ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕ ಹಿಂದುಳಿಯಲು ಈ ಭಾಗದ ಆಡಳಿತಗಾರರೇ ನೇರ ಕಾರಣ. ಪ್ರಮುಖವಾಗಿ ಇಲ್ಲಿಯ ಜನರ ಮನಸ್ಥಿತಿ ಹಿನ್ನೆಲೆಯಲ್ಲಿಯೇ ಈ ಊರಿನ ಅಭಿವೃದ್ಧಿ ನಿಂತಿದೆ.
ಧಾರವಾಡ:
ಕರ್ನಾಟಕ ಏಕೀಕರಣ ಆದಾಗಿನಿಂದಲೂ ಈ ವರೆಗೆ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಸೇರಿ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಉಂಟಾಗಿದೆ. ಈ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಈ ಮೊದಲು ಹಲವು ಪ್ರಯತ್ನಗಳು ನಡೆದರೂ ಕರ್ನಾಟಕ ವಿದ್ಯಾವರ್ಧಕ ಸಂಘವು ಶನಿವಾರ ಈ ವಿಷಯವಾಗಿ ಚಿಂತನಾ ಸಮಾವೇಶ ಏರ್ಪಡಿಸಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಿತು.ಪ್ರೊ. ಎಂ. ಗೋವಿಂದರಾವ್ ಅವರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿ ಆಧಾರಿತವಾಗಿ ನಡೆದ ಚಿಂತನಾ ಗೋಷ್ಠಿಯಲ್ಲಿ ತರಹೇವಾರಿ ವಿಷಯಗಳ ಕುರಿತು ಚಿಂತಕರು ಉತ್ತರ ಕರ್ನಾಟಕಕ್ಕೆ ಯಾವ್ಯಾವ ಕಾಲಕ್ಕೆ, ಯಾವ ರೀತಿಯಲ್ಲಿ ಅನ್ಯಾಯಗಳಾಗಿವೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಬಿಚ್ಚಿಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಕಾನೂನು ತಜ್ಞ ಡಾ. ಲೋಹಿತ ನಾಯ್ಕರ್, ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕ ಹಿಂದುಳಿಯಲು ಈ ಭಾಗದ ಆಡಳಿತಗಾರರೇ ನೇರ ಕಾರಣ. ಪ್ರಮುಖವಾಗಿ ಇಲ್ಲಿಯ ಜನರ ಮನಸ್ಥಿತಿ ಹಿನ್ನೆಲೆಯಲ್ಲಿಯೇ ಈ ಊರಿನ ಅಭಿವೃದ್ಧಿ ನಿಂತಿದೆ. ಪ್ರಶ್ನೆ ಕೇಳುವ, ತಮಗೆ ಬೇಕಾದ ಸೌಲಭ್ಯ ಪಡೆಯುವ ಧೈರ್ಯ ಇಲ್ಲದ ಕಾರಣ ನಮ್ಮ ಪ್ರದೇಶ ಹಿಂದೆ ಬಿದ್ದಿದೆ. ದಕ್ಷಿಣ ಹಾಗೂ ಉತ್ತರ ಕರ್ನಾಟಕಕ್ಕೆ ಈ ವರೆಗೆ ಹರಿದು ಬಂದ ಅನುದಾನದ ಲೆಕ್ಕ ಗಮನಿಸಿದರೆ ತುಂಬಾ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಸಂಘವು ಹಮ್ಮಿಕೊಂಡಿರುವ ಚಿಂತನಾ ಗೋಷ್ಠಿ ಈ ಭಾಗದ ಜನಪ್ರತಿನಿಧಿಗಳನ್ನು ಎಚ್ಚರಿಸಲಿ ಎಂದರು.ಶಾಪಗ್ರಸ್ತರು ನಾವು:
