ರಜಾದಿನವೂ ತಪ್ಪದ ಮೈಕ್ರೋ ಫೈನಾನ್ಸ್‌ ಕಿರುಕುಳ

| Published : Jan 28 2025, 12:45 AM IST

ಸಾರಾಂಶ

ರಜಾದಿನವು ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಸಾಲ ವಸೂಲಿಗೆ ಬಂದಿರುವ ಘಟನೆ ಜ.26 ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ರಜಾದಿನವು ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಸಾಲ ವಸೂಲಿಗೆ ಬಂದಿರುವ ಘಟನೆ ಜ.26 ಭಾನುವಾರ ನಡೆದಿದೆ.

ನಗರದ ಶಿವಾಜಿ ವೃತ್ತದ ಹತ್ತಿರದ ಅನ್ನಪೂರ್ಣಾ ಸಬಕಾಳೆ ಎಂಬುವರ ಮನೆಗೆ ಆಗಮಿಸಿದ ಸಿಬ್ಬಂದಿ ಸಾಲ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಮನೆಯಲ್ಲಿ ಗಂಡಸರು ಇಲ್ಲದ ಸಮಯದಲ್ಲಿ ಬಂದು ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಸೋಮವಾರ ಸುದ್ದಿಗಾರರಿಗೆ ರಫೀಕ್‌ ಬಾರಿಗಡ್ಡಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಸಭೆ ನಡೆಸಿ, ಸುಗ್ರೀವಾಜ್ಞೆ ಹೊರಡಿಸಿದರೂ ಇಲ್ಲಿಯ ಫೈನಾನ್ಸ್‌ ಕಂಪನಿ ದಬ್ಬಾಳಿಕೆ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವಚೇತನ, ಬಿಎಸ್‌ಎಸ್‌ ಎಂಬ ಹೆಸರಿನ ಕಂಪನಿ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಾಲ ತುಂಬಲು ಅವಕಾಶ ಕೊಡಬೇಕು. ಆರ್‌ಬಿಐನ ನಿಯಮದಂತೆ ಬ್ಯಾಂಕ್‌ನ ಬಡ್ಡಿ ವಸೂಲಿ ಮಾಡಬೇಕು. ಸಾಲ ಮರುಪಾವತಿಸದವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಅದನ್ನು ಬಿಟ್ಟು ಸರ್ಕಾರದ ಕ್ರಮವನ್ನು ಲೆಕ್ಕಿಸದೇ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲ ವಸೂಲಾತಿ ನೆಪದಲ್ಲಿ ದಬ್ಬಾಳಿಕೆ ನಡೆಸುತ್ತಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಮೈಕ್ರೋ ಫೈನಾನ್ಸ್‌ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಸಂತ್ರಸ್ತ ಮಹಿಳೆ ರುಕ್ಸಾನಾ ಪಟೇಲ ಮಾತನಾಡಿ, ಮುಖ್ಯಮಂತ್ರಿಗಳು ಮಹಿಳೆಯರ ಬೆಂಬಲಕ್ಕೆ ನಿಲ್ಲಬೇಕು. ಫೈನಾನ್ಸ್‌ ಕಂಪನಿಗಳ ಕಿರುಕುಳ ತಪ್ಪಿಸಬೇಕೆಂದರು. ನ್ಯಾಯವಾದಿ ಶಶಿಕಾಂತ ದೊಡಮನಿ ಮಾತನಾಡಿ, ಸಾಲ ಮರುಪಾವತಿಗೆ ಅವಕಾಶ ಕೊಡಬೇಕು. ನಿಯಮ ಮೀರಿ ಬಡ್ಡಿ ವಸೂಲಿ ಮಾಡಿರುವ ಕಂಪನಿಗಳ ಲೆಕ್ಕಪತ್ರಗಳನ್ನು ಪರಿಶೀಲಿಸಲು ಆದೇಶಿಸಬೇಕು ಎಂದು ಮನವಿ ಮಾಡಿದರು.