಂದು ಸರ್ಕಾರ ಪಟ್ಟು ಹಿಡಿದರೆ ಇಲ್ಲಿಯ ಜಮೀನುಗಳನ್ನು ನೆಚ್ಚಿ ಜೀವನ ನಡೆಸುತ್ತಿರುವ ಎಲ್ಲಾ ರೈತಾಪಿಗಳ ಕುಟುಂಬಕ್ಕೆ ದಯಾಮರಣವನ್ನು ಸರ್ಕಾರವೇ ಕರುಣಿಸಬೇಕು ಎಂದು ದಂಡಿನಶಿವರ ಗ್ರಾಮ ಪಂಚಾಯ್ತಿ ಸದಸ್ಯ ದುಂಡ ಕುಮಾರ್‌ ಹೇಳಿದ್ದಾರೆ. ದುಡ್ಡು ಎಷ್ಠೇ ಸಿಕ್ಕರೂ ಸಹ ಆರೋಗ್ಯ ಸಿಗದು. ಕುಡಿಯುವ ನೀರಿಗ ತತ್ವಾರ ಎದುರಾಗಲಿದೆ. ಆರೋಗ್ಯದ ಸಮಸ್ಯೆ ಎದುರಾಗಲಿದೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.