ಸೋತರೂ ಪರವಾಗಿಲ್ಲ ಕ್ರೀಡೆಯಲ್ಲಿ ಧರ್ಮ ಪಾಲಿಸಿ: ಪ್ರಸನ್ನನಾಥ ಸ್ವಾಮೀಜಿ ಸಲಹೆ

| Published : Nov 20 2024, 12:35 AM IST

ಸೋತರೂ ಪರವಾಗಿಲ್ಲ ಕ್ರೀಡೆಯಲ್ಲಿ ಧರ್ಮ ಪಾಲಿಸಿ: ಪ್ರಸನ್ನನಾಥ ಸ್ವಾಮೀಜಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ಶಾಲೆಯಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರಂತೆ ಮಕ್ಕಳನ್ನು ಪ್ರೀತಿಸಬೇಕು. ಮಕ್ಕಳಿಗೆ ಸರಿಯಾದ ಪ್ರೀತಿ ಸಿಗದೆ ಪ್ರತೇಕ ಮನೋಭಾವದಲ್ಲಿ ಬೆಳೆಯುತ್ತಿದ್ದರೆ ಇದಕ್ಕಾಗಿ ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು .

ಕನ್ನಡಪ್ರಭ ವಾರ್ತೆ ಪಾಂಡವಪುರಬಹುಮಾನಕ್ಕಾಗಿ ಯಾವತ್ತು ಅನ್ಯಾಯ ಮತ್ತು ಅಧರ್ಮದ ಆಟವಾಡಬಾರದು. ಸೋತರೂ ಪರವಾಗಿಲ್ಲ, ಕ್ರೀಡೆಯಲ್ಲಿ ಧರ್ಮ ಪಾಲಿಸಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಕಿವಿಮಾತು ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ , ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಮ್ಮ ತಂಡ ಗೆಲ್ಲಬೇಕು ಎಂಬ ಉದ್ದೇಶಕ್ಕೆ ಅಧರ್ಮದ ಕಡೆ ವಾಲಬಾರದು. ಮಕ್ಕಳಿಗೂ ಇದೇ ರೀತಿಯ ಶಿಕ್ಷಣ ನೀಡಬೇಕು ಎಂದು ಹೇಳಿದರು.ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಆತ್ಮಬಲ, ಆತ್ಮಸ್ಥೈರ್ಯ ತುಂಬಬೇಕು. ಸೋಲನ್ನು ಗೆಲುವಿನಷ್ಟೇ ಸಮಾನವಾಗಿ ಸ್ವೀಕರಿಸುವಷ್ಟು ಮನೋಬಲ ತುಂಬಿದರೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋತಾಗ ಕುಗ್ಗದೆ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಇದರ ಜತೆಗೆ ಕ್ರೀಡೆಯಲ್ಲಿ ಅನ್ಯಾಯವಾಗುವುದು ಗಮನಕ್ಕೆ ಬಂದರೆ ಪ್ರಶ್ನಿಸಲು ಸಾಧ್ಯವಾಗದಿದ್ದರೂ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಕಾಲೇಜಿ ನಿವೃತ್ತ ಪ್ರಾಚಾರ್ಯ ಡಾ.ಸುಂದರ್ ರಾಜ್ ಅರಸ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಪಟುಗಳ ಹುಟ್ಟಿಗೆ ತಳಪಾಯ ಹಾಕುತ್ತಾರೆ. ಕ್ರೀಡೆ ಮನೋವಿಜ್ಞಾನದ ಶಾಖೆ ಇದ್ದಂತೆ. ಆರೋಗ್ಯವಂತ ಮನಸ್ಸು ಮತ್ತು ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಶಿಕ್ಷಕರ ಕೆಲಸ ಎಂದರು.ಶಿಕ್ಷಕರು ಶಾಲೆಯಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರಂತೆ ಮಕ್ಕಳನ್ನು ಪ್ರೀತಿಸಬೇಕು. ಮಕ್ಕಳಿಗೆ ಸರಿಯಾದ ಪ್ರೀತಿ ಸಿಗದೆ ಪ್ರತೇಕ ಮನೋಭಾವದಲ್ಲಿ ಬೆಳೆಯುತ್ತಿದ್ದರೆ ಇದಕ್ಕಾಗಿ ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದು ತಿಳಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತಗೊಂಡ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಉಪಾಧ್ಯಕ್ಷ ಕುಮಾರ್, ಖಜಾಂಚಿ ಬಾಲರಾಜ್, ಕಾರ್ಯದರ್ಶಿ ವೇದಾವತಿ, ತಾಲೂಕು ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಕಡತನಾಳು ಶ್ರೀನಿವಾಸ್, ಉಪಾಧ್ಯಕ್ಷ ವಿಶ್ವನಾಥ್, ಎಚ್.ಎನ್.ರಘು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್ ಇದ್ದರು.