ಸಮಾವೇಶ ಉದ್ಘಾಟಿಸಿದ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಡತನ, ಸಾಕ್ಷರತೆ, ಆರೋಗ್ಯ, ಕೈಗಾರಿಕೆ, ನೀರಾವರಿ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಪ್ರದೇಶ ಹಿಂದಿದೆ. ಅದರಲ್ಲೂ ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ ಜಿಲ್ಲೆಗಳು ಶಾಪಗ್ರಸ್ತವಾಗಿವೆ. ರಾಮನಗರ, ಬಿಡದಿ, ಮೈಸೂರು ಅಂತಹ ದಕ್ಷಿಣದ ಜಿಲ್ಲೆಗೆ ಹೋಲಿಸಿದರೆ ಉತ್ತರದ ಜಿಲ್ಲೆಗಳು ತೀರಾ ಬಡವಾಗಿವೆ. ಈ ನಿಟ್ಟಿನಲ್ಲಿ ಸಂಘವು ಆಯೋಜಿಸಿರುವ ಈ ಚಿಂತನಾ ಗೋಷ್ಠಿಯ ಅಂಶಗಳನ್ನು ನಾವು ಅಧಿವೇಶನದಲ್ಲಿ ಚರ್ಚಿಸಲು ಬದ್ಧರಾಗಿದ್ದೇವೆ ಎಂದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು.ವಿಷಯಗಳ ವಿಸ್ತರಣೆ:
ಮೂಲಭೂತ ಸೌಕರ್ಯ ಕುರಿತು ಡಾ. ಸಿದ್ಧನಗೌಡ ಪಾಟೀಲ, ಮಾನವಾಭಿವೃದ್ಧಿ ಕುರಿತು ಅಭಿವೃದ್ಧಿ ಚಿಂತಕ ಡಾ. ಟಿ.ಆರ್. ಚಂದ್ರಶೇಖರ, ಪ್ರಾದೇಶಿಕ ಹಿಂದುಳಿಯುವಿಕೆ ಮತ್ತು ಅಭಿವೃದ್ಧಿ ಮಾದರಿ-ಪ್ರಾದೇಶಿಕ ತಾರತಮ್ಯ ಅಧ್ಯಯನ ವರದಿಗಳ ಸಮಸ್ಯೆಗಳ ಕುರಿತು ಸಾಮಾಜಿಕ ಚಿಂತಕ ಶಿವಸುಂದರ ಮೊದಲ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರೆ, ಮಧ್ಯಾಹ್ನದ ನಂತರ ವಾಲ್ಮಿ ವಿಶ್ರಾಂತ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಕೃಷಿ ಹಾಗೂ ನೀರಾವರಿ, ಸ್ತ್ರೀ ಸಬಲೀಕರಣ ಕುರಿತು ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಶಿಕ್ಷಣ ಮತ್ತು ಸಂಸ್ಕೃತಿ, ಡಾ. ಸಂಜೀವ ಕುಲಕರ್ಣಿ ಅವರು ಆರೋಗ್ಯ ಸೇವೆ ಹಾಗೂ ಆಡಳಿತ ಕ್ಷೇತ್ರದ ಕುರಿತು ಹೋರಾಟಗಾರ ಬಿ.ಡಿ. ಹಿರೇಮಠ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳು ಕುರಿತು ಅಂಕಿ ಸಮೇತ ಪ್ರತಿಪಾದನೆ ಮಾಡಿದರು.ಅನ್ಯಾಯದ ಕ್ರೂಡೀಕರಣ:
ಅಂತಿಮವಾಗಿ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಇಡೀ ಚಿಂತನಾಗೋಷ್ಠಿ ಕ್ರೂಡೀಕರಿಸಿ ಮಾತನಾಡಿ, ಈಗಲೂ ಕರ್ನಾಟಕದ ಜೀವ ನದಿ ಕಾವೇರಿ. ಅದರ ನೀರಿನ ಮಟ್ಟ 218 ಟಿಎಂಸಿ ಇದ್ದರೆ, ನಮ್ಮ ಕೃಷ್ಣೆಯ ನೀರಿನ ಮಟ್ಟ 760 ಟಿಎಂಸಿ ಇದೆ. ಮೂರು ಪಟ್ಟು ದೊಡ್ಡದಿದ್ದರೂ 1964ರಲ್ಲಿ ಲಾಲ್ ಬಹುದ್ದೂರ ಶಾಸ್ತ್ರಿ ಅವರ ಹಾಕಿದ ಅಡಿಗಲ್ಲು ನಂತರದ ಕೃಷ್ಣಾ ಮೇಲ್ದಂಡೆ ಕಾರ್ಯ ಪೂರ್ಣಗೊಳ್ಳುತ್ತಿಲ್ಲ. ಇಷ್ಟೊಂದು ಮಲತಾಯಿ ಧೋರಣೆ ಇದೆ. ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದ್ದು, ನಾಡಪ್ರಭು ಆದರು. ಆದರೆ, ಇಡೀ ಕನ್ನಡ ನಾಡು ಕಟ್ಟಿದ ಆಲೂರು ವೆಂಕಟರಾವ್, ಸಿದ್ದಪ್ಪ ಕಂಬಳಿ ಅಂತಹ ಇಲ್ಲಿಯ ಹತ್ತಾರು ಹೋರಾಟಗಾರರು ಇನ್ನೂ ನಗರಕ್ಕೂ ಪರಿಚಯವಾಗಿಲ್ಲ. ನಮ್ಮವರನ್ನು ಸ್ಮರಿಸುವ, ಬೆಳೆಸುವ ಚಿಂತನೆ ಇಲ್ಲಿಯ ಜನರಿಗಿಲ್ಲ. ಉತ್ತರ ಕರ್ನಾಟಕ ಹಿಂದುಳಿಯಲು ದಕ್ಷಿಣ ಕರ್ನಾಟಕ ಅಲ್ಲವೇ ಅಲ್ಲ. ನಾವೇ ಕಾರಣ ಎಂದರು.ಅಧಿವೇಶನದಲ್ಲಿ ಚರ್ಚೆ:
ಸಂಘವು ಒಟ್ಟು ಏಳು ವಿಷಯಗಳಲ್ಲಿ ಚರ್ಚೆ ನಡೆಸಿದ್ದು, ವಿಶೇಷವಾಗಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಕೊರತೆ ನಿವಾರಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕು ಹಾಗೂ ಇಲ್ಲಿ ಬಂದ ಚಿಂತನೆಗಳ ಕ್ರೂಡೀಕರಿಸಿ ಪ್ರಾರಂಭದಲ್ಲಿ ಸರ್ಕಾರಕ್ಕೆ ಮನವಿ, ನಂತರ ಒತ್ತಾಯ, ಪ್ರತಿಭಟನೆ ಮೂಲಕ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದ ಅವರು, ಮಳೆಗಾಲದ ಅಧಿವೇಶನದಲ್ಲಿ ಈ ಸಭೆಯ ಕ್ರೂಡೀಕೃತ ಮಾಹಿತಿಯನ್ನು ಈ ಭಾಗದ ಜನಪ್ರತಿನಿಧಿಗಳು ಚರ್ಚೆ ಮಾಡಲಿ ಎಂಬ ಆಶಯವೂ ನಮ್ಮದಾಗಿದೆ ಎಂದರು. ಇಲ್ಲಿಂದ ಹೋಗುವ ನಾಲ್ಕು ಟಿಎಂಸಿ ಬೆಣ್ಣೆಹಳ್ಳದ ನೀರನ್ನು ವ್ಯರ್ಥವಾಗಿ ಹರಿಯಲು ಬಿಟ್ಟು ದೂರದ ಮಹಾದಾಯಿಗೆ ಹೋರಾಟ ಮಾಡುತ್ತಿರುವುದು ಯಾವ ನ್ಯಾಯ? ಮಹಾದಾಯಿ ನಮ್ಮ ನಾಡಿಗೆ ಅಗತ್ಯವಾಗಿ ಬೇಕು. ಆದರೆ, ಸದ್ಯ ಲಭ್ಯ ಇರುವ ನೀರನ್ನು ಏತಕ್ಕೆ ಬಳಸಿಕೊಳ್ಳುತ್ತಿಲ್ಲ ಎಂಬ ಚಿಂತನೆ ನಮಗೇಕೆ ಇಲ್ಲ? ಉತ್ತರ ಕರ್ನಾಟಕ ನಮಗೆ ಭಾವನಾತ್ಮಕ ವಿಷಯ. ಭಾರತದಲ್ಲಿ ದಕ್ಷಿಣದವರಾಗಿ, ರಾಜ್ಯದಲ್ಲಿ ಉತ್ತರದವರಾಗಿ ಐದಾರು ದಶಕಗಳಲ್ಲಿ ಹೈಕೋರ್ಟ್ ಪೀಠ, ನೈಋತ್ಯ ರೈಲ್ವೆ ವಲಯ ಹೊರತುಪಡಿಸಿ ಉದ್ಯೋಗ, ಶಿಕ್ಷಣ, ನೀರಾವರಿ, ಕೈಗಾರಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಳೆದುಕೊಂಡಿದ್ದೇವೆ.ಬಸವಪ್ರಭು ಹೊಸಕೇರಿ, ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು