ಸಾರಾಂಶ
ಹುಬ್ಬಳ್ಳಿ:
ಸಂವಹನಕ್ಕೆ ಅನ್ಯಭಾಷೆ ಕಲಿಯುವುದು ಅಗತ್ಯ ಹಾಗೂ ಅನಿವಾರ್ಯ. ಆದರೆ, ಬೇರೆ ಭಾಷೆಗಳನ್ನು ಕಲಿತು ಕನ್ನಡ ಭಾಷೆ ಮರೆಯಬಾರದು. ಮನೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕು. ಮಕ್ಕಳಿಗೂ ಕನ್ನಡದಲ್ಲಿಯೇ ಮಾತನಾಡುವಂತೆ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದ ನೆಹರು ಮೈದಾನದಲ್ಲಿ ಮಹಾನಗರ ಪಾಲಿಕೆಯಿಂದ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಿದಾಗ ಮಾತ್ರ ಕನ್ನಡ ಭಾಷೆ ಇನ್ನಷ್ಟು ಶ್ರೀಮಂತಗೊಳಿಸಲು ಸಾಧ್ಯ ಎಂದರು.
ಸಂಶೋಧನೆ ಪ್ರಕಾರ ಕನ್ನಡ ಭಾಷೆಗೆ ಎರಡೂ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕನ್ನಡದ ಕವಿರಾಜಮಾರ್ಗ ಕೃತಿ ಎಂಟನೇ ಶತಮಾನದಲ್ಲಿ ರಚನೆಯಾಗಿದೆ. ಇಂತಹ ಪ್ರಾಚೀನ ಭಾಷೆಯ ಮೇಲೆ ಅನ್ಯ ಭಾಷೆಗಳ ದಾಳಿ ಹೆಚ್ಚಾಗುತ್ತಿರುವುದರಿಂದ ನಮ್ಮ ಭಾಷೆ ಉಳಿಸಿ ಬೆಳೆಸುವ ಬಗ್ಗೆ ಮಾತನಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.ನಮ್ಮ ಹಿರಿಯರು ಕನ್ನಡ, ಕರ್ನಾಟಕ ಉಳಿವಿಗೆ ದೊಡ್ಡ ಹೋರಾಟಗಳನ್ನೇ ಮಾಡಿದ್ದಾರೆ. ಕರ್ನಾಟಕ ಏಕೀಕರಣ ಆಗಲು ಉತ್ತರ ಕರ್ನಾಟಕದ ಪಾತ್ರ ದೊಡ್ಡದಿದೆ. ಗೋಕಾಕ ಚಳವಳಿಯಂತಹ ದೊಡ್ಡ ಹೋರಾಟ ಆರಂಭವಾಗಿದ್ದೆ ಉತ್ತರ ಕರ್ನಾಟಕದಲ್ಲಿ. ಆ ಹೋರಾಟಕ್ಕೆ ಡಾ. ರಾಜಕುಮಾರ ಅವರ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದರು ಎಂದು ಸ್ಮರಿಸಿದರು.
ಆಡಳಿತದಲ್ಲಿ ಯಾವುದೇ ಪಕ್ಷ ಇರಲಿ, ಕನ್ನಡನಾಡು, ನುಡಿ ವಿಚಾರವಾಗಿ ಯಾವುದೇ ರೀತಿಯ ಗೊಂದಲದ ನಿರ್ಧಾರ ತೆಗೆದುಕೊಳ್ಳದೇ ಕನ್ನಡ ಭಾಷೆ ಬೆಳವಣಿಗೆಗೆ ಒಂದು ಹೆಜ್ಜೆ ಮುಂದಿರಬೇಕು ಎಂದ ಅವರು, ಹೊಸ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಿದೆ. ರೈಲ್ವೆ ಸೇರಿದಂತೆ ಕೇಂದ್ರದ ಹಲವಾರು ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೇ ಬರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಮೈಸೂರು ರಾಜ್ಯ ಇದ್ದಾಗ ಕರ್ನಾಟಕ ಈಗಿನ ಕರ್ನಾಟಕ ಆಗಿರಲಿಲ್ಲ, ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಧಾರವಾಡದಿಂದ ಆರಂಭವಾದ ಏಕೀಕರಣ ಹೋರಾಟದ ಮೂಲಕ ಇಂದಿನ ಕರ್ನಾಟಕ ಅಸ್ತಿತ್ವಕ್ಕೆ ಬಂದಿದೆ. ಆದಾಗ್ಯೂ ಮೈಸೂರು ಕರ್ನಾಟಕಕ್ಕೆ ಹೋಲಿಸಿದರೆ, ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಬಹಳಷ್ಟು ಹಿಂದುಳಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾದೇಶಿಕ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಲಾಗಿದೆ. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ವೇಗ ಪಡೆದಿವೆ. ಅದೇ ರೀತಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಕೆಲಸ ಆಗಬೇಕು, ಕಿತ್ತೂರು ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಮುಂದುವರಿದಿಲ್ಲ. ಅದು ಕಾರ್ಯರೂಪಕ್ಕೆ ಬಂದು ಹೆಚ್ಚಿನ ಅನುದಾನ ಸಿಗುವ ಮೂಲಕ ಅಭಿವೃದ್ಧಿ ಕಾರ್ಯ ಆರಂಭಿಸಲು ನಾವೆಲ್ಲ ಹೋರಾಟ ನಡೆಸುತ್ತೇವೆ ಎಂದರು.ಫ್ಯಾಬ್ ಕೈಗಾರಿಕೆ ಬರಲಿ:
ಕಿತ್ತೂರ, ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚೆಚ್ಚು ಆಗಬೇಕಿದೆ. ಈ ಭಾಗದಲ್ಲಿ ಫ್ಯಾಬ್ ಉತ್ಪಾದನಾ ಘಟಕ ಆರಂಭಿಸಲು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಆ ಘಟಕಕ್ಕೆ ಕಾಳಿ ನದಿ ನೀರು ಕೊಡಲು ನಾವು ಸಿದ್ಧರಿದ್ದೇವೆ. ಫ್ಯಾಬ್ ಇಂಡಸ್ಟ್ರಿ ಇಲ್ಲಿ ಬಂದರೆ ಕೈಗಾರಿಕಾ ಕ್ರಾಂತಿ ಆಗಲಿದೆ ಎಂದು ಬೆಲ್ಲದ ಅಭಿಪ್ರಾಯಪಟ್ಟರು.ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿದರು. ಉಪಮೇಯರ್ ದುರ್ಗಮ್ಮ ಬಿಜವಾಡ, ಸದಸ್ಯರಾದ ವೀರಣ್ಣ ಸವಡಿ, ರಾಜಣ್ಣ ಕೊರವಿ, ಈಶ್ವರ ಉಳ್ಳಾಗಡ್ಡಿ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.ಭವ್ಯ ಮೆರವಣಿಗೆ...
ಸಭಾ ಕಾರ್ಯಕ್ರಮಕ್ಕೂ ಮುನ್ನ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಶ್ರೀಸಿದ್ಧಾರೂಢ ಮಠದ ಪ್ರಾಂಗಣದಲ್ಲಿ ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಈ ವೇಳೆ ಸಚಿವ ಜೋಶಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇಬ್ಬರು ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಕೊಂಚ ದೂರ ಹೆಜ್ಜೆ ಕೂಡ ಹಾಕಿದರು. ವಿವಿಧ ಕಲಾ ಮೇಳಗಳು ಮೆರವಣಿಗೆಗೆ ಮೆರಗು ತಂದವು. ಕಸದ ಮಹತ್ವ ಸಾರುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಸಿದ್ಧಾರೂಢ ಮಠದಿಂದ ಪ್ರಾರಂಭವಾದ ಮೆರವಣಿಗೆಯೂ ನೆಹರು ಮೈದಾನದವರೆಗೆ ನಡೆದು ಮುಕ್ತಾಯಗೊಂಡಿತು.