ಸಾರಾಂಶ
- ಬೆಂಗಳೂರಿನ ಸೈಬರ್ ಭದ್ರತಾ ನಿರ್ವಹಣಾ ಸಲಹೆಗಾರ ಎ.ಎನ್.ಯಶವಂತ ಅಭಿಮತ
- - - - - -- ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ವರ್ತಮಾನ ವೇದಿಕೆಯಿಂದ ಸೈಬರ್ ವಂಚನೆ-ಒಳಸುಳಿವು ಉಪನ್ಯಾಸ
- ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ 1500 ಯುಎಸ್ ಡಾಲರ್ಸ್‌ನಂತೆ ವಾರ್ಷಿಕ 5 ಟ್ರಿಲಿಯನ್ ಡಾಲರ್ಸ್‌ನಷ್ಟು ಮೋಸವಾಗುತ್ತಿದೆ- ದೂರು ನೀಡುವುದು ವಿಳಂಬವಾದಷ್ಟು ಸೈಬರ್ ವಂಚನೆ ಮಾಡಿದವನಿಗೆ ಹಣ ಡ್ರಾ ಮಾಡಿಕೊಳ್ಳಲು ಹೆಚ್ಚು ಕಾಲಾವಕಾಶ ಕೊಟ್ಟಂತಾಗುತ್ತದೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದುಬಾರಿ ಮೊಬೈಲ್‌ಗಳು, ಐಫೋನ್‌ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಅಂಥ ಮೊಬೈಲ್‌ಗಳನ್ನೂ ಹ್ಯಾಕ್ ಮಾಡಬಹುದು. ಮುಂದುವರಿದ ತಂತ್ರಜ್ಞಾನದಲ್ಲಿ ಪ್ರತಿಯೊಂದು ಸ್ಮಾರ್ಟ್ ಉಪಕರಣಗಳನ್ನು ಹ್ಯಾಕ್ ಮಾಡಬಹುದು ಎಂದು ಬೆಂಗಳೂರಿನ ಸೈಬರ್ ಭದ್ರತಾ ನಿರ್ವಹಣಾ ಸಲಹೆಗಾರ ಎ.ಎಸ್.ಯಶವಂತ ಅಭಿಪ್ರಾಯಪಟ್ಟರು.ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಶನಿವಾರ ವರ್ತಮಾನ ವೇದಿಕೆ ಹಮ್ಮಿಕೊಂಡಿದ್ದ ಸೈಬರ್ ವಂಚನೆ-ಒಳಸುಳಿವು ವಿಷಯ ಕುರಿತು ಅವರು ಮಾತನಾಡಿದರು. ಇಂಟರ್‌ನೆಟ್ ಡೇಟಾ ಎಂಬುದು ಈಗ ಪೆಟ್ರೋಲ್, ಡೀಸೆಲ್‌ಗಿಂತ ಹೆಚ್ಚು ಬೇಡಿಕೆಯುಳ್ಳ ಇಂಧನವಾಗಿ ಪರಿವರ್ತನೆಯಾಗಿದೆ ಎಂದರು.
ಇಂಧನಗಳನ್ನೂ ಮೀರಿಸುವಂತೆ ಡೇಟಾ ಹೆಚ್ಚಾಗಿ ಖರ್ಚಾಗುತ್ತಿದೆ. ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಅಮೇರಿಕಾ, ಚೀನಾ ದೇಶಗಳು ಮೊದಲ ಎರಡು ಸ್ಥಾನಗಳಿದ್ದರೆ, ಸೈಬರ್ ವಂಚನೆ ಮೂರನೇ ಸ್ಥಾನದಲ್ಲಿದೆ. ಇಂತಹ ವಂಚನೆ, ಮೋಸಗಳಿಂದ ಜನರು ಸದಾ ಜಾಗೃತರಾಗಿರಬೇಕು ಎಂದು ಅವರು ಹೇಳಿದರು. ಬಗೆಬಗೆಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ, ಮಾಡುವ ವಂಚನೆಯನ್ನು ಸೈಬರ್ ಅಪರಾಧ ಎನ್ನುತ್ತಾರೆ. ಈಚಿನ ದಿನಗಳಲ್ಲಿ ಸೈಬರ್ ಅಪರಾಧಕ್ಕೆ ತುತ್ತಾಗುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಬಗ್ಗೆ ಜನ ಜಾಗೃತರಾಗಬೇಕು. ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ 1500 ಯುಎಸ್ ಡಾಲರ್ಸ್‌ನಂತೆ ವಾರ್ಷಿಕ 5 ಟ್ರಿಲಿಯನ್ ಡಾಲರ್ಸ್‌ನಷ್ಟು ಮೋಸವಾಗುತ್ತಿದೆ. ದೇಶದಲ್ಲಿ 2023ರ ಅಂಕಿ ಸಂಖ್ಯೆಗಳ ಪ್ರಕಾರ ದೇಶದ ಪ್ರಮುಖ 10 ನಗರಗಳಿಂದ ಸೈಬರ್ ಅಪರಾಧ ನಡೆಯುತ್ತಿವೆ ಎಂದು ತಿಳಿಸಿದರು.ಸೈಬರ್ ವಂಚನೆಗೆ ಒಳಗಾಗುತ್ತಿರುವ ಜಗತ್ತಿನ ವಿವಿಧ ದೇಶಗಳ ಸಾಲಿನಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಇಷ್ಟೆಲ್ಲಾ ಸೈಬರ್ ಅಪರಾಧ ನಡೆದರೂ ಪೊಲೀಸರಿಂದ ತಡೆಯಲು ಸಾಧ್ಯವಾಗಿಲ್ಲ. ವಂಚನೆ ಮೂಲ ತಿಳಿಯುವುದು ಕಷ್ಟವಾಗುತ್ತಿರುವುದೇ ಇದಕ್ಕೆ ಕಾರಣ. ಆದರೆ, ವಂಚನೆ ನಡೆದ ತಕ್ಷಣ ಜನರು ದೂರು ನೀಡಬೇಕು. ದೂರು ನೀಡುವುದು ವಿಳಂಬವಾದಷ್ಟು ವಂಚನೆ ಮಾಡಿದವನಿಗೆ ಹಣ ಡ್ರಾ ಮಾಡಿಕೊಳ್ಳಲು ಹೆಚ್ಚು ಕಾಲಾವಕಾಶ ಕೊಟ್ಟಂತಾಗುತ್ತದೆ. ಆದ್ದರಿಂದ ಅನ್ಯಾಯ ಕಂಡುಬಂದ ತಕ್ಷಣವೇ ದೂರು ದಾಖಲಿಸಿದರೆ, ಸೈಬರ್ ಕಳ್ಳರ ಪತ್ತೆ ಸಾಧ್ಯವಾಗಬಲ್ಲದು ಎಂದು ತಿಳಿಸಿದರು.
ಮೊಬೈಲ್ ಫೋನನ್ನು 5 ನಿಮಿಷ ಸಹ ಬಿಟ್ಟಿರಲು ಆಗದಿರುವ ಮನಸ್ಥಿತಿಯನ್ನು ನೋಮೋಫೋಬಿಯಾ ಎಂಬುದಾಗಿ ಮನೋವಿಜ್ಞಾನಿಗಳು ಕರೆದಿದ್ದಾರೆ. ಅಂತಹ ಸ್ಥಿತಿಗೆ ಜಗತ್ತಿನ ಬಹುತೇಕ ಜನ ಬಂದು ನಿಂತಿದ್ದೇವೆ. ಈ ಅಭ್ಯಾಸ ಬಿಡಿಸುವ ಕೇಂದ್ರಗಳು ಬೆಂಗಳೂರಿನಲ್ಲಿ ಶುರುವಾಗಿವೆ. ಇದರ ಮುಂದುವರಿದ ಭಾಗವಾಗಿ ಈಡಿಯೆಟ್ ಸಿಂಡ್ರೋಮ್ ಸಹ ಹೆಚ್ಚುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಇದರ ಬಗ್ಗೆ ಹೆಚ್ಚಾಗಿ ಗೊತ್ತಿದೆ. ಈ ಹಿಂದೆ ವೈದ್ಯರು ಏನಾದರೂ ಚೀಟಿ ಬರೆದುಕೊಟ್ಟರೆ, ಅದನ್ನು ಮೊಬೈಲ್, ಕಂಪ್ಯೂಟರ್‌ನಲ್ಲಿ ಹುಡುಕುವ ಅಭ್ಯಾಸವಿತ್ತು. ಇದೇ ರೀತಿ ಇಂಟರ್ ನೆಟ್‌ನಲ್ಲೂ ಹುಡುಕುವ ಅಭ್ಯಾಸ ಹೆಚ್ಚಾಗುತ್ತಿದೆ. ಈಡಿಯಟ್ ಸಿಂಡ್ರೋಮ್‌ನಿಂದಲೂ ಜನ ಮೋಸ ಹೋಗುವುದು ಹೆಚ್ಚುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಪೊಲೀಸ್ ಇಲಾಖೆ ಸೈಬರ್ ಕ್ರೈಂ ವಿಭಾಗದ ಸುನಿಲ್ ತೇಲಿ, ವರ್ತಮಾನದ ಶ್ರೀನಿವಾಸ ಮೂರ್ತಿ ಇತರರು ಇದ್ದರು. - - - -15ಕೆಡಿವಿಜಿ10, 11.ಜೆಪಿಜಿ:
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೈಬರ್ ಭದ್ರತಾ ನಿರ್ವಹಣಾ ಸಲಹೆಗಾರ ಎ.ಎಸ್. ಯಶವಂತ ಮಾತನಾಡಿದರು. ಪೊಲೀಸ್ ಇಲಾಖೆ ಸೈಬರ್ ಕ್ರೈಂ ವಿಭಾಗದ ಸುನಿಲ್ ತೇಲಿ ಇತರರು ಇತರಿದ್ದರು.