ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಲ್ಯಾಂಡ್ ಲಾರ್ಡ್ ಸಿನಿಮಾದ ರೋಮಾಂಚಕ ಹಾಡನ್ನು ನಟಿ ರಚಿತಾ ರಾಮ್ ಬಿಡುಗಡೆ ಮಾಡಿದರು.

ಧಾರವಾಡ: ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಲ್ಯಾಂಡ್ ಲಾರ್ಡ್ ಸಿನಿಮಾದ ರೋಮಾಂಚಕ ಹಾಡನ್ನು ನಟಿ ರಚಿತಾ ರಾಮ್ ಬಿಡುಗಡೆ ಮಾಡಿದರು.

ಇದು ನಮ್ಮ ಚಿತ್ರದ ಪ್ರಮೋಷನ್ ಮೊದಲ ಕಾರ್ಯಕ್ರಮ. ಎಲ್ಲದಕ್ಕೂ ಧಾರವಾಡ ದಾರಿ ತೋರಿಸುತ್ತದೆ ಎನ್ನುತ್ತಾರೆ. ಹಾಗೆಯೇ, ಧಾರವಾಡದಿಂದ ಸಿನಿಮಾದ ಯಶಸ್ಸು ಕಾಣಲು ಬಯಸಿದ್ದೇವೆ. ನಿಂಗವ್ವ ಹಾಡಿಗೆ ಒಳ್ಳೆಯ ಸ್ಪಂದನೆ ದೊರಕಿದೆ. ರೋಮಾಂಚಕ ಹಾಡಿಗೂ ತಾವೆಲ್ಲರೂ ಹರಿಸಬೇಕು. ಜ. 23ರಂದು ನನ್ನ ಲ್ಯಾಂಡ್ ಲಾರ್ಡ್ ಹಾಗೂ ಕಲ್ಟ್ ಎರಡು ಸಿನಿಮಾ ರಿಲೀಸ್ ಆಗುತ್ತಿವೆ. ಎರಡನ್ನೂ ನೋಡಿ. ಚಿತ್ರಗಳ ಯಶಸ್ಸಿನ ನಂತರ ಮತ್ತೆ ಧಾರವಾಡಕ್ಕೆ ಬರುತ್ತೇನೆ ಎಂದರು.

ನಟ ಮಿತ್ರ ಪಂಚಿಂಗ್ ಡೈಲಾಗ್ ಹೊಡೆದು, ಇಂದು ನಮ್ಮ ಚಿತ್ರದ ರೋಮಾಂಚಕ ಗೀತೆ ಧಾರವಾಡದಲ್ಲಿ ರಿಲೀಸ್ ಮಾಡಿದ್ದೇವೆ. ಕಾಮಿಡಿ ಪಾತ್ರಗಳನ್ನು ಮಾಡತಾ ಇದ್ದ ನನಗೆ ನಿರ್ದೇಶಕ ಜಡೇಶ್ ಗಡ್ಡ ಬಿಡಿಸಿ ಸಿರಿಯಸ್ ಪಾತ್ರ ಮಾಡಿಸಿದ್ದಾರೆ. ರಿತನ್ಯ ಅವರ ಹಾಡನ್ನು ಧಾರವಾಡದಲ್ಲೇ ರಿಲೀಸ್ ಮಾಡಬೇಕು ಎಂಬ ಆಸೆ ವಿಜಯ್ ಅವರದು. ಲ್ಯಾಂಡ್ ಲಾರ್ಡ್ ಮೂಲಕ ನಿರ್ದೇಶಕರು ಮತ್ತೊಮ್ಮೆ ಅದ್ಬುತ ಕಥೆ ತೆಗೆದುಕೊಂಡು ಬರತಾ ಇದ್ದಾರೆ ಎಂದು ಹೇಳಿದರು.

ನಟ ಮಾಲತೇಶ ಹಿರೇಮಠ, ಧಾರವಾಡ ನನ್ನೂರು. ಎರಡು ವರ್ಷ ಇಲ್ಲಿ ಇದ್ದೆ. ಈ ಊರು ತುಂಬಾ ಕಲಿಸಿದೆ. 17 ವರ್ಷದ ಹಿಂದೆ ಸಿನಿಮಾ ಕನಸು ಕಟ್ಟಿಕೊಂಡು ಹೋಗಿ ಜಡೇಶ್ ಜಂಟಲಮೆನ್ ಮಾಡಿದರು. ನಂತರ ಗುರು ಶಿಷ್ಯರು ಹಾಗೂ ಕಾಟೇರ ಸಿನಿಮಾಗಳಿಗೆ ಕಥೆ ಬರೆದರು. ಈಗ ಲ್ಯಾಂಡ್ ಲಾರ್ಡ್ ಸಿನಿಮಾ ಮಾಡಿದ್ದಾರೆ. ಇವರು ನಮ್ಮ ಉತ್ತರ ಕರ್ನಾಟಕ ಪ್ರತಿಭೆ. ಈ ಚಿತ್ರದಲ್ಲಿ ನಾನು ನಗಿಸುವ ಜತೆಗೆ ಅಳಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ನಟ ಶಿಶಿರ, ನವೀನ್ ಕುಮಾರ್ ಅಳಗೋಡಿ, ನಟಿ ಭಾವನಾ ರಾವ್, ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿದರು. ಆರ್.ವಿ. ಡ್ಯಾನ್ಸ್ ಅಕಾಡೆಮಿಯ ನೃತ್ಯ, ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಶುರುವಾದ ವೇದಿಕೆಯಲ್ಲಿ ಜನರನ್ನು ಮನರಂಜಿಸಲು ಯುವ ಗಾಯಕರಾದ ಪೃಥ್ವಿ ಭಟ್, ನಿಶಾನ ರಾಯ್, ವಿಶಾಕ ನಾಗಲಾಪುರ ಅವರುಗಳು ರಾ ರಾ ರಕ್ಕಮ್ಮ, ಚುಟು ಚುಟು, ನೀ ನೀರಿಗೆ ಬಾರೆ ಚನ್ನಿ, ಹಳೆ ಹುಬ್ಳ ಬಸ್ಟಾಂಡ್ ನಾಗ ನಿಂತಿದ್ದೆ, ಏನಮ್ಮಿ ಏನಮ್ಮಿ... ಮುಂತಾದ ಹಾಡುಗಳನ್ನು ಹಾಡಿದರು